ಹೊನ್ನಾಳಿ: ಪರಿಸರ ಸಂರಕ್ಷಣೆ ಹಾಗೂ ಕಾವೇರಿ ಉಳಿಸಿ ಎಂಬ ಜಾಗೃತಿ ಸಂದೇಶದೊಂದಿಗೆ ಪಟ್ಟಣದ ಯುವಕ ಎಸ್.ವಿರೂಪಾಕ್ಷ (23) ದಕ್ಷಿಣ ಭಾರತ ಸೈಕಲ್ ಯಾತ್ರೆ ಕೈಗೊಂಡು ಸಾಧನೆ ಮಾಡಿದ್ದಾರೆ.
ಶಿವಮೊಗ್ಗ ನಗರದ ಬಾಪೂಜಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ನಾಲ್ಕನೇ ವರ್ಷದ ಪದವಿಯಲ್ಲಿ ಅಭ್ಯಾಸ ಮಾಡುತ್ತಿರುವ ಈ ಯುವಕ ಶಿವಮೊಗ್ಗ ನಗರದಿಂದ ಜ.15ರಂದು ಪ್ರಯಾಣ ಆರಂಭಿಸಿ 27ಕ್ಕೆ ಕನ್ಯಾಕುಮಾರಿ ತಲುಪಿ ಈಗ ಮರಳಿದ್ದಾರೆ.
ದಾರಿಯುದ್ದಕ್ಕೂ ಪ್ಲಾಸ್ಟಿಕ್ ಬಳಸದಿರಿ, ಪ್ಲಾಸ್ಟಿಕ್ ಪರಿಸರಕ್ಕೆ ಹಾನಿ ಮಾಡುತ್ತದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಬಿಟ್ಟು ಹೋಗಲು ನಾವೆಲ್ಲಾ ಪ್ರಯತ್ನಿಸೋಣ ಎಂದು ಜಾಗೃತಿ ಮೂಡಿಸಿದ ಯುವಕ, ಜೀವಜಲ ನೀರಿನ ಮಹತ್ವವನ್ನು ಸಾರಿ ಹೇಳಿದ್ದಾರೆ.
ಪ್ರತಿದಿನ ಬೆಳಗ್ಗೆ 6ಕ್ಕೆ ಪ್ರಾರಂಭವಾದ ಸೈಕಲ್ ತುಳಿತ ಸಂಜೆ 6ಕ್ಕೆ ಮುಕ್ತಾಯವಾಗುತ್ತಿತ್ತು. 6ಕ್ಕೆ ಯಾವ ಊರು ಸಿಗುತ್ತಿತ್ತೋ ಅಲ್ಲಿಯೇ ತಂಗಿ ಪುನಃ ಬೆಳಗ್ಗೆ ಪ್ರಯಾಣಿಸುತ್ತಿದ್ದೆ. ದಿನಾಲು 120ರಿಂದ 150 ಕಿ.ಮೀಕ್ರಮಿಸುತ್ತಿದ್ದೆ ಎಂದು ವಿರೂಪಾಕ್ಷ ಹೇಳುತ್ತಾನೆ.
ವಿರೂಪಾಕ್ಷ ಶಿವಮೊಗ್ಗ, ಮಂಗಳೂರು, ಕಾಸರಗೊಡು, ಕ್ಯಾಲಿಕಟ್, ತ್ರಿಶೂರು, ಪಾಲಕ್ಕಾಡ್, ಕೊಯಂಬತ್ತೂರು, ಮಧುರೈ, ರಾಮೇಶ್ವರ ಮೂಲಕ ಕನ್ಯಾಕುಮಾರಿ ತಲುಪಿದ್ದಾರೆ. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ನಾಗರಿಕರು ನನ್ನನ್ನು ಸನ್ಮಾನಿಸಿ ಮುಂದಿನ ಊರಿಗೆ ಬೀಳ್ಕೊಡುತ್ತಿದ್ದರು.
ಸೈಕಲ್ ಮೇಲೆ ಪ್ರಯಾಣ ಮಾಡುವಾಗ ಎಲ್ಲಿಯೂ ತೊಂದರೆಯಾಗಲಿಲ್ಲ. ತಂಗಿದ ಸ್ಥಳದಲ್ಲಿ ಪರಿಸರದ ಬಗ್ಗೆ ಜಾಗೃತಿ ಮಾಡುತ್ತಿದೆ ಎನ್ನುತ್ತಾರೆ ವಿರೂಪಕ್ಷ. ಮುಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ಪ್ರಯಾಣಿಸಿ ಸೈಕಲ್ ಮೇಲೆ ಪ್ರಯಾಣಿಸಿ ಜಾಗೃತಿ ಕಾರ್ಯಕ್ರಮ ಮಾಡುತ್ತೇನೆ ಎಂದು ಅವರು ಹೇಳಿದರು.
ಸೈಕಲ್ ಪ್ರಯಾಣಕ್ಕೆ ಶಿವಮೊಗ್ಗ ನಗರದ ಡಾ| ನಂಜಪ್ಪ, ಸ್ಪಂದನಾ ಹೆಲ್ತ್ ಫೌಂಡೇಷನ್ ಹಾಗೂ ಗೀತಾ ಪಂಡಿತ್ ಗ್ರೂಪ್‌ನವರು ಸಹಾಯ ಮಾಡಿದರು ಎಂದು ಯುವಕ ಸ್ಮರಿಸುತ್ತಾರೆ.