Advertisement

ರಸ್ತೆಗೆ ಬಂತು ಫಸಲು ಹಸನು ಮಾಡುವ ಕಣ ಸಂಸ್ಕೃತಿ!

11:34 AM Dec 25, 2019 | Naveen |

„ಎಂ.ಪಿ.ಎಂ. ವಿಜಯಾನಂದಸ್ವಾಮಿ
ಹೊನ್ನಾಳಿ:
ಒಂದು ಕಾಲದಲ್ಲಿ ರೈತರು ಜಮೀನಿನಲ್ಲಿ ಬೆಳೆದ ಫಸಲನ್ನು ಹಸನು ಮಾಡುವುದನ್ನೇ ಹಬ್ಬದ ರೂಪದಲ್ಲಿ ಆಚರಣೆ ಮಾಡಿ ಜೋಳ, ರಾಗಿ, ಭತ್ತ, ಕಾಳು ಕಡಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು.

Advertisement

ಗ್ರಾಮಗಳ ಹೊರ ವಲಯದಲ್ಲಿರುವ ತಮ್ಮ ವೃತ್ತಾಕಾರದ ಕಣಗಳನ್ನು ಸ್ವಚ್ಛ ಮಾಡಿ, ಕಣದ ಮಧ್ಯೆ ಮರದ ಗೂಟ ನೆಟ್ಟು, ಸೆಗಣಿಯಿಂದ ಸಾರಿಸಿ, ಕಣದ ಪೂಜೆ ಮಾಡಿ, ಜೋಳದ ತೆನೆ ಕೊಯ್ದು ಹಂತಿ(ಕಲ್ಲಿನ ದುಂಡಿ) ಹೊಡೆಯುವುದರ ಮೂಲಕ ತೆನೆಯ ಕಾಳುಗಳನ್ನು ಬೇರ್ಪಡಿಸಿ ನಂತರ ಗಾಳಿಗೆ ತೂರಿ ಜೋಳದ ಕಾಳುಗಳನ್ನು ಸ್ವಚ್ಛ ಮಾಡಿ ಗ್ರಾಮದಲ್ಲಿರುವ ಹಗೇವು(ಭೂಮಿ ಒಳಭಾಗದ ಸಂಗ್ರಹಗಾರ)ನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಇದೇ ರೀತಿ ಬೇರೆ ಬೇರೆ ಬೆಳೆಗಳನ್ನು ಹಸನು ಮಾಡುವ ಕ್ರಿಯೆ ಮಾಡಲಾಗುತ್ತಿತ್ತು. ಕಾಲ ಬದಲಾದಂತೆ ರೈತನ ಬದುಕು ಬದಲಾಗುತ್ತಾ ಹೋಯಿತು. ಇಂದು ರೈತ ಬೆಳೆದ ಎಲ್ಲ ಬೆಳೆಗಳನ್ನು ತಂದು ರಸ್ತೆಗೆ ಹಾಕುತ್ತಾನೆ. ರಸ್ತೆಯಲ್ಲಿ ಓಡಾಡುವ ವಾಹನಗಳು ಫಸಲಿನ ಕಾಳುಗಳನ್ನು ಬೇರ್ಪಡಿಸುತ್ತವೆ.

ರಸ್ತೆ ಬದಿಯಲ್ಲಿಯೇ ತೆನೆಯಿಂದ ಬೇರ್ಪಟ್ಟ ಕಾಳುಗಳನ್ನು ತೂರುವ ಕಾರ್ಯ ಮಾಡಿಕೊಂಡು ಚೀಲದಲ್ಲಿ ಕಾಳುಗಳನ್ನು ತುಂಬಿಕೊಂಡು ಮನೆಗೆ ಬರುತ್ತಾನೆ. ಇದರಿಂದ ಕಣ ಸ್ವಚ್ಛ ಮಾಡುವ, ಸೆಗಣಿ ಸಾರುವ, ಎತ್ತುಗಳಿಂದ ಹಂತಿ ಹೊಡೆಯುವ ಕೆಲಸ ಕಾರ್ಯಗಳು ತಪ್ಪುತ್ತವೆ ಎನ್ನುವ ಜಾಣ್ಮೆ ರೈತನದಾಗಿದೆ. ಫಸಲು ಹಸನು ಮಾಡುವ ಕಣ ಸಂಸ್ಕೃತಿ ಮಾಯವಾಗಿ ರಸ್ತೆಯಲ್ಲಿ ಒಕ್ಕಲುತನ ಮಾಡುವ ಸಂಸ್ಕೃತಿ ಬಂದ ಮೇಲೆ ಅಪಘಾತಗಳು ಹೆಚ್ಚಾಗಿವೆ.

ಜೋಳ, ರಾಗಿ, ಭತ್ತ, ತೊಗರಿ ಸೇರಿದಂತೆ ಇತರ ಬೆಳೆಗಳನ್ನು ರೈತರು ತಂದು ರಸ್ತೆಯುದ್ದಕ್ಕೂ ಹಾಕುವುದರಿಂದ ವಾಹನ ಚಾಲಕರು ಕೆಲವೊಮ್ಮೆ ಫಸಲಿನ ಮೇಲೆ ವಾಹನಗಳನ್ನು ಓಡಿಸದೆ ರಸ್ತೆ ಬಿಟ್ಟು ಸಂಚರಿಸುತ್ತಾರೆ. ಇದರಿಂದ ವಾಹನ ಪಲ್ಟಿಯಾಗಿ ದೊಡ್ಡ ಅಪಘಾತಗಳು ಸಂಭವಿಸಿವೆ.

ರೈತರು ರಸ್ತೆಯಲ್ಲಿ ನಿಂತು ಕೆಲಸ ಮಾಡುವ ಸಂದರ್ಭದಲ್ಲಿ ಅಪಘಾತಕ್ಕೀಡಾದ ಸಂದರ್ಭಗಳು ಉಂಟು. ಈಚೆಗೆ ಸಿಸಿ ರಸ್ತೆಗಳು ಗ್ರಾಮಗಳಲ್ಲಿ ನಿರ್ಮಾಣವಾಗಿವೆ. ಕಳಪೆ ಸಿಸಿ ರಸ್ತೆ ಮೇಲೆ ಬೆಳೆ ಹಸನ ಮಾಡುವ ಕ್ರಿಯೆಯಲ್ಲಿ ಜೋಳ, ಭತ್ತ, ತೊಗರಿ, ರಾಗಿಯೊಂದಿಗೆ ಧೂಳು, ಸಿಮೆಂಟಿನ ಹಾಗೂ ಕಲ್ಲಿನ ಚೂರುಗಳು ಸೇರಿಕೊಂಡು ಆಹಾರ ಪದಾರ್ಥಗಳು ಮತ್ತಷ್ಟೂ ಮಲೀನಗೊಳ್ಳುತ್ತವೆ. ರಸ್ತೆ ಕಣ ಸಂಸ್ಕೃತಿಗೆ ಇತಿಶ್ರೀ ಹಾಡಬೇಕಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವುದು ಒಳಿತು ಎಂದು ಹಿರಿಯ ರೈತರು ಹೇಳುತ್ತಾರೆ.

Advertisement

ಇತ್ತೀಚೆಗೆ ಕೃಷಿ ಕುಟುಂಬಗಳು ಒಡೆದು ಅವಿಭಕ್ತ ಕುಟುಂಬಗಳಾಗ ಕಣಗಳಲ್ಲಿ ಕೂಡ ಮನೆಗಳಾಗಿವೆ. ಮನೆಯಲ್ಲಿ ಧಾನ್ಯಗಳ ಸಂಗ್ರಹಕ್ಕೆ ಕೂಡ ಸ್ಥಳಾವಕಾಶ ಇಲ್ಲದೇ ರಸ್ತೆಯಲ್ಲಿಯೇ ಹಸನು ಮಾಡಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ.
ಸುರೇಶ್‌,
ಸಹಾಯಕ ಕೃಷಿ ನಿರ್ದೇಶಕರು, ಹೊನ್ನಾಳಿ

ರಸ್ತೆಯಲ್ಲಿ ಒಕ್ಕಲುತನ ಮಾಡುವುದರಿಂದ ಅವಘಡಗಳು ಜರುಗಿವೆ. ಕಾನೂನು ಪ್ರಕಾರ ರಸ್ತೆಯಲ್ಲಿ ಕೃಷಿ ಕಾರ್ಯ ಮಾಡುವ ಹಾಗಿಲ್ಲ. ದೂರು ಬಂದರೆ ಕ್ರಮ ವಹಿಸುತ್ತೇವೆ.
ದೇವರಾಜ್‌, ಸಿಪಿಐ

Advertisement

Udayavani is now on Telegram. Click here to join our channel and stay updated with the latest news.

Next