Advertisement

ಸಹಾಯ ಮಾಡುವುದು ಎಲ್ಲರ ಕರ್ತವ್ಯ

03:30 PM Aug 19, 2019 | Naveen |

ಹೊನ್ನಾಳಿ: ನೆರೆ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡಬೇಕೆಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದರು.

Advertisement

ಗೊಲ್ಲರಹಳ್ಳಿ ಗ್ರಾಮದ ವತಿಯಿಂದ ಭಾನುವಾರ ಅಕ್ಕಿ, ಬೇಳೆ, ಹೊಸ ಬಟ್ಟೆಗಳು ಹಾಗೂ ನಗದು ದೇಣಿಗೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯರಿಗೆ ಕಷ್ಟಗಳು ಬರುವುದು ಸಹಜ. ಉತ್ತರ ಕರ್ನಾಟಕದ ನಮ್ಮ ಸಹೋದರ, ಸಹೋದರಿಯರು ನೆರೆ ಹಾವಳಿಯಿಂದ ನಲುಗಿ ಹೋಗಿದ್ದಾರೆ. ನಲುಗಿದ ಜನತೆಗೆ ಸಹಾಯ ಹಸ್ತ ನೀಡುವುದು ನಮ್ಮ ಕರ್ತವ್ಯವೂ ಹೌದು ಎಂದು ಹೇಳಿದರು.

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಜನತೆ ನೆರೆ ಸಂತ್ರಸ್ತರಿಗೆ ಹೇರಳವಾಗಿ ದೇಣಿಗೆ ನೀಡುವುದರ ಮೂಲಕ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ದಾನ, ದೇಣಿಗೆ ನೀಡಿ ನೆರೆ ಸಂತ್ರಸ್ತರ ಕುಟುಂಬಕ್ಕೆ ಅಳಿಲು ಸೇವೆ ಮಾಡಿ ಪುಣ್ಯ ಕಟ್ಟಿಕೊಳ್ಳುವುದು ಮಾನವ ಧರ್ಮ ಎಂದು ಹೇಳಿದರು.

2018ರ ಚುನಾವಣೆಯಲ್ಲಿ ಜನಾಭಿಪ್ರಾಯ ಬಿಜೆಪಿ ಕಡೆಗೆ ಇತ್ತು. ಕುತಂತ್ರ ಮಾಡಿ ಸಮ್ಮಿಶ್ರ ಸರ್ಕಾರ ರಚಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ತಂತ್ರಗಳನ್ನು ರೂಪಿಸುತ್ತಾ ಜನ ವಿರೋಧಿ ಸರ್ಕಾರ ಮಾಡಿದರು ಎಂದರು.

Advertisement

ಕಾಂಗ್ರೆಸ್‌ನ ಮುಖಂಡರೇ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಿದ್ದರು. ಎಲ್ಲರ ಅಭಿಪ್ರಾಯದಂತೆ ಸಿಎಂ ಯಡಿಯೂರಪ್ಪ ಸಿಬಿಐಗೆ ತನಿಖೆ ವಹಿಸಿದ್ದಾರೆ. ಈ ಕ್ರಮವನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಗೊಲ್ಲರಹಳ್ಳಿ ಗ್ರಾಮದಿಂದ ಸಂಗ್ರಹವಾದ 20 ಕ್ವಿಂಟಾಲ್ ಅಕ್ಕಿ, 1 ಕ್ವಿಂಟಾಲ್ ಬೇಳೆ, 180 ಸೀರೆ, ಇತರ ಬಟ್ಟೆಗಳು ಹಾಗೂ 21 ಸಾವಿರ ನಗದನ್ನು ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ಗೆ ಹಸ್ತಾಂತರಿಸಲಾಯಿತು.

ಇದೇ ಸಂದರ್ಭದಲ್ಲಿ ಬೆನಕಹಳ್ಳಿ ಗ್ರಾಮದಿಂದ ಸಂಗ್ರಹವಾದ 75 ಸಾವಿರ ರೂ. ನಗದನ್ನು ಗ್ರಾ.ಪಂ ಸದಸ್ಯ ಮಹೇಂದ್ರಗೌಡ ತಹಶೀಲ್ದಾರ್‌ಗೆ ನೀಡಿದರು.

ಜಿ.ಪಂ ಸುರೇಂದ್ರನಾಯ್ಕ, ಗ್ರಾಮದ ಮುಖಂಡರಾದ ಗೋವಿಂದಸ್ವಾಮಿ, ಮುಕುಂದಪ್ಪ, ಎ.ಕೆ. ಕರಿಬಸಪ್ಪ, ಹರೀಶ್‌, ರುದ್ರಪ್ಪ, ಪ್ರಶಾಂತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next