ಕೊವ್ಲೂನ್ (ಹಾಂಕಾಂಗ್): ಇತ್ತೀಚೆಗಷ್ಟೇ “ಇಂಡೋನೇಷ್ಯಾ ಮಾಸ್ಟರ್’ ಪ್ರಶಸ್ತಿ ಗೆದ್ದ ಭಾರತದ ಯುವ ಶಟ್ಲರ್ ಕಿರಣ್ ಜಾರ್ಜ್ “ಹಾಂಕಾಂಗ್ ಓಪನ್’ ಪಂದ್ಯಾವಳಿಯಲ್ಲಿ ನಿರಾಸೆ ಅನುಭವಿಸಿದ್ದಾರೆ. ಇಲ್ಲಿ ಅವರು ಪ್ರಧಾನ ಸುತ್ತಿಗೇರಲು ವಿಫಲರಾದರು.
ಮಂಗಳವಾರ ನಡೆದ ದ್ವಿತೀಯ ಸುತ್ತಿನ ಅರ್ಹತಾ ಪಂದ್ಯದಲ್ಲಿ ಕಿರಣ್ ಜಾರ್ಜ್ ಅವರನ್ನು ಮಲೇಷ್ಯಾದ ಜುನ್ ಹಾವೊ ಲಿಯೋಂಗ್ 22-20, 14-21, 21-14 ಅಂತರದಿಂದ ಪರಾಭವಗೊಳಿಸಿದರು. ಮೊದಲ ಸುತ್ತಿನಲ್ಲಿ ಕಿರಣ್ ಚೈನೀಸ್ ತೈಪೆಯ ಯು ಜೆನ್ ಚಿ ಅವರನ್ನು 21-15, 21-17ರಿಂದ ಹಿಮ್ಮೆಟ್ಟಿಸಿದ್ದರು.
ಇದಕ್ಕೂ ಮೊದಲು ಮಿಥುನ್ ಮಂಜುನಾಥ್ ಮತ್ತು ರವಿ ಕೂಡ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸಿ ನಿರ್ಗಮಿಸಿದ್ದರು.
ಮಾಳವಿಕಾ ಮುನ್ನಡೆ: ವನಿತಾ ವಿಭಾಗದಲ್ಲಿ ಮಾಳವಿಕಾ ಬನ್ಸೋಡ್ ಮುಖ್ಯ ಸುತ್ತು ತಲುಪಿದ್ದಾರೆ. ಥಾಯ್ಲೆಂಡ್ ಎದುರಾಳಿ ಪಿಚಮೋನ್ ಒಪಾತ್ನಿಪುತ್ ಪಂದ್ಯದ ನಡುವೆ ಗಾಯಾಳಾಗಿ ಹೊರನಡೆದ ಕಾರಣ ಮಾಳವಿಕಾ ಮುನ್ನಡೆದರು.
ವನಿತಾ ಡಬಲ್ಸ್‌ನಲ್ಲಿ ತ್ರಿಸಾ ಜಾಲಿ-ಗಾಯತ್ರಿ ಗೋಪಿಚಂದ್ ದ್ವಿತೀಯ ಸುತ್ತು ತಲುಪಿದ್ದಾರೆ. ಇವರು ನೆದರ್ಲೆಂಡ್ಸ್‌ನ ದೆಬೊರ ಜಿಲ್-ಶೆರಿಲ್ ಸೀನೆನ್ ವಿರುದ್ಧ 21-15, 16-21, 21-16 ಅಂತರದ ಗೆಲುವು ಸಾಧಿಸಿದರು.