Advertisement

ಬಾಡಿಗೆ ಮನೆ ಅಡ್ವಾನ್ಸ್‌ಗಾಗಿ ಹನಿಟ್ರ್ಯಾಪ್‌!

12:11 PM Aug 12, 2018 | Team Udayavani |

ಬೆಂಗಳೂರು: ಬಾಡಿಗೆ ಮನೆಯ ಮುಂಗಡ ಹಣ ಪಾವತಿಸಲು ಹನಿಟ್ರ್ಯಾಪ್‌ ಮಾಡಿದ ಕೃತ್ಯ ಸೋಲದೇವನಹಳ್ಳಿಯಲ್ಲಿ ನಡೆದಿದೆ. ತುರುವೇಕರೆಯ ದಯಾನಂದ್‌ ಎಂಬುವರು ನೀಡಿದ್ದ ದೂರಿನ ಮೇರೆಗೆ ಹನಿಟ್ರ್ಯಾಪ್‌ ಮಾಡುತ್ತಿದ್ದ ತುರುವೇಕೆರೆಯ ಅರ್ಪಿತಾ, ಈಕೆಯ ಪ್ರಿಯಕರ ಪವನ್‌ ಕುಮಾರ್‌ ಹಾಗೂ ಮಡಿವಾಳ ನಿವಾಸಿ ಆಟೋ ಚಾಲಕ ಸಿದ್ಧಾರ್ಥ ಎಂಬುವವರನ್ನು ಬಂಧಿಸಲಾಗಿದೆ.

Advertisement

ಫೇಸ್‌ಬುಕ್‌ ಮೂಲಕ ಹಣವಂತರನ್ನು ಪರಿಚಯಿಸಿಕೊಂಡು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ ಅರ್ಪಿತಾ, ಸ್ನೇಹಿತರ ಜತೆ ಸೇರಿ ಸುಲಿಗೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಹದಿನೇಳನೇ ವಯಸ್ಸಿನಲ್ಲೇ ಮದುವೆಯಾಗಿದ್ದ ಅರ್ಪಿತಾ, ಪತಿ ಮತ್ತು ಇಬ್ಬರು ಮಕ್ಕಳನ್ನು ತೊರೆದು ಕೆಲ ದಿನಗಳ ಕಾಲ ತುಮಕೂರಿನಲ್ಲಿ ವಾಸವಾಗಿದ್ದಳು.

ಈ ವೇಳೆ ವಾರಪತ್ರಿಕೆ ಒಂದರ ಉದ್ಯೋಗಿ ಪವನ್‌ ಕುಮಾರನ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿತ್ತು. ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದ ಜೋಡಿ, ಸೋಲದೇವನಹಳ್ಳಿಯಲ್ಲಿ ಬಾಡಿಗೆ ಮನೆಗೆ ಹುಡುಕಾಟ ನಡೆಸುತ್ತಿದ್ದಾಗ ಪವನ್‌ಗೆ ಆಟೋ ಚಾಲಕ ಸಿದ್ಧಾರ್ಥನ ಪರಿಚಯವಾಗಿದೆ.

ದೂರುದಾರ ದಯಾನಂದ್‌ ತುರುವೇಕೆರೆಯಲ್ಲಿ ಸ್ಟೇಷನರಿ ಅಂಗಡಿ ಹೊಂದಿದ್ದು, ಮೊಬೈಲ್‌ಗೆ ಕರೆನ್ಸಿ ಹಾಕಿಸಲು ಅರ್ಪಿತಾ ಗಾಗ ಅವರ ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಮೊಬೈಲ್‌ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದು, ಕರೆ, ಸಂದೇಶ ಕಳುಹಿಸುತ್ತಾ ನಿರಂತರ ಸಂಪರ್ಕದಲ್ಲಿದ್ದರು.

ಮುಂಗಡ ಹಣಕ್ಕಾಗಿ ಸುಲಿಗೆ: ತಾವಿಬ್ಬರೂ ನವ ದಂಪತಿ ಎಂದು ಹೇಳಿ ಸೋಲದೇವನಹಳ್ಳಿಯಲ್ಲಿ ಮನೆ ಬಾಡಿಗೆಗೆ ಪಡೆದಿದ್ದ ಅರ್ಪಿತಾ ಮತ್ತು ಪವನ್‌, ಮನೆಯ ಅಡ್ವಾನ್ಸ್‌ ನೀಡಲು ಹಣ ಇರಲಿಲ್ಲ. ಹೀಗಾಗಿ ಮುಂಗಡ ಹಣ ಕೊಡಲು ಮನೆ ಮಾಲೀಕರಿಂದ ಕೆಲ ದಿನಗಳ ಗಡುವು ಪಡೆದಿದ್ದರು.

Advertisement

ಈ ನಡುವೆ ಬೆಂಗಳೂರಿಗೆ ಬಂದಿದ್ದ ದಯಾನಂದ್‌, ಅರ್ಪಿತಾಗೆ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿದ್ದರು. ಇದನ್ನು ತಿಳಿದ ಪವನ್‌, ಆತನನ್ನು ಮನೆಗೆ ಕರೆಸಿಕೊಂಡು, ಮನೆ ಅಡ್ವಾನ್ಸ್‌ ನೀಡಲು ಬೇಕಿರುವ ಹಣವನ್ನು ಆತನಿಂದಲೇ ಸುಲಿಗೆ ಮಾಡಲು ಸಂಚು ಹೆಣೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವ ನಿಗದಿಯಂತೆ ದಯಾನಂದ್‌ ಸೋಲದೇವನಹಳ್ಳಿಯ ಮನೆಗೆ ಹೋಗಿದ್ದಾರೆ. ಅವರನ್ನು ಒಳಗೆ ಕೂರಿಸಿ ಮನೆ ಬಾಗಿಲು ಹಾಕಿದ ಅರ್ಪಿತಾ, ಪವನ್‌ ಹಾಗೂ ಸಿದ್ಧಾರ್ಥನನ್ನು ಮನೆಗೆ ಕರೆಸಿಕೊಂಡು ದಯಾನಂದ್‌ಗೆ ಬೆದರಿಸಿ, ಅವರ ಬಳಿ ಇದ್ದ ಹಣ, ಚಿನ್ನದ ಸರ, ಉಂಗುರ ಹಾಗೂ ಬ್ಯಾಂಕ್‌ ಖಾತೆಯಲ್ಲಿದ್ದ 55 ಸಾವಿರ ಹಣ ಕಸಿದುಕೊಂಡಿದ್ದರು.

ಚಿನ್ನಾಭರಣಗಳನ್ನು ಚಿಕ್ಕನಾಯಕನಹಳ್ಳಿಯಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಪೀಠೊಪಕರಣ, ಗೇಹಬಳಕೆ ವಸ್ತು ಖರೀದಿಸಿದ್ದರು. ಮುಂದಿನ ದಿನಗಳಲ್ಲಿ ಇದೇ ರೀತಿಯ ಕೃತ್ಯಗಳನ್ನು ಎಸಗಿ ಹೆಚ್ಚು ಹಣ ಸಂಪಾದಿಸಲು ನಿರ್ಧರಿಸಿದ್ದ ಆರೋಪಿಗಳು, ಅದೇ ನಂಬಿಕೆಯಲ್ಲಿ ಬಾಡಿಗೆ ಮನೆ ಮಾಲೀಕರಿಗೆ ಮುಂಗಡ ಹಣ ಕೂಡ ಕೊಟ್ಟಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಕೃತ್ಯ: ಆರೋಪಿಗಳು ಈ ಹಿಂದೆ ಕೂಡ ತುರುವೇಕೆರೆಯ ಇಬ್ಬರು ವ್ಯಕ್ತಿಗಳನ್ನು ಇದೇ ರೀತಿ ವಂಚಿಸಿದ್ದಾರೆ ಎಂಬ ಮಾಹಿತಿಯಿದೆ. ಶೇಷಾ ಎಂಬ ವ್ಯಕ್ತಿಯ ಜತೆ ನಿರಂತರ ಸಂಪರ್ಕದಲ್ಲಿದ್ದ ಅರ್ಪಿತಾ, ಕೆಲ ತಿಂಗಳ ಹಿಂದೆ ಹೊನ್ನವಳ್ಳಿಯಲ್ಲಿ ನಡೆದ ಜಾತ್ರೆಗೆ ಆತನನ್ನು ಕರೆಸಿಕೊಂಡು, ಪವನ್‌ ಮತ್ತು ಸಿದ್ಧಾರ್ಥನ ಮೂಲಕ ಪ್ರಾಣ ಬೆದರಿಕೆ ಹಾಕಿ, 7 ಸಾವಿರ ರೂ. ಕಸಿದುಕೊಂಡಿದ್ದಳು.

“ನನ್ನ ಪತ್ನಿ ಜತೆ ಮತ್ತೆ ಚಾಟಿಂಗ್‌ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಈ ವೇಳೆ ಪವನ್‌ ಕುಮಾರ್‌ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆರೋಪಿಗಳು ಇದೇ ರೀತಿ ಮತ್ತೂಬ್ಬನನ್ನೂ ವಂಚಿಸಿದ್ದು, ವಂಚನೆಗೆ ಒಳಗಾದವರ ಪತ್ತೆಹಚ್ಚಿ ದೂರು ದಾಖಲಿಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಚೆಂದದ ಫೋಟೋ ಹಾಕಿ ಗಾಳ: ಫೇಸ್‌ಬುಕ್‌ನಲ್ಲಿ “ಅರ್ಪಿತಾ ಮಾನ್ವಿತಾ’ ಹೆಸರಿನ ಖಾತೆ ತೆರೆದಿದ್ದ ಅರ್ಪಿತಾ, ಅದರಲ್ಲಿ ಆಗಾಗ ತನ್ನ ಚೆಂದದ ಫೋಟೋಗಳನ್ನು ಹಾಕುತ್ತಿದ್ದಳು. ಈಕೆಯ ಮೈಮಾಟ ಕಂಡ ಕೆಲವರು ಲೈಕ್‌, ಕಮೆಂಟ್‌ ಮಾಡುತ್ತಿದ್ದಂತೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸುತ್ತಿದ್ದಳು.

ನಂತರ ಹಣವಂತರ ಗುರುತಿಸಿ, ಅವರೊಂದಿಗೆ ಚಾಟಿಂಗ್‌ ಮಾಡಿ, ವಾಟ್ಸ್‌ಆ್ಯಪ್‌ ನಂಬರ್‌ ಪಡೆಯುತ್ತಿದ್ದಳು. ಬಳಿಕ ಕೆಲವು ಬಾರಿ ಭೇಟಿಯಾಗಿ, ಒಮ್ಮೆ ದಿನ ನಿಗದಿ ಮಾಡಿ ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್‌ ಮಾಡುತ್ತಿದ್ದಳು. ಈ ವೇಳೆ ಮನೆಗೆ ನುದ್ದುತ್ತಿದ್ದ ಪವನ್‌, ತಾನು ಖಾಸಗಿ ವಾಹಿನಿ ವರದಿಗಾರ ಎಂದು, ಸಿದ್ಧಾರ್ಥ್, ತಾನು ಪೊಲೀಸ್‌ ಎಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next