Advertisement

Honeytrap: ಪತ್ನಿಯನ್ನೇ ಬಳಸಿ ಉದ್ಯಮಿಗೆ ಹನಿಟ್ರ್ಯಾಪ್‌!

12:07 PM Dec 17, 2023 | Team Udayavani |

ಬೆಂಗಳೂರು: ಆಟೋ ಚಾಲಕನೊಬ್ಬ ಉದ್ಯಮಿಯೊಬ್ಬರನ್ನು “ಹನಿಟ್ರ್ಯಾಪ್‌’ ಬಲೆಗೆ ಕೆಡವಲು ತನ್ನ ಪತ್ನಿ ಬಳಸಿಕೊಂಡು ಇದೀಗ ತನ್ನ ಇಡೀ ತಂಡದ ಜತೆ ಜೈಲು ಸೇರಿದ್ದಾನೆ.

Advertisement

ಕೆಂಗೇರಿ ನಿವಾಸಿ ಮೊಹಮ್ಮದ್‌ ಖಲೀಂ (48), ಆತನ ಪತ್ನಿ ಸಭಾ ಅಪ್ಸಾನಾ(40), ಖಲೀಂನ ಸಹಚರರಾದ ಓಬೆದ್‌ ಖಾನ್‌(34), ಅತೀಕ್‌ ರೆಹಮಾನ್‌(36) ಮತ್ತು ಅಬ್ದುಲ್‌ ರಕೀಬ್‌(34) ಬಂಧಿತರು.

ಆರೋಪಿಗಳು ಆರ್‌.ಟಿ.ನಗರ ನಿವಾಸಿ ಮೊಹಮ್ಮದ್‌ ಅತಾವುಲ್ಲಾ ಎಂಬವರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಿ, ಆರು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಮಾಹಿತಿ ಮೇರೆಗೆ ಸಿಸಿಬಿಯ ಪಶ್ಚಿಮ ವಿಭಾಗದ ಸಂಘಟಿತ ಅಪರಾಧ ದಳದ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಖಲೀಂ ಆಟೋ ಚಾಲಕ ನಾಗಿದ್ದು, ಓಬೆದ್‌ ಖಾನ್‌ ಫ್ಲಂಬರ್‌ ಕೆಲಸ ಮಾಡಿಕೊಂಡಿದ್ದ. ಅತೀಕ್‌ ರೆಹಮಾನ್‌ ಲಾರಿ ಚಾಲಕ ನಾಗಿದ್ದು, ಅಬ್ದುಲ್‌ ರಕೀಬ್‌ ಬಟ್ಟೆ ವ್ಯಾಪಾರಿಯಾಗಿದ್ದಾನೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಮೊಹಮ್ಮದ್‌ ಖಲೀಂ ಮತ್ತು ಸಭಾ ಅಪ್ಸಾನಾ ಮದುವೆಯಾಗಿದ್ದು, ದಂಪತಿಗೆ 16 ವರ್ಷದ ಪುತ್ರಿ ಇದ್ದಾಳೆ. ಈ ಮಧ್ಯೆ ಹನಿಟ್ರ್ಯಾಪ್‌ ದಂಧೆಗೆ ಸಂಚು ರೂಪಿಸಿದ ಖಲೀಂ, ಅದಕ್ಕಾಗಿ ತನ್ನ ಪತ್ನಿಯನ್ನು ಬಳಸಿಕೊಂಡಿದ್ದಾನೆ. ಈ ಹಿಂದೆ ಇಂದಿರಾನಗರದಲ್ಲಿ ವಾಸವಾಗಿದ್ದಾಗ ಉದ್ಯಮಿ ಅತಾವುಲ್ಲಾ ಪರಿಚಯವಾಗಿದೆ. ಈ ವೇಳೆ ಅತಾವುಲ್ಲಾ, “ತನ್ನ ವೈಯಕ್ತಿಕ ಸಮಸ್ಯೆಗಳನ್ನು ಖಲೀಂ ಜತೆ ಹಂಚಿಕೊಂಡಿದ್ದ’. ಅದನ್ನೆ ಬಂಡವಾಳ ಮಾಡಿಕೊಂಡ ಆರೋಪಿ, ಮಹಿಳೆಯೊಬ್ಬರನ್ನು ಪರಿಚಯಿಸಿಕೊಡುವುದಾಗಿ ಭರವಸೆ ನೀಡಿದ್ದ. ಎರಡು ತಿಂಗಳ ಬಳಿಕ ಅತಾವುಲ್ಲಾಗೆ ಫೋನ್‌ ಮಾಡಿ, ಗಂಡ ಬಿಟ್ಟಿರುವ ಹೆಂಗಸು ಇದ್ದಾಳೆ. ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಬಹುದು ಎಂದು, ಆಕೆ ಮೊಬೈಲ್‌ ನಂಬರ್‌ ಕೊಟ್ಟಿದ್ದ. ಮತ್ತೂಂದೆಡೆ ಪತ್ನಿಗೂ ಅತಾವುಲ್ಲಾ ನಂಬರ್‌ ನೀಡಿದ್ದ. ಬಳಿಕ ಅತಾವುಲ್ಲಾ ಮತ್ತು ಸಭಾ ಮೊಬೈಲ್‌ನಲ್ಲಿ ಪರಸ್ಪರ ಮಾತನಾಡುತ್ತಿದ್ದು, ಎರಡು ತಿಂಗಳ ಹಿಂದೆ ಸಭಾ ಅತಾವುಲ್ಲಾನ ಮನೆಗೆ ಹೋಗಿ, ಆತನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಳು. ಆ ನಂತರ ಆತನಿಂದ ಹಣ ಕೂಡ ಪಡೆದುಕೊಂಡಿದ್ದಳು ಎಂದು ಪೊಲೀಸರು ಹೇಳಿದರು.

Advertisement

6 ಲಕ್ಷ ರೂ.ಗೆ ಹನಿಟ್ರ್ಯಾಪ್‌: ಈ ಬೆನ್ನಲ್ಲೇ ಡಿ.14ರಂದು ಅತಾವುಲ್ಲಾಗೆ ಕರೆ ಮಾಡಿದ ಸಭಾ, ಆರ್‌.ಆರ್‌.ನಗರ ಮೆಟ್ರೋ ನಿಲ್ದಾಣದ ಬಳಿ ಆಧಾರ್‌ ಕಾರ್ಡ್‌ ಜತೆ ಬರುವಂತೆ ಹೇಳಿದ್ದಳು. ಬಳಿಕ ಇಬ್ಬರು ಆರ್‌.ಆರ್‌.ನಗರದ ಖಾಸಗಿ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡಿಕೊಂಡಿದ್ದರು. ಅದೇ ದಿನ ಮಧ್ಯಾಹ್ನ ಹೋಟೆಲ್‌ ಸಮೀಪದ ಮತ್ತೂಂದು ಹೋಟೆಲ್‌ ಗೆ ಊಟಕ್ಕೆಂದು ಇಬ್ಬರು ನಡೆದುಕೊಂಡು ಹೋಗುವಾಗ, ಇತರೆ ಆರೋಪಿಗಳ ಜತೆ ಬಂದ ಓಬೆದ್‌ ಖಾನ್‌, “ತನ್ನ ಪತ್ನಿ ಜತೆ ಯಾಕೆ ಓಡಾಡುತ್ತಿಯಾ. ಆಕೆ ಸಂಬಂಧ ಹೊಂದಿದ್ದಿಯಾ’? ಎಂದು ಪ್ರಶ್ನಿಸಿ, ಹಲ್ಲೆ ನಡೆಸಿದ್ದಾರೆ. ಆ ನಂತರ ಸ್ಥಳಕ್ಕೆ ಬಂದ ಮೊಹಮ್ಮದ್‌ ಖಲೀಂ, ಅತಾವುಲ್ಲಾಗೆ ಈ ವಿಚಾರದಲ್ಲಿ ರಾಜಿಸಂಧಾನ ಮಾಡುತ್ತೇನೆ. ಅದಕ್ಕಾಗಿ 6 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಷ್ಟೊಂದು ಹಣ ಇಲ್ಲ ಎಂದಾಗ, “ಇಲ್ಲವಾದರೆ ನಿಮ್ಮಿಬ್ಬರ ಫೋಟೋಗಳನ್ನು ನಿನ್ನ ಮನೆಯವರಿಗೆ ಕಳುಹಿಸುತ್ತೇನೆ’ ಎಂದು ಬೆದರಿಸಿ, ಜೇಬಿನಲ್ಲಿದ್ದ 4 ಸಾವಿರರೂ. ಸುಲಿಗೆ ಮಾಡಿದ್ದಾರೆ.

ಈ ಮಧ್ಯೆ ಹಣ ತರುವುದಾಗಿ ಹೋದ ಅತಾವುಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳು ಅತಾವುಲ್ಲಾಗಾಗಿ ಆರ್‌.ಆರ್‌.ನಗರ ಮೆಟ್ರೋ ನಿಲ್ದಾಣ ಬಳಿ ಕಾಯುವಾಗ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

20 ದಿನದಲ್ಲಿ ಮೂರು ಹನಿಟ್ರ್ಯಾಪ್‌!: ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ಕಳೆದ 20 ದಿನಗಳಲ್ಲಿ ಮೂರಕ್ಕೂ ಹೆಚ್ಚು ಮಂದಿಗೆ ಹನಿಟ್ರ್ಯಾಪ್‌ ಬಲೆಗೆ ಕೆಡವಿ, ಲಕ್ಷಾಂತರ ರೂ. ಸುಲಿಗೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಆರ್‌.ಆರ್‌.ನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next