ಬೆಂಗಳೂರು: ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಆರೋಪ ಸಂಬಂಧ ಹಲಸೂರು ಗೇಟ್ ಪೊಲೀಸರು ಸ್ಯಾಂಡಲ್‌ವುಡ್ ನಟ, ಜೆ.ಸಿ.ನಗರ ನಿವಾಸಿ ಯವರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಹೊಸೂರು ರಸ್ತೆಯಲ್ಲಿರುವ 73 ವರ್ಷದ ವೃದ್ಧರಿಗೆ ಆರೋಪಿ ಯುವರಾಜ್ ವಂಚಿಸಿದ್ದ. ಈ ಸಂಬಂಧ ಆರೋಪಿಯ ವಿರುದ್ಧ ವೃದ್ಧರು ದೂರು ನೀಡಿದ್ದರು.
ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಯುವರಾಜ್ ಮಿಸ್ಟರ್ ಭೀಮರಾವ್ ಎಂಬ ಸಿನಿಮಾದಲ್ಲಿ ನಟಿಸಿದ್ದಾನೆ ಎಂದು ಪೊಲೀಸರು ಹೇಳಿದರು.
73 ವರ್ಷದ ಉದ್ಯಮಿ ಹೊಸೂರು ರಸ್ತೆ ಸಿಂಗಸಂದ್ರದಲ್ಲಿ ಖಾಸಗಿ ಕಂಪನಿ ಹೊಂದಿದ್ದು, 4 ವರ್ಷಗಳ ಹಿಂದೆ ಇನ್ಶೂರೆನ್ಸ್ ಕಂಪನಿಗೆ ಕವನ ಎಂಬ ಯುವತಿ ಮತ್ತು ಆಕೆಯ ಸ್ನೇಹಿತರು ಬಂದು ಉದ್ಯಮಿಯನ್ನು ಭೇಟಿಯಾಗಿದ್ದರು. ಕವನ ಉದ್ಯಮಿಯ ಸಂಪರ್ಕದಲ್ಲಿದ್ದರು. ವಾರದ ಹಿಂದೆ ಕವನ ಕೆಲಸ ಕೊಡಿಸುವ ವಿಚಾರವಾಗಿ ನಿಧಿ ಎಂಬ ಯುವತಿ ಯನ್ನು ಉದ್ಯಮಿಗೆ ಪರಿಚಯಿಸಿದ್ದರು. ನಿಧಿ ಆಗಾಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದು, ಜತೆಗೆ ವಾಟ್ಸ್‌ಆ್ಯಪ್ ಚಾಟ್ ಕೂಡ ಮಾಡುತ್ತಿದ್ದರು. ಈ ಮಧ್ಯೆ ಆ.3 ರಂದು 11 ಗಂಟೆ ವೇಳೆಯಲ್ಲಿ ನಿಧಿ ಮೆಸೇಜ್ ಮಾಡಿ ಹೊಸೂರು ರಸ್ತೆಯಲ್ಲಿರುವ ಎಚ್.ಪಿ ಪೆಟ್ರೋಲ್ ಬಂಕ್ ಬಳಿ ಬರುವಂತೆ ತಿಳಿಸಿದ್ದಾರೆ.
ಆಗ ಉದ್ಯಮಿ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಂತೆ ಕಾರುಬಳಿ ಇಬ್ಬರು ಬಂದು “ನಾವು ಕ್ರೈಂ ಪೊಲೀಸರು ನಿಮ್ಮ ಮೇಲೆ ದೂರು ಇದೆ’ ಎಂದು ಕಾರಿನಲ್ಲಿ ಕೂರಿಸಿಕೊಂಡು ಕವನ ಮತ್ತು ನಿಧಿಗೆ ಕಳುಹಿಸಿದ ಚಾಟ್ ಮತ್ತು ವಿಡಿಯೋ ಸ್ಕ್ರೀನ್ ಶಾಟ್ ತೋರಿಸಿದರು. ಬಳಿಕ ಉದ್ಯಮಿಯ ಕಾರಿನ ಕೀ ಮತ್ತು ಮೊಬೈಲ್ ವಶಕ್ಕೆ ಪಡೆದು “ನಿಮ್ಮ ಮೇಲೆ ಎಫ್‌ಐಆರ್ ಆಗಿದೆ’ ಎಂದು ಫೈಲ್ ತೋರಿಸಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ವೇಳೆ ಉದ್ಯಮಿ 50 ಸಾವಿರ ರೂ. ಕೊಡಲು ಮುಂದಾಗಿದ್ದರು. ಆದರೆ, ಆರೋಪಿಗಳು ಒಪ್ಪದೆ, ಸಮೀಪದ ಬ್ಯಾಂಕ್‌ಗೆ ಕರೆದೊಯ್ದು 3.40 ಲಕ್ಷ ರೂ. ಪಡೆದುಕೊಂಡಿದ್ದಾರೆ. ನಂತರ 6 ಲಕ್ಷ ರೂ. ಕೊಟ್ಟಿ ದ್ದಾರೆ. ಅನಂತರವೂ ಪದೇ ಪದೆ ಹಣಕ್ಕೆ ಬೇಡಿಕೆ ಇಟ್ಟಾಗ ಬೇಸರಗೊಂಡು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಮತ್ತು ಕವನ ಒಟ್ಟಿಗೆ ಫಿಟ್‌ನೆಸ್ ಶಾಪ್ ನಡೆಸುತ್ತಿದ್ದು, ಈ ವೇಳೆ ಉದ್ಯಮಿ ಕವನ ಜತೆ ಚಾಟಿಂಗ್ ಮಾಡಿರುವ ವಿಚಾರ ತಿಳಿದುಕೊಂಡಿದ್ದನು. ಹೀಗಾಗಿ ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.