Advertisement
ಹನಿಟ್ರ್ಯಾಪ್ ಎಂಬುದು ಇಂದು, ನಿನ್ನೆಯದಲ್ಲ. ರಾಜ-ಮಹಾರಾಜರ ಕಾಲದಲ್ಲಿ ಎದುರಾಳಿಯನ್ನು ಸೆದೆ ಬಡಿಯಲು ಯುವತಿಯರನ್ನು ಕಳುಹಿಸಿ ಗೆಲುವು ಸಾಧಿಸುತ್ತಿದ್ದರು. ಹೀಗೆ ಶತಮಾನಗಳು ಕಳೆದಂತೆ ಅದರ ಸ್ವರೂಪ, ವಿಶ್ಲೇಷಣೆ ಬದಲಾಗಿದೆ. ತಾಂತ್ರಿಕವಾಗಿ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ ಅವರ ದೌರ್ಬಲ್ಯವನ್ನು ತಿಳಿದುಕೊಂಡು ಟಾರ್ಗೆಟ್ ಮಾಡುವ ಮಟ್ಟಿಗೆ ಈ ಹನಿಟ್ರ್ಯಾಪ್ ಆಧುನಿಕ ಯುಗದಲ್ಲಿ ಬೆಳೆದು ನಿಂತಿದೆ.
Related Articles
Advertisement
ನಟಿಯೊಬ್ಬಳು ತನ್ನ ಸಹಚರ ಸೇರಿದಂತೆ ನಾಲ್ಕೈದು ಮಂದಿ ಯುವಕರು ಜಯನಗರದ ಕ್ಲಿನಿಕ್‌ನ 68 ವರ್ಷದ ವೃದ್ಧ ವೈದ್ಯರನ್ನು ಬಲೆಗೆ ಬೀಳಿಸಿಕೊಂಡಿದ್ದರು. ವೈದ್ಯರ ಜತೆ ನಟಿಯರು ಕಳೆದ ರಸನಿಮಿಷಗಳನ್ನು ಚಿತ್ರೀಕರಿಸಿಕೊಂಡು ಲಕ್ಷಾಂತರ ರೂ. ಹಣ ಪಡೆದಿದ್ದರು. ಇದನ್ನು ಮಾಧ್ಯಮಗಳಿಗೆ ಹಂಚುವುದಾಗಿ ಬೆದರಿಕೆಯೊಡಿದ್ದರು. ಈ ಪ್ರಕರಣದಲ್ಲಿ ನಟಿ ನಯನಾಕೃಷ್ಣ, ಸುದ್ದಿವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್, ಸುನೀಲ್ ಕುಮಾರ್, ಮಲ್ಲೇಶ್ ಹಾಗೂ ಜಿಮ್ ರಘು ಪ್ರಮುಖ ಆರೋಪಿಗಳು.
2016 : ಪೊಲೀಸರಿಂದಲೇ ಟ್ರ್ಯಾಪ್ ದಂಧೆ :
ಯುವತಿಯರನ್ನು ಮುಂದಿಟ್ಟುಕೊಂಡು ಮೂವರು ಪೊಲೀಸರು ದಂಧೆ ನಡೆಸಿದ್ದರು. ಪೀಣ್ಯದ ಠಾಣೆ ಪೇದೆ ವಿಜಯ್ ಕುಮಾರ್, ಸಂಜಯ್‌ನಗರ ಠಾಣೆ ಇಲಿಯಾಜ್ ಹಾಗೂ ಸಿಸಿಬಿಯ ಬಸವರಾಜು ಮಠಪತಿ ನಿಶಾ ಅಲಿಯಾಸ್ ಯಾಸ್ಮಿನ್ ತಾಜ್ ಎಂಬ ಯುವತಿ ಮೂಲಕ ಟ್ರ್ಯಾಪ್ ಮಾಡುತ್ತಿದ್ದರು ಎಂಬ ಆರೋಪವಿತ್ತು. ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟಪ್ಪ ಎಂಬುವರನ್ನು ನಿಶಾ ಮೂಲಕ ಜಮೀನು ಮಾರಾಟ ವಿಚಾರ ಸಂಬಂಧ ಕರೆದು ಟ್ರ್ಯಾಪ್ ಮಾಡಿದ್ದರು. ಆರೋಪಿಗಳನ್ನು ಬಂಧಿಸಲಾಗಿತ್ತು.
2017 : ವೆಬ್‌ಸೈಟ್ ಮೂಲಕ ಟೆಕ್ಕಿಗೆ ಗಾಳ :
ವಿಜಯನಗರದಲ್ಲಿ ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ಟೆಕ್ಕಿಯೊಬ್ಬರನ್ನು ಬಲೆಗೆ ಕೆಡವಿದ್ದರು. ಪ್ರಕರಣದಲ್ಲಿ ಆನಂದ್ ಆಚಾರ್ಯ, ರವಿಕುಮಾರ್, ರವಿ ಸೇರಿದಂತೆ ಒಬ್ಬ ಮಹಿಳೆ ಭಾಗಿಯಾಗಿದ್ದರು. ಎನ್‌ಜಿಒ ಹೆಸರಿನಲ್ಲಿ, ಲೋಕ್ಯಾಂಟೋ ವೆಬ್‌ಸೈಟ್ ಮೂಲಕ ದಂಧೆ ಮಾಡುತ್ತಿದ್ದರು ಎಂಬ ಆರೋಪವಿತ್ತು.
ಏಪ್ರಿಲ್ 1 2017 : ಟ್ರ್ಯಾಪ್ ಮೂಲಕ ಉದ್ಯಮಿ ಅಪಹರಣ, ದರೋಡೆ :
ಮೋಜಿನ ಜೀವನಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿ ಗಂಗಾಧರ್ ಎಂಬುವವರನ್ನು ಅಪಹರಿಸಿ ಲಕ್ಷಾಂತರ ರೂ. ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದರು. ಕೆಂಗೇರಿಯ ಮಂಜುನಾಥ್, ಮಹದೇವ, ಬ್ಯಾಂಕ್ ಕಾಲೋನಿ ನಿವಾಸಿ ಜಯಂತಿ ಮತ್ತು ಕೋಣನಕುಂಟೆ ನಿವಾಸಿ ರುಕ್ಮಿಣಿಯನ್ನು ಬಂಧಿಸಲಾಗಿತ್ತು. ಇವರು 1.95 ಲಕ್ಷ ನಗದು, ಇಂಡಿಕಾ ಕಾರು, 75 ಗ್ರಾಂ ಚಿನ್ನ, 3 ಉಂಗುರ ದರೋಡೆ ಮಾಡಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಗಂಗಾಧರ್‌ಗೆ ಆರೋಪಿ ಜಯಂತಿ ಕರೆ ಮಾಡಿ ಖಾಸಗಿ ಬ್ಯಾಂಕ್‌ವೊಂದರ ಮುಖ್ಯಸ್ಥೆ ಎಂದು ಪರಿಚಯಿಸಿಕೊಂಡು ಮಾ.17ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೈಸೂರು ರಸ್ತೆ ಬಳಿಯ ಕಸ್ತೂರಿ ಬಾ ನಗರದ ನಿವಾಸಿ ಗಂಗಾಧರ ಅವರನ್ನು ಅಪಹರಿಸಿದ್ದರು.
ಅಕ್ಟೋಬರ್ 2017 : ಸ್ವಾಮೀಜಿಯಿಂದ ಕೋಟಿಗಟ್ಟಲೆ ಲೂಟಿ ;
ಹುಣಸೆಮಾರನಹಳ್ಳಿ ಜಂಗಮಮಠದ ದಯಾನಂದ ಸ್ವಾಮೀಜಿ ನಟಿಯೊಬ್ಬರ ಜತೆ ರಾಸಲೀಲೆ ನಡೆಸಿದ ವಿಡಿಯೋವನ್ನು ತೋರಿಸಿ ಸ್ವಾಮೀಜಿಯಿಂದ ನಾಲ್ಕೈದು ಮಂದಿ ಕೋಟಿಗಟ್ಟಲೇ ಹಣ ಪಡೆದಿದ್ದರು. ಈ ಸಂಬಂಧ ಇದುವರೆಗೂ ದೂರು ದಾಖಲಾಗಿಲ್ಲ. ಆದರೆ, ರಾಜ್ಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸ್ವಾಮೀಜಿ ತಮ್ಮ ಪೀಠವನ್ನು ತೊರೆದಿದ್ದರು.
2019 : ಕೆಪಿಎಲ್ ಬೆಟ್ಟಿಂಗ್ :
ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿಬಿಳಿಸಿದ ಕೆಪಿಎಲ್ ಬೆಟ್ಟಿಂಗ್ ದಂಧೆಯನ್ನು ಹೊರಗೆಡವಿದ್ದ ಸಿಸಿಬಿ ಪೊಲೀಸರು ಈ ದಂಧೆಯಲ್ಲಿ ಹನಿಟ್ರ್ಯಾಪ್ ಮೂಲಕ ಆಟಗಾರರನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದರು. ತಂಡದ ಮಾಲೀಕರು ಮತ್ತು ಬುಕ್ಕಿಗಳು ಹಿರಿತೆರೆ ಮತ್ತು ಕಿರುತೆರೆ ನಟಿಯರನ್ನು ಬಳಸಿಕೊಂಡು ಆಟಗಾರರನ್ನು ಟ್ರ್ಯಾಪ್ ಮಾಡುತ್ತಿದ್ದರು.
2019 : ಮಾಜಿ ಸಚಿವರ ವಿಡಿಯೋ ವೈರಲ್ :
ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರ ಮಾಜಿ ಸಚಿವರನ್ನು ಇಬ್ಬರು ಯುವತಿಯರು ಹನಿಟ್ರ್ಯಾಪ್ ಮೂಲಕ ಖೆಡ್ಡಾಕ್ಕೆ ಕೆಡವಿದ್ದರು. ಸುಮಾರು ಒಂದು ವರ್ಷಗಳ ಕಾಲ ಮಾಜಿ ಸಚಿವರಿಗೆ ಬ್ಲಾಕ್‌ಮೇಲ್ ಮಾಡಿ ಹಣ ಪಡೆಯುತ್ತಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ದಾವಣಗೆರೆಯ ರಾಘವೇಂದ್ರ ಅಲಿಯಾಸ್ ರಾಕಿ ಸೇರಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ರಾಘವೇಂದ್ರ ಗಣ್ಯರು, ಜನಪ್ರತಿನಿಧಿಗಳನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾಕ್ಕೆ ಬಿಳಿಸುವುದನ್ನೆ ವೃತ್ತಿಯನ್ನಾಗಿಸಿಕೊಂಡಿದ್ದ. ಮಾಜಿ ಸಚಿವರಿಗೆ 50 ಕೋಟಿಗೆ ಬೇಡಿಕೆ ಇಟ್ಟು ಸಿಕ್ಕಿಬಿದ್ದರು. ಈತನ ಬಳಿ ಉದ್ಯಮಿಗಳು, ಜನಪ್ರತಿನಿಧಿಗಳಿಗೆ ಸೇರಿ ಸುಮಾರು 10ಕ್ಕೂ ಹೆಚ್ಚು ವಿಡಿಯೋಗಳು ಸಿಕ್ಕಿದ್ದವು.
2021 : ಅವಿವಾಹಿತರ ಟಾರ್ಗೆಟ್! :
ಮ್ಯಾಟ್ರಿಮೋನಿಯಲ್ ಮೂಲಕ ಹನಿಟ್ರ್ಯಾಪ್ ದಂಧೆಗೆ ಇಳಿದಿದ್ದ ಸರ್ಕಾರಿ ಮಾಜಿ ಶಿಕ್ಷಕಿ ಇಂದಿರಾನಗರ ಪೊಲೀಸರು ದೇವಯ್ಯ ಪಾರ್ಕ್‌ನ ರಾಮದೇವನಪುರ ನಿವಾಸಿ ಕವಿತಾ ಎಂಬಾಕೆಯನ್ನು ಬಂಧಿಸಿದ್ದರು. ಜೀವನ್ ಸಾಥಿ. ಕಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬರಿಗೆ ಆರೋಪಿತೆ ಲಕ್ಷಾಂತರ ರೂ. ವಂಚಿಸಿದ್ದಳು.
2021 : ಟ್ರ್ಯಾಪ್ ದಂಧೆಯಲ್ಲಿದ್ದ ದಂಪತಿ ಬಂಧನ :
ವೆಬ್‌ಸೈಟ್ ಮೂಲಕ ಕಾಲ್‌ಗರ್ಲ್ಸ್ ಕಳುಹಿಸಿ ಸಹಚರರೊಂದಿಗೆ ಸೇರಿ ಹನಿಟ್ರ್ಯಾಪ್ ಮಾಡಿ ಚಿನ್ನಾಭರಣದ ಜತೆ ಹಣ ವಸೂಲಿ ಮಾಡುತ್ತಿದ್ದ ಉಲ್ಲಾಳ ಉಪನಗರದ ವಿಶ್ವೇಶ್ವರ ಲೇಔಟ್‌ನ ನಿವಾಸಿಗಳಾದ ಕಿರಣ್ ರಾಜ್ (33), ಆತನ ಪತ್ನಿ ಭಾಸ್ವತಿ ದತ್ತಾ(26) ಎಂಬವರನ್ನು ಬಂಧಿಸಲಾಗಿತ್ತು. ವೆಬ್‌ಸೈಟ್‌ನ ಎಸ್ಕಾರ್ಟ್ ಸರ್ವೀಸ್‌ನಲ್ಲಿ ಸುಂದರ ಯುವತಿಯರ ಭಾವಚಿತ್ರ ಹಾಕಿ ಗ್ರಾಹಕರನ್ನು ಸೆಳೆದು, ಅವರೊಂದಿಗಿನ ಖಾಸಗಿ ಕ್ಷಣದ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.
ದೊಡ್ಡವರೇ ಟಾರ್ಗೆಟ್ :
ಮೇಲ್ವರ್ಗದ ಜನರು, ಶ್ರೀಮಂತರು, ಸ್ವಾಮೀಜಿಗಳು, ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ರಕ್ಷಣಾ ಇಲಾಖೆಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಈ ಕಣ್ಣಮುಚ್ಚಾಲೆ ಆಟ ಇದೀಗ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡಿದೆ. ವಿಪರ್ಯಾಸವೆಂದರೆ ಗಂಡಸರು ಮಾತ್ರ ಇದರಬಲಿಪಶುಗಳಲ್ಲ, ಮಹಿಳೆಯರೂ ಇದಕ್ಕೆ ಸಿಕ್ಕಿ ನಲುಗಿದ ಸಾಕಷ್ಟುಉದಾಹರಣೆಗಳಿವೆ. ಸಾಮಾನ್ಯವಾಗಿ ಹನಿಟ್ರ್ಯಾಪ್ ಎರಡು ಮಾದರಿಯಲ್ಲಿ ನಡೆಯುತ್ತಿತ್ತು. ಒಂದು ಕಾರ್ಪೊರೇಟ್ ಹನಿಟ್ರ್ಯಾಪ್. ಮತ್ತೂಂದು ಗೂಢಚರ್ಯೆ ಹನಿಟ್ರ್ಯಾಪ್. ಪ್ರತಿಷ್ಠಿತ ಕಂಪನಿಗಳ ರಹಸ್ಯ ಮಾಹಿತಿ, ಡಾಟಾಗಳು, ಆಡಳಿತಾತ್ಮಕ ವಿಚಾರಗಳನ್ನು ತಿಳಿಯಲು ಸಂಸ್ಥೆಯ ಯೋಜನಾಧಿಕಾರಿಯ (ಪ್ಲಾನಿಂಗ್ ಆಫೀಸರ್) ಹಿಂದೆ ಯುವತಿಯನ್ನು ಬಿಟ್ಟು ಮಾಹಿತಿಗಳನ್ನು ಪಡೆಯುತ್ತಿದ್ದರು. ಮತ್ತೂಂದು ದೇಶದ ರಕ್ಷಣಾ ಇಲಾಖೆಯ ರಹಸ್ಯ ಮಾಹಿತಿಗಳು, ಮಿಲಿಟರಿಯ ಚಲನವಲನಗಳನ್ನು ಪಡೆಯುವ ಸಲುವಾಗಿ ಮಾಡುವುದು.
ಪ್ರತ್ಯೇಕ ಕಾನೂನು ಇಲ್ಲ :
ಹನಿಟ್ರ್ಯಾಪ್‌ನಲ್ಲಿ ಸಿಲುಕಿದರೆ ಹೊರಬರುವುದು ಕಷ್ಟ. ಅಷ್ಟೇ ಅಲ್ಲ, ಈ ಪ್ರಕರಣಗಳನ್ನು ಭೇದಿಸಿದ ಪೊಲೀಸರಿಗೆ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುವುದು ತಲೆನೋವಿನ ಕೆಲಸ. ಸೂಕ್ತ ಸಾಕ್ಷ್ಯಧಾರಗಳು ಸಿಗುವುದಿಲ್ಲ. ಮತ್ತೂಂದೆಡೆ ದೇಶದ ಐಪಿಸಿ ಸೆಕ್ಷನ್, ಸಿಆರ್‌ಪಿಸಿ, ಐಟಿ ಕಾಯ್ದೆಗಳಲ್ಲೂ ಇದಕ್ಕೆ ಪ್ರತ್ಯೇಕ ಕಾನೂನುಗಳಿಲ್ಲ. ಆದರೆ, ಇಂತಹ ಪ್ರಕರಣಗಳಲ್ಲಿ ಕೃತ್ಯದ ಮಾದರಿಯನ್ನಾಧರಿಸಿ ಬೆದರಿಸಿ ದರೋಡೆ, ಬ್ಲಾಕ್‌ಮೇಲ್, ದೇಶದ್ರೋಹ ಆರೋಪದಡಿ ಕೇಸ್ ದಾಖಲಿಸಲಾಗುತ್ತದೆ. ಅದನ್ನು ಹೊರತು ಪಡಿಸಿದರೆ ನ್ಯಾಯಾಲಯದಲ್ಲಿ ಮಾನನಷ್ಠ ಮೊಕದ್ದಮೆ ಹೂಡಬಹುದು.
3-4 ಮಂದಿ ವಿಡಿಯೋ ವೈರಲ್ :
ಕಳೆದ ಆರೇಳು ವರ್ಷಗಳಲ್ಲಿ ಸುಮಾರು 15ಕ್ಕೂ ಅಧಿಕ ಮಂದಿ ಜನಪ್ರತಿನಿಧಿಗಳು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಸುಮಾರು 3-4 ಮಂದಿಯ ಆಡಿಯೋ-ವಿಡಿಯೋ ವೈರಲ್ ಆಗಿವೆ.
ಹನಿಟ್ರ್ಯಾಪ್ ವಿರುದ್ಧ ಕ್ರಮಕ್ಕೆ ಪ್ರತ್ಯೇಕವಾಗಿ ಯಾವುದೇ ಕಾನೂನುಗಳಿಲ್ಲ. ಹೀಗಾಗಿ ಪ್ರಸ್ತುತ ಇರುವ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿಯೇ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಇರುವ ಐಪಿಸಿ ಸೆಕ್ಷನ್‌ಗಳಿಗೆ ಸೂಕ್ತ ತಿದ್ದುಪಡಿ ಮಾಡುವುದು ಅಥವಾ ವಿಶೇಷ ಕಾನೂನಿನ ಅಗತ್ಯವಿದೆ. – ಬಿ.ಆರ್.ಶಿವರಾಮ್, ಹಿರಿಯ ವಕೀಲರು