ಬೆಂಗಳೂರು: ಯುವಕರನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾಕ್ಕೆ ಬೀಳಿಸಿ ಹಣ ಸುಲಿಗೆ ಮಾಡುತ್ತಿದ್ದ ಕಾಲ್‌ಗರ್ಲ್ ಸೇರಿ 8 ಮಂದಿ ಬೇಗೂರು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೆಂಗೇರಿ ಹಾಗೂ ಹೆಬ್ಟಾಳ ನಿವಾಸಿಗಳಾದ ತಿರುಮಲೇಶ್ (32), ನವೀನ್ (29), ಕೆಂಪರಾಜು (26), ಮುಖೇಶ್(32), ಮಂಜುನಾಥ್(32), ಭರತ್(25) ಹಾಗೂ ದಲ್ಬೀರ್ ಸೌದ್(32) ಮತ್ತು ಕೃತ್ಯಕ್ಕೆ ಸಹಕಾರ ನೀಡಿದ ಕಾಲ್ ಗರ್ಲ್, ಕೆಂಗೇರಿ ನಿವಾಸಿ ಪ್ರಿಯಾ ಅಲಿಯಾಸ್ ಮುಧು(24) ಬಂಧಿತರು.
ಆರೋಪಿಗಳು ಫೆ.18ರಂದು ನಸುಕಿನ 2 ಗಂಟೆ ಸುಮಾರಿಗೆ ಮಂಜುನಾಥ್, ರಜನಿಕಾಂತ್ ಹಾಗೂ ಪ್ರಿಯಾಳನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಗಳಿಂದ 8 ಲಕ್ಷ ರೂ. ಮೌಲ್ಯದ ಕಾರು, 3 ಬೈಕ್, 10 ಮೊಬೈಲ್‌ಗಳು ಜಪ್ತಿ ಮಾಡಲಾಗಿದೆ. ರಜನಿಕಾಂತ್ ಹೆಲ್ತ್ ಕೇರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿ ಮಂಜುನಾಥ್ ಮೂಲಕ ತಿರುಮಲೇಶ್ ಪರಿಚಯವಾಗಿದೆ. ಆಗ ಯುವತಿಯೊಬ್ಬಳ ಜತೆ ಖಾಸಗಿ ಕ್ಷಣ ಕಳೆಯಬೇಕೆಂದು ರಜನಿಕಾಂತ್ ಹೇಳಿಕೊಂಡಿದ್ದ. ಅದಕ್ಕೆ ತಿರುಮಲೇಶ್ ಪ್ರಿಯಾಳನ್ನು ಕಳುಹಿಸಿದ್ದ. ಈ ವಿಚಾರವನ್ನು ಸ್ನೇಹಿತ ಮಂಜುನಾಥ್‌ಗೆ ತಿಳಿಸಿದ ರಜನಿಕಾಂತ್, ಆಕೆಯನ್ನು ಮತ್ತೂಮ್ಮೆ ಕರೆಸಿಕೊಳ್ಳಲು ನಿರ್ಧರಿಸಿದ್ದರು. ಹೀಗಾಗಿ ರಜನಿಕಾಂತ್, ಪ್ರಿಯಾಗೆ ಕರೆ ಮಾಡಿ ತಮ್ಮೊಂದಿಗೆ ಬರುವಂತೆ ಕೇಳಿಕೊಂಡಿದ್ದ. ಈ ವಿಚಾರವನ್ನು ಯುವತಿ, ಸ್ನೇಹಿತ ತಿರುಮಲೇಶ್‌ಗೆ ತಿಳಿಸಿದ್ದಾಳೆ. ಬಳಿಕ ಇಬ್ಬರು ಸೇರಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಹನಿಟ್ರ್ಯಾಪ್: ರಜನಿಕಾಂತ್ ಮತ್ತು ಮಂಜುನಾಥ್ ಫೆ.17ರಂದು ಪ್ರಿಯಾ ಜತೆ ಮಡಿವಾಳದ ಲಾಡ್ಜ್ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ನಂತರ ಮಂಜುನಾಥ್ ನ ಕಾರಿನಲ್ಲಿ ಮೂವರು ಬನ್ನೇರುಘಟ್ಟ ರಸ್ತೆಯಲ್ಲಿ ಹೋಟೆಲ್‌ವೊಂದಕ್ಕೆ ಹೋಗಿ, ನಂತರ ನಸುಕಿನ 2 ಗಂಟೆ ಸುಮಾರಿಗೆ ದೇವರಚಿಕ್ಕನಹಳ್ಳಿಯಲ್ಲಿರುವ ಮನೆಗೆ ರಜನಿಕಾಂತ್ ಬಿಟ್ಟು ಹೋಗುವಾಗ ಮೂರು ಬೈಕ್‌ನಲ್ಲಿ ಬಂದ ಆರು ಆರೋಪಿಗಳು ಕಾರು ಅಡ್ಡಗಟ್ಟಿದ್ದಾರೆ. ಬಳಿಕ ತಮ್ಮ ಬೈಕ್‌ಗೆ ಕಾರು ಡಿಕ್ಕಿ ಹೊಡೆದುಕೊಂಡು ಬಂದಿದ್ದಿರಾ ಎಂದೆಲ್ಲ ಗಲಾಟೆ ಆರಂಭಿಸಿದ್ದಾರೆ.
ನಂತರ ಮೂವರು ಆರೋಪಿಗಳು ಕಾರಿನಲ್ಲಿ ಕುಳಿತು ಯುವತಿ ಸೇರಿ ಮೂವರನ್ನು ಅಪಹರಿಸಿದ್ದಾರೆ. ಮಾರ್ಗ ಮಧ್ಯೆ ಮಂಜುನಾಥ್ ಕಾರಿನ ಹ್ಯಾಂಡ್ ಬ್ರೇಕ್ ಹಾಕಿ ಕಾರಿನಿಂದ ಜಿಗಿದು ಪರಾರಿಯಾಗಿದ್ದ. ಬಳಿಕ ರಜನಿಕಾಂತ್ ಮತ್ತು ಪ್ರಿಯಾಳನ್ನು ಅಪಹರಿಸಿದ ಆರೋಪಿಗಳು, ಜೆ.ಪಿ.ನಗರಕ್ಕೆ ಬಂದು, ಇತರೆ ಮೂವರನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಬಳಿಕ ಕೆಂಗೇರಿ ಬಳಿ ಯುವತಿಯನ್ನು ಇಳಿಸಿ ಮನೆಗೆ ಕಳುಹಿಸಿದ್ದಾರೆ.
ರಜನಿಕಾಂತ್‌ನನ್ನು ಕಾರಿನಲ್ಲಿ ಕೂರಿಸಿಕೊಂಡು ಮಂಡ್ಯ, ಮೈಸೂರಿಗೆ ಕರೆದೊಯ್ದಿದ್ದರು. ಅಷ್ಟರಲ್ಲಿ ಮಂಜುನಾಥ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಯಿಗೆ ಕರೆ ಮಾಡಿ 5 ಲಕ್ಷ ರೂ.ಗೆ ಬೇಡಿಕೆ: ರಜನಿಕಾಂತ್‌ನನ್ನು ನಂಜನಗೂಡಿಗೆ ಕರೆದೊಯ್ದು ಆರೋಪಿಗಳು, ಆತನ ಮೊಬೈಲ್‌ನಿಂದಲೇ ತಾಯಿಗೆ ಕರೆ ಮಾಡಿಸಿ 5 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನೆಟ್‌ವರ್ಕ್ ಲೋಕೇಷನ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು, ಆರೋಪಿಗಳು ಮೈಸೂರಿನ ಬಳಿ ಬರುತ್ತಿದ್ದಂತೆ ಬಂಧಿಸಿದ್ದಾರೆ.
ಲೊಕೇಷನ್ ಶೇರ್ ಮಾಡುತ್ತಿದ್ದ ಯುವತಿ: ದೂರುದಾರ ಮಂಜುನಾಥ್, ರಜನಿಕಾಂತ್ ಜತೆ ಹೋಗಿದ್ದ ಪ್ರಿಯಾ, ತಿರುಮಲೇಶ್‌ಗೆ ಪದೇ ಪದೆ ಲೋಕೇಷನ್ ಕಳುಹಿಸಿ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಿದ್ದಳು. ಈ ಆಧಾರದ ಮೇಲೆ ಆರೋಪಿಗಳು ದೂರುದಾರರನ್ನು ಹಿಂಬಾಲಿಸಿ, ದಾಳಿ ನಡೆಸಿ ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.