Advertisement
ನೈಸರ್ಗಿಕ ಜೇನಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದನ್ನು ಮನಗಂಡ ಅನಿಲ್, ಸ್ಥಳೀಯ ರೈತರು ಮತ್ತು ಕೃಷಿವಿಜ್ಞಾನಿಗಳ ಸಲಹೆ ಪಡೆದು 20ಕ್ಕೂ ಹೆಚ್ಚು ಜೇನುಪಟ್ಟಿಗೆಗಳನ್ನು ಅಳವಡಿಸಿದ್ದಾರೆ. ಅವುಗಳಲ್ಲಿ 50ಕ್ಕೂ ಹೆಚ್ಚು ಜೇನು ಕುಟುಂಬಗಳ ಪೋಷಣೆ ಮಾಡುತ್ತಿದ್ದಾರೆ. ನಿರಂತರ ಪರಿಶ್ರಮದಿಂದ ಜೇನು ಕೃಷಿಯಲ್ಲಿ ಯಶಸ್ಸು ಕಂಡು, ಜೇನು ಕೃಷಿಯ ಕುರಿತು ಮಾರ್ಗದರ್ಶನವನ್ನೂ ಮಾಡುತ್ತಾ ಬಂದಿದ್ದಾರೆ. ಅಲ್ಲದೆ, ಆಸಕ್ತ ರೈತರನ್ನು ಒಂದುಗೂಡಿಸಿಕೊಂಡು “ಸಂಜೀವಿನಿ ಜೇನು ಕೃಷಿಕರ ಸಂಘ’ವನ್ನು 2015ರಲ್ಲಿ ಕಟ್ಟಿದ್ದಾರೆ.
ಹೆಚ್ಚಿನ ಸಂಖ್ಯೆಯ ಗೂಡುಗಳನ್ನು ತಯಾರಿಸಿ ಯಾದಗಿರಿ, ಗುಲ್ಬರ್ಗಾ, ಬೀದರ್, ಬಳ್ಳಾರಿ, ರಾಯಚೂರು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಸರಬರಾಜು ಮಾಡುತ್ತಾರೆ. ಇದುವರೆಗೂ ಸುಮಾರು 350 ಗೂಡುಗಳನ್ನು ಮಾರಾಟ ಮಾಡಿದ್ದಾರೆ. ಪ್ರತಿ ಜೇನುಪೆಟ್ಟಿಗೆಗೆ ವರ್ಷಕ್ಕೆ 4ರಿಂದ 5 ಸಾವಿರದವರೆಗೆ ಆದಾಯ ಗಳಿಸುತ್ತಿದ್ದಾರೆ. ಒಂದು ವೇಳೆ ಜೇನುಪೆಟ್ಟಿಗೆ ಕೊಂಡ ರೈತನ ಹೊಲದಲ್ಲಿ ಹೂವುಗಳ ಕೊರತೆಯಿದ್ದರೆ, ಹೂವುಗಳಿರುವ ಪರಿಚಿತರ ರೈತನ ಹೊಲದಲ್ಲಿ ಜೇನುಪೆಟ್ಟಿಗೆಗಳನ್ನು ಇರಿಸಿ ಜೇನು ತಯಾರಿಸುತ್ತಾರೆ. ನೋವಿಗೆ ಔಷಧ
ಸಣ್ಣ ಜೇನು ಅಧಿಕ ಔಷಧೀಯ ಗುಣವುಳ್ಳದ್ದಾಗಿದೆ. ಸೊಂಟನೋವು, ಮೊಣಕಾಲು ನೋವು, ಹಲ್ಲುನೋವು, ಸುಟ್ಟಗಾಯಕ್ಕೆ ಫಲಪ್ರದ ಔಷಧವಾಗಿ ಸಣ್ಣ ಜೇನನ್ನು ಉಪಯೋಗಿಸಲಾಗುತ್ತದೆ. ಒಂದು ಚಮಚ ಜೇನನ್ನು ಪ್ರತಿದಿನ ಸೇವಿಸಬೇಕು. ಇದು ಹಲವಾರು ರೋಗಗಳಿಗೆ ಪ್ರತಿರೋಧಕ ಶಕ್ತಿ ತಂದುಕೊಡುತ್ತದೆ ಎಂದು ಅನಿಲ್ ಹೇಳುತ್ತಾರೆ. ಮಳೆಗಾಲದಲ್ಲಿ ಜೇನು ಸಂಗ್ರಹ ಕಡಿಮೆ. ಅದರಲ್ಲೂ ಜೇನು ಕೃಷಿಗೂ ಮುನ್ನ ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಸಬೇಕು. ಸುತ್ತಮುತ್ತ ಹೂಗಳನ್ನು ಬಿಡುವ ಮರಗಳು, ಮಕರಂದ ಇರುವಂಥ ಬೆಳೆಗಳಿದ್ದರೆ ಜೇನು ಸಂಗ್ರಹಿಸುವುದು ಸುಲಭ. ಮಾಲಿನ್ಯರಹಿತ ಗಾಳಿ, ಮಳೆ ಬಿಸಿಲಿನಿಂದ ರಕ್ಷಣೆಯ ಜೊತೆಗೆ ಜೇನು ಹೀರುವ ಕೀಟಗಳಿಂದಲೂ ರಕ್ಷಣೆ ಒದಗಿಸಬೇಕಾಗುತ್ತದೆ.
Related Articles
ಕ್ರಮಬದ್ಧವಾಗಿ ಜೇನು ಸಾಕಣಿಕೆ ಮಾಡಿದರೆ ಜೇನಿನ ಸಂತತಿ ಹೆಚ್ಚಳವಾಗುತ್ತಲೇ ಸಾಗುತ್ತದೆ. ಆದಾಯವೂ ಹೆಚ್ಚುತ್ತಲೇ ಹೋಗುತ್ತದೆ. ಒಂದು ಪೆಟ್ಟಿಗೆಯಲ್ಲಿರುವ ಜೇನುಹುಳು ಒಮ್ಮೆಗೆ (15ರಿಂದ 20 ದಿನಗಳ ಅವಧಿ) 4- 5 ಕಿಲೋ ಜೇನು ನೀಡುತ್ತದೆ. ಸೂರ್ಯಕಾಂತಿ, ತೆಂಗು, ಅಡಕೆ ಬೆಳೆ ಬಳಿ ಇರುವ ಪೆಟ್ಟಿಗೆಗಳಿಂದ ಇನ್ನೂ ಹೆಚ್ಚಿನ ಜೇನು ಸಂಗ್ರಹವಾಗುತ್ತದೆ. ಹಾಳಾದ ಜೇನುಗೂಡನ್ನು ಎಸೆಯದೆ ಅದರಿಂದ ಮೇಣವನ್ನು ತಯಾರಿಸುತ್ತಾರೆ. ಈ ಮೇಣದಿಂದ ವ್ಯಾಸಲೀನ್, ನೋವು ನಿವಾರಕ ಬಾಮ್ ಇನ್ನಿತರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
Advertisement
ಮಧುಮೇಳರೈತರ ಉತ್ಸಾಹ, ಗ್ರಾಹಕರ ಆಸಕ್ತಿ ಹಾಗೂ ರೈತರು ಬೆಳೆದ ಜೇನು ಬೆಳೆಗೆ ಪೂರಕ ಮಾರುಕಟ್ಟೆ ಸೃಷ್ಟಿ ಹಾಗೂ ಗ್ರಾಹಕರಿಗೆ ಜೇನಿನ ಬಗೆಗೆ ಮಾಹಿತಿ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಮಧುಮೇಳವನ್ನು ಕೊಪ್ಪಳದಲ್ಲಿ ನಡೆಸಲಾಗಿತ್ತು. ಇದರ ಪರಿಣಾಮವಾಗಿ ಸಂಘದಲ್ಲಿ ಮೊದಲು ಇದ್ದ 25 ಸದಸ್ಯರ ಬಲ ಈಗ 200ಕ್ಕೆ ಏರಿಕೆಯಾಗಿದೆ. – ದೀಪಾ ಮಂಜರಗಿ