Advertisement

ಹಂಚಿನಾಳದಲ್ಲಿ ಹನಿ ನೀರಿಗೂ ಪರದಾಟ

03:44 PM Apr 13, 2019 | pallavi |
ತಾವರಗೇರಾ: ಸಮೀಪದ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಮಹಿಳೆಯರು, ಮಕ್ಕಳು ಮೈಲಿ ದೂರದ ತೋಟದ ಜಮೀನಿನಿಂದ ನೀರುವ ತರುವಂತ ಪರಿಸ್ಥಿತಿ ಎದುರಿಗಾಗಿದೆ.
ಹಿರೇಮನ್ನಾಪುರ ಗ್ರಾಪಂ ವ್ಯಾಪ್ತಿಯ ಹಂಚಿನಾಳ ಗ್ರಾಮದಲ್ಲಿ ಸುಮಾರು 150-200 ಕುಟುಂಬಗಳಿವೆ. ಈ ಗ್ರಾಮದಲ್ಲಿರುವ ನೀರಿನ ಟ್ಯಾಂಕ್‌ಗಳು ನೀರುಪಯುಕ್ತವಾಗಿದ್ದು, ಅಂತರ್ಜಲ ಕುಸಿತದಿಂದ ಗ್ರಾಮದ ಕೊಳವೆಬಾವಿಗಳಲ್ಲಿ ಹನಿ ನೀರಿಗಾಗಿ ಹರಸಾಹಸ ಪಡಬೇಕಾಗಿದೆ. ಗ್ರಾಮಸ್ಥರು ಕೊಡ ನೀರಿಗಾಗಿ ಗಂಟೆಗಟ್ಟಲೇ ಕಾಯುವಂತಾಗಿದೆ. ಅಷ್ಟೇ ಅಲ್ಲದೇ ನೀರಿಗಾಗಿ ಜನರು ಕೈ ಕೈ ಮಿಲಾಯಿಸಿದ ಪ್ರಸಂಗಗಳು ನಡೆದಿವೆ.
ನೀರು ತರುವುದೇ ಕಾಯಕ: ಮಹಿಳೆಯರು, ಮಕ್ಕಳು ನೀರಿಗಾಗಿ ಬಂಡಿಯನ್ನು ತಳ್ಳುತ್ತಾ ತಿರುಗಾಡುವದು ಇಲ್ಲಿ ಮಾಮೂಲಿಯಾಗಿದೆ. ತಮ್ಮ ಮನೆಗೆ ನೀರುತರಲು ಜಮೀನುಗಳಿಗೆ ಅಲೆದಾಡುತ್ತಿರುವದು ಅಲ್ಲಲ್ಲಿ ಕಂಡು ಬರುತ್ತಿವೆ. ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.
ನೀರಿನ ಘಟಕ: ಗ್ರಾಮದಲ್ಲಿ 2-3 ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಈ ನೀರಿನ ಘಟಕ ಸ್ಥಗಿತಗೊಂಡು ವರ್ಷಗಳಾಗಿದ್ದು, ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಿಲ್ಲ. ಗ್ರಾಮಸ್ಥರಿಗೆ ಫ್ಲೋರಾಯಡ್‌ಯುಕ್ತ ನೀರೇ ಗತಿಯಾಗಿದೆ.
ಸ್ಪಂದಿಸದ ಅಧಿಕಾರಿಗಳು: ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಸಂಬಂಧ ಪಟ್ಟ ಗ್ರಾಪಂ, ಪಿಡಿಒ, ಅಧ್ಯಕ್ಷರಿಗೆ, ತಾಪಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ದೇವಪ್ಪ ಭಜೆಂತ್ರಿ, ಹನುಮಪ್ಪ, ಶರಣಪ್ಪ, ದೊಡ್ಡಪ್ಪ ಹಾಗೂ ಇತರರು.
ಹಂಚಿನಾಳ ಗ್ರಾಮದಲ್ಲಿ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಟ್ಯಾಂಕರ್‌ ಮೂಲಕ ನೀರು ಸರಬುರಾಜು ಮಾಡಲು ಕ್ರಮಕೈಗೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇನೆ.
 ಕೆ. ಮಹೇಶ, ಜಿಪಂ ಸದಸ್ಯ 
ಗ್ರಾಮದಲ್ಲಿರುವ ಕೈಪಂಪ್‌ ಬೋರವೆಲ್‌ ದುರಸ್ತಿ ಮಾಡಿಸುತ್ತೇನೆ. ಆದಷ್ಟು ಬೇಗ ಗ್ರಾಮಸ್ಥರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು.
 ಚಂದುಸ್ವಾಮಿ, ಹಿರೇಮನ್ನಾಪುರ ಗ್ರಾಪಂ ಪಿಡಿಒ
ಎನ್‌. ಶಾಮೀದ್‌
Advertisement

Udayavani is now on Telegram. Click here to join our channel and stay updated with the latest news.

Next