ರಬಕವಿ-ಬನಹಟ್ಟಿ: ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಉನ್ನತ ಸ್ಥಾನ ಪಡೆದುಕೊಳ್ಳಲು ಸಾಧ್ಯ. ನಾವು ಮಾಡುವ ಕಾರ್ಯದಲ್ಲಿ ನಿಷ್ಠೆ ಇರಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ ತಿಳಿಸಿದರು. ರಬಕವಿಯ ದಾನೇಶ್ವರಿ ಸಮುದಾಯ ಭವನದಲ್ಲಿ ನಾಗರಿಕ ಸನ್ಮಾನ ಸಮಿತಿಯವರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜೀವನದಲ್ಲಿ ಹೆತ್ತವರ, ಗುರುಗಳ, ಹಿರಿಯರ ಮತ್ತು ಸ್ನೇಹಿತರ ಆಶೀರ್ವಾದ ಮತ್ತು ಮಾರ್ಗದರ್ಶನ ಮುಖ್ಯವಾಗಿದೆ. ಯಾವುದೆ ಫಲಾಫೇಕ್ಷೆ ಇಲ್ಲದೆ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಉನ್ನತ ಸ್ಥಾನ ಪಡೆದುಕೊಳ್ಳಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ನ್ಯಾಯ ಯಾವಾಗಲೂ ನಿಷ್ಠುರವಾಗಿರುತ್ತದೆ. ಅದನ್ನು ಮೃದುವಾಗಿ ಹೇಳಬೇಕು. ಸಂವಿಧಾನದಂತೆ ನಾವು ನಡೆದುಕೊಂಡರೆ ಅದುವೆ ನಾವು ಸಂವಿಧಾನಕ್ಕೆ ಕೊಡುವ ಗೌರವವಾಗಿದೆ. ಜೀವನದಲ್ಲಿ ನಾಲ್ಕು ನಿಯಮಗಳಿವೆ. ವಿಧಿ ನಿಯಮ, ಪ್ರಕೃತಿ ನಿಯಮ, ಧರ್ಮ ನಿಯಮ ಮತ್ತು ಸಂವಿಧಾನದ ನಿಯಮಗಳು ಮುಖ್ಯವಾಗಿವೆ. ವ್ಯಕ್ತಿಯನ್ನು ನಾವು ಗುಣದಿಂದ ಗೌರವಿಸಬೇಕು. ಸಂವಿಧಾನವನ್ನು ಅರಿತುಕೊಂಡರೆ ಧರ್ಮ ತತ್ವವನ್ನು ಅರಿತುಕೊಂಡಂತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಪ್ರೊ| ಎಂ.ಎಸ್. ಬದಾಮಿ ಮಾತನಾಡಿದರು. ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ ಅವರಿಗೆ ನಾಗರಿಕ ಸನ್ಮಾನ ಸಮಿತಿಯವರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿದರು. ವಿಜಯ ಹೂಗಾರ, ಸತೀಶ ಹಜಾರೆ, ಶ್ರೀಶೈಲ ದಲಾಲ, ಸಂಗಯ್ಯ ಅಮ್ಮಣಗಿಮಠ, ಮಲ್ಲಿಕಾರ್ಜುನ ನಾಶಿ, ಮಲ್ಲಿಕಾರ್ಜುನ ಸಾಬೋಜಿ, ಶಿವಜಾತ ಉಮದಿ, ಭೀಮಶಿ ಮಗದುಮ್ಮ, ಎಂ.ಜಿ.ಕೆರೂರ, ಮಲ್ಲೇಶ ಕಟಗಿ ಇದ್ದರು .
ರಕ್ಷಿತಾ ಜೋಶಿ ಪ್ರಾರ್ಥಿಸಿದರು. ಜಿ.ಎಸ್.ಅಮ್ಮಣಗಿಮಠ ಸ್ವಾಗತಿಸಿದರು. ನಿಲಕಂಠ ದಾತಾರ ಪರಿಚಯಿಸಿದರು. ವೆಂಕಟೇಶ ನಿಂಗಸಾನಿ ನಿರೂಪಿಸಿದರು. ವಿಕಾಸ ಹೂಗಾರ ವಂದಿಸಿದರು.