Advertisement

ವಿ.ಐ.ಪಿ. ಕಾಲಂ : ಸತ್ಯ ಎದುರಿಸಲು ಪ್ರಾಮಾಣಿಕತೆ ಮುಖ್ಯ

01:28 AM Nov 05, 2020 | mahesh |

ಮನಶ್ಯಾಸ್ತ್ರ, ರಾಜಕೀಯ, ಧರ್ಮದ ವಿಚಾರವಾಗಿ ನಾನು ನಡೆಸುವ ಸಂವಾದಗಳಲ್ಲಿ ಶ್ವೇತವರ್ಣೀಯ ಪುರುಷರು, ಅದರಲ್ಲೂ ಯುವಕರೇ ಅಧಿಕವಿರುತ್ತಾರೆ ಎನ್ನುವ ಆರೋಪ ನನ್ನ ಮೇಲಿದೆ. ಮಾಧ್ಯಮಗಳಲ್ಲೂ ಈ ವಿಷಯ ಅನೇಕ ಬಾರಿ ಚರ್ಚೆಯಾಗಿದೆ. ಪುರುಷಾಹಂಕಾರ ನನ್ನಲ್ಲಿ ಅಧಿಕವಿದೆ, ಅದಕ್ಕೇ ಪುರುಷರು, ಯುವಕರು ನನ್ನ ಮಾತು ಕೇಳಲು ಬರುತ್ತಾರೆ ಎಂಬ ಆರೋಪವದು. ಈ ಆರೋಪ ಎದುರಾದಾಗಲೆಲ್ಲ, “ಇಲ್ಲ ಎಲ್ಲ ವರ್ಗದವರೂ ಬರುತ್ತಾರೆ’ ಎಂದು ಅಲ್ಲಗಳೆಯಲು ನಿಲ್ಲುತ್ತಿದ್ದೆ. ಆದರೆ ಈ ವಿಷಯವಾಗಿ ಗಹನವಾದ ಚಿಂತನೆ ಮಾಡಿದಾಗ ನನಗೆ ಒಂದು ಸತ್ಯ ಅರಿವಾಯಿತು. ಹೌದು, ನನ್ನ ಮಾತು ಕೇಳಲು ಪುರುಷರೇ ಹೆಚ್ಚಾಗಿ ಬರುತ್ತಾರೆ!

Advertisement

ಏಕೆ ಗೊತ್ತೇ? ಏಕೆಂದರೆ ಅವರಿಗೆ ಸಹಾಯದ ಅಗತ್ಯವಿದೆ. ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು, ತಮ್ಮ ಗುರಿಯೇನಾಗಿರಬೇಕು ಎನ್ನುವ ವಿಚಾರದಲ್ಲಿ ಅನೇಕರಿಗೆ ಗೊಂದಲವಿರುತ್ತದೆ.

ಕೆಲವರಿಗೆ 40 ವರ್ಷ ದಾಟಿದರೂ ಜೀವನದಲ್ಲಿ ತಾವೇನು ಮಾಡಬೇಕು ಎನ್ನುವುದೇ ತಿಳಿದಿರುವುದಿಲ್ಲ. ಅತೀವ ಮಾನಸಿಕ ಬೇಗುದಿಯಿಂದ ಬಳಲುತ್ತಿರುವ ಅವರ ಭಾವಲೋಕವನ್ನು ಅರಿಯುವ ಪ್ರಯತ್ನವನ್ನೇ ಯಾರೂ ಮಾಡಿರುವುದಿಲ್ಲ. ನೀನೇನಪ್ಪ ಗಂಡಸು, ನಿನಗೇನು ಕಷ್ಟ ಇರುತ್ತೆ ಎಂದು ಅವರನ್ನು ಮೂದಲಿಸುವವರೇ ಹೆಚ್ಚು.

ಅದೊಂದು ಕಾರ್ಯಕ್ರಮ. ನಾನು ಭಾಷಣ ಮಾಡಿ ವೇದಿಕೆಯಿಂದ ಕೆಳಕ್ಕಿಳಿಯುತ್ತಿದ್ದಾಗ, 35-40ರ ವಯೋಮಾನದ ವ್ಯಕ್ತಿಯೊಬ್ಬ ಹಿಂಜರಿಯುತ್ತಲೇ ಬಳಿ ಬಂದ. ಪಿಸು ಧ್ವನಿಯಲ್ಲಿ ಆತ ಏನನ್ನೋ ಹೇಳಿದ. ನನಗೆ ಆತ ಏನು ಹೇಳುತ್ತಿದ್ದಾನೋ ಕೇಳಿಸಲಿಲ್ಲ. ಏನಾಯ್ತು ಎಂದು ಕೇಳಿದೆ. ಹಠಾತ್ತನೆ ಅವನ ಕಣ್ಣಾಲಿಗಳು ಒದ್ದೆಯಾದವು.

“”ಜೋರ್ಡನ್‌, ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ. ನನ್ನ ಬಹುತೇಕ ಯೌವನವನ್ನು ವ್ಯರ್ಥವಾಗಿಯೇ ಕಳೆದುಬಿಟ್ಟೆ. ಬದುಕಲ್ಲಿ ನಾನೇನೂ ಸಾಧಿಸಲಾರೆ ಎಂಬ ಕೀಳರಿಮೆಯಲ್ಲೇ ಕುಗ್ಗಿಹೋಗಿದ್ದೆ. ಈಗ ನನ್ನ ಬದುಕು ಸುಧಾರಿಸುತ್ತಿದೆ…” ಅಂದ.

Advertisement

“”ವೆರಿ ಗುಡ್‌, ನಿಮಗೆ ಶುಭವಾಗಲಿ. ಬೀ ಸ್ಟ್ರಾಂಗ್‌” ಅಂದೆ. “”ಈ ಗುಡ್‌ ನ್ಯೂಸ್‌ ಅನ್ನು ನಿಮಗಷ್ಟೇ ಹೇಳುತ್ತಿದ್ದೇನೆ. ಅನ್ಯಥಾ ಭಾವಿಸಬೇಡಿ…ಸಾರಿ” ಎಂದು ಆತ ಹೇಳಿದ.

ಆತನ ಮಾತು ಕೇಳಿ ನನಗೆ ಆಘಾತವಾಯಿತು. ಏಕೆಂದರೆ, ಒಂದು ಗುಡ್‌ನ್ಯೂಸ್‌ ಅನ್ನು ಹೇಳುವುದಕ್ಕೆ ಆತ ಅಷ್ಟೇಕೆ ಹಿಂಜರಿದ ಅನ್ನುವುದು! ಇಂದು ಬಹುತೇಕರ ಸ್ಥಿತಿ ಇದೇ ಆಗಿದೆ. ಒಬ್ಬ ವ್ಯಕ್ತಿ ಒಂದು ಸಂತಸದ ಸಂಗತಿಯನ್ನು ಇನ್ನೊಬ್ಬರೆದುರು ಹಂಚಿಕೊಳ್ಳುವುದಕ್ಕೂ ಹಿಂಜರಿಯುವಂಥ ಋಣಾತ್ಮಕ ಮನಸ್ಥಿತಿಯನ್ನು ಸಮಾಜ ಮೈಗೂಡಿಸಿಕೊಂಡುಬಿಟ್ಟಿದೆ. ಒಬ್ಬ ವ್ಯಕ್ತಿ ಸಂತೋಷದ ಸಂಗತಿಯನ್ನು ಹಂಚಿಕೊಂಡರೆ, ಕೂಡಲೇ ಆತನ ಉತ್ಸಾಹವನ್ನು ತುಂಡರಿಸುವ ಮಾತನಾಡಲಾಗುತ್ತದೆ. ಅಥವಾ ಆತನ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುವುದೇ ಇಲ್ಲ. ನಾನು ಮನಃಶಾಸ್ತ್ರಜ್ಞನಾಗಿ ಸಾವಿರಾರು ಜನರಿಗೆ ಕೌನ್ಸೆಲಿಂಗ್‌ ಕೊಟ್ಟಿರುವುದರಿಂದಾಗಿ, ಜನರ ಮಾತನ್ನು “ನಿಜಕ್ಕೂ’ ಆಲಿಸುವುದನ್ನು ಕಲಿತಿದ್ದೇನೆ.

ಇಷ್ಟು ವರ್ಷಗಳ ಅನುಭವದ ಆಧಾರದಲ್ಲಿ ಹೇಳುವುದಾದರೆ, ಅನೇಕರಿಗೆ ತಮ್ಮ ಬದುಕು ಹೇಗಿರಬೇಕು ಎನ್ನುವುದೇ ತಿಳಿದಿಲ್ಲ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ಈ ಕಾರಣಕ್ಕಾಗಿಯೇ, ನನ್ನಿಂದ ಸಲಹೆ ಕೇಳಲು ಬರುವ ಯುವಕರ ಮಾತನ್ನು ಗಮನವಿಟ್ಟು ಆಲಿಸುತ್ತೇನೆ. ಬಹುತೇಕರು ತಾವು ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ ಎನ್ನುವ ಪ್ರಶ್ನೆಯನ್ನೇ ನನ್ನೆದುರಿಡುತ್ತಾರೆ. ನಾನು ಅವರಿಗೆ ಹೇಳುವುದಿಷ್ಟೇ- ಪ್ರಾಮಾಣಿಕತೆಯನ್ನು ಅಭ್ಯಾಸ ಮಾಡಿಕೊಳ್ಳಿ ಎಂದು. ಪ್ರಾಮಾಣಿಕತೆ ಎಂದರೆ, ನಮ್ಮ ವಿಷಯದಲ್ಲಿ ನಾವು ಪ್ರಾಮಾಣಿಕರಾಗುವುದು ಎಂದರ್ಥ. ಆದರೆ ನಮ್ಮ ಬದುಕನ್ನು ನಾವು ಪ್ರಾಮಾಣಿಕತೆಯಿಂದ ನೋಡುವುದು, ವಿಶ್ಲೇಷಣೆ ಮಾಡುವುದು ಇದೆಯಲ್ಲ ಅದು ಸುಲಭದ ಕೆಲಸವಲ್ಲ. ಅದು ಅತ್ಯಂತ ಯಾತನೆಯ ಸಂಗತಿ. ಏಕೆಂದರೆ, ಮನಸ್ಸಿನಾಳಕ್ಕೆ ಇಳಿಯುತ್ತಾ ಹೋದಂತೆಯೇ ನಮ್ಮಲ್ಲಿ ಸಾಕಷ್ಟು ಕೊಳಕು, ಕ್ರೌರ್ಯ, ಕೀಳರಿಮೆಯಿರುವುದು ಅರಿವಾಗುತ್ತದೆ. ನಮಗೇ ಗೊತ್ತಿಲ್ಲದಂಥ ಅನೇಕ ಗುಣಗಳು ನಮ್ಮೊಳಗೆ ಕಾರ್ಯಾಚರಿಸುತ್ತಿರುತ್ತವೆ, ನಮ್ಮ ವರ್ತನೆಗಳನ್ನು, ತನ್ಮೂಲಕ ಬದುಕನ್ನು ನಿಯಂತ್ರಿಸುತ್ತಿರುತ್ತವೆ.

ಆದರೆ ನಮ್ಮನ್ನು ನಾವು ಪ್ರಾಮಾಣಿಕವಾಗಿ ನೋಡಿಕೊಳ್ಳುವ ಪ್ರಕ್ರಿಯೆ ಇದೆಯಲ್ಲ, ಅದು ಅಪಾರ ಯಾತನೆಯನ್ನೂ ಕೊಡುತ್ತದೆ. ನಮ್ಮ ಬಗ್ಗೆ ನಮಗೆ ಹೇವರಿಕೆ ಹುಟ್ಟಿಸುತ್ತದೆ, ಕುಸಿದುಹೋಗುವಂತೆ ಮಾಡುತ್ತದೆ. ಆದರೆ, ಬದುಕು ಬದಲಾಗಲು ವಾಸ್ತವವನ್ನು ಎದುರಿಸುವುದು ಅನಿವಾರ್ಯ. ಗುಣಾತ್ಮಕ ಸಂಗತಿಯೇನು ಗೊತ್ತೇ? ನಮ್ಮ ಅಂತರಂಗಕ್ಕೆ ನಾವು ಪ್ರಾಮಾಣಿಕವಾಗಿ ಮುಖಾಮುಖೀ ಆಗುತ್ತಾ ಹೋದಂತೆಲ್ಲ ನಮ್ಮ ಮನದ ಮೂಲೆಯಲ್ಲೆಲ್ಲೋ ಅತೀವ ಶಕ್ತಿ ಅಡಗಿರುವುದನ್ನು, ಅಪಾರ ಸಾಮರ್ಥ್ಯವಿರುವುದನ್ನು ನಾವು ಕಂಡುಕೊಳ್ಳುತ್ತೇವೆ. ಆದರೆ ಇದು ವರ್ಷಗಟ್ಟಲೇ ನಡೆಯುವಂಥ ಪ್ರಕ್ರಿಯೆ ಎನ್ನುವುದು ನೆನಪಿರಲಿ. ಅಷ್ಟು ಸಂಯಮ ನಿಮ್ಮಲ್ಲಿದೆಯೇ ಎನ್ನುವುದೇ ಮುಖ್ಯ ಪ್ರಶ್ನೆ.

ಈ ಸೂತ್ರಗಳನ್ನು ಪಾಲಿಸುವಿರಾ?
ಕೆಲವು ವರ್ಷಗಳ ಹಿಂದೆ ಕೋರಾ ಜಾಲತಾಣದಲ್ಲಿ ಯುವಕನೊಬ್ಬ, ಜೀವನ ಸುಧಾರಿಸಲು ಸೂತ್ರಗಳಿದ್ದರೆ ಹೇಳಿ ಎಂದು ಕೇಳಿದ್ದ. ಆತನಿಗಾಗಿ ನಾನೊಂದು ಪಟ್ಟಿಯನ್ನು ಸಿದ್ಧಪಡಿಸಿದ್ದೆ. ಅವುಗಳನ್ನು ನಿಮ್ಮೆದುರಿಡುತ್ತಿದ್ದೇನೆ. ಕಟ್ಟುನಿಟ್ಟಾಗಿ ರೂಪಿಸಿಕೊಂಡರೆ ಇವು ನಿಜಕ್ಕೂ ನಿಮ್ಮ ಬದುಕನ್ನು ಬದಲಿಸಬಲ್ಲವು ಹಾಗೂ ಬಲಿಷ್ಠ ವ್ಯಕ್ತಿಯಾಗಿ ರೂಪಿಸಬಲ್ಲವು:

1) ಸತ್ಯ ಹೇಳಲು ಹಿಂಜರಿಯದಿರಿ 2) ಎದುರಿನವರ ಮಾತನ್ನು ಗಮನಕೊಟ್ಟು ಕೇಳಿಸಿಕೊಳ್ಳಿ, ನಿಮಗೆ ಗೊತ್ತೇ ಇರದ ಸಂಗತಿಯೊಂದು ಅವರ ಬಳಿ ಖಂಡಿತ ಇರುತ್ತದೆ 3) ಕೆಟ್ಟ ಸುದ್ದಿಯನ್ನು ಯಾರೊಂದಿಗೆ ಹಂಚಿಕೊಳ್ಳುತ್ತಿದ್ದೀರಿ ಎನ್ನುವ ಎಚ್ಚರಿಕೆಯಿರಲಿ 4) ಬರೀ ಮಾತನಾಡುವ ವ್ಯಕ್ತಿಯಾಗಿ ಅಲ್ಲ, ಆಡಿದ್ದನ್ನು ಮಾಡಿ ತೋರಿಸುವ ವ್ಯಕ್ತಿಯಾಗಿ ಗುರುತಿಸಿಕೊಳ್ಳಿ 5) ಸುಳ್ಳು ಭರವಸೆ ನೀಡಬೇಡಿ, ಭರವಸೆ ನೀಡಿದ ಮೇಲೆ ಮಾತಿಗೆ ಬದ್ಧರಾಗಿ 6) ನೀವು ಏನಾಗಲು ಬಯಸುತ್ತೀರಿ ಎನ್ನುವುದನ್ನು ನಿರ್ಧರಿಸಿ. ಅನಂತರ ನಿಮ್ಮ ಶಕ್ತಿ, ಶ್ರದ್ಧೆಯನ್ನೆಲ್ಲ ಆ ದಿಕ್ಕಿನಲ್ಲಿ ಹರಿಸಿ 7) ನಿಮ್ಮ ಬದುಕನ್ನು ಅನ್ಯರಿಗೆ ಹೋಲಿಸಿಕೊಳ್ಳುವ ಬದಲು, ನಿನ್ನೆ ನೀವು ಏನಾಗಿದ್ದಿರಿ ಎನ್ನುವುನ್ನು ಇಂದಿನ ನಿಮ್ಮ ಪರಿಸ್ಥಿತಿಯ ಜತೆ ಹೋಲಿಕೆ ಮಾಡಿ 8) ಹಳೆಯ ನೆನಪುಗಳು ನಿಮ್ಮಲ್ಲಿ ಯಾತನೆ ಸೃಷ್ಟಿಸುತ್ತಿದ್ದರೆ ಅವನ್ನು ಸ್ಪಷ್ಟವಾಗಿ, ಪೂರ್ಣವಾಗಿ ಬರೆದಿಡಿ 9) ಜನರ ಸಂಪರ್ಕದಲ್ಲಿರಿ, ನಿಮ್ಮ ನೆಟ್‌ವರ್ಕ್‌ ದೊಡ್ಡದಾಗಿರಲಿ 10) ನಿಮ್ಮ ಪ್ರೀತಿಪಾತ್ರರಿಗೆ ಸಹಾಯ ಮಾಡುವಾಗ ಎಷ್ಟು ಕಾಳಜಿ ವಹಿಸುತ್ತೀರೋ, ಅಷ್ಟೇ ಕಾಳಜಿ ನಿಮಗೆ ನೀವು ಸಹಾಯ ಮಾಡಿಕೊಳ್ಳುವಲ್ಲೂ ಇರಲಿ 11) ನಿಮ್ಮ ಶ್ರೇಯಸ್ಸನ್ನು ಬಯಸುವ ಸ್ನೇಹ ವಲಯವನ್ನು ಬೆಳೆಸಿಕೊಳ್ಳಿ 12) ಮನೆಯನ್ನು ಸ್ವತ್ಛವಾಗಿಟ್ಟುಕೊಳ್ಳಿ 13) ಭಾಷೆಯ ಮೇಲೆ ಹಿಡಿತ ಸಾಧಿಸಿ. ಮಾತಿನಷ್ಟು ಪ್ರಬಲ ಅಸ್ತ್ರ ಜಗತ್ತಿನಲ್ಲಿ ಮತ್ತೂಂದಿಲ್ಲ 14) ಕಷ್ಟಕರ ಸನ್ನಿವೇಶಗಳಿಂದ, ಅಸೌಖ್ಯ ಹುಟ್ಟಿಸುವ ಮಾತುಕತೆಗಳಿಂದ ದೂರ ಓಡದಿರಿ 15) ಹಿರಿಯರ ಮಾತುಗಳನ್ನು ಗಮನವಿಟ್ಟು ಆಲಿಸಿ, ಜಗತ್ತಿನ ಮಹಾನ್‌ ಕಾದಂಬರಿಗಳನ್ನು ಓದಿ 16) ನಿಮಗೆ ಯಾರಾದರೂ ಹಿಂಸೆ ಕೊಡುತ್ತಿದ್ದರೆ ಹೆದರದಿರಿ, ಅವರನ್ನು ಗಟ್ಟಿಯಾಗಿ ಎದುರಿಸಿ. ಆ ತಪ್ಪುಗಳಿಂದ ಅವರು ಪಾರಾಗಲು ಬಿಡದಿರಿ 17) ಯಾವುದೇ ವಿಷಯದ ಬಗ್ಗೆ ಮಾತನಾಡುವಾಗಲೂ ಆಳವಾದ ಅಧ್ಯಯನ ಮಾಡಿ. ಒಬ್ಬ ವ್ಯಕ್ತಿ ಒಂದು ವಿಷಯದ ಮೇಲೆ 1 ಗಂಟೆ ಮಾತನಾಡುತ್ತಾನೆ ಎಂದರೆ, ಆತನ ಬಳಿ 10 ಗಂಟೆಯ ಸರಕು ಇರಬೇಕು!

ಇವೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯವೇ ಅಲ್ಲವೇ ಎಂದು ನೀವು ಪ್ರಶ್ನಿಸಬಹುದು. ಹೌದು, ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ನೀವು ಇವುಗಳ ಪಾಲನೆ ಮಾಡುತ್ತಿದ್ದೀರಾ ಎನ್ನುವುದೇ ಪ್ರಶ್ನೆ.

ಜೋರ್ಡನ್‌ ಪೀಟರ್‌ಸನ್‌ , ಖ್ಯಾತ ಮನಶ್ಯಾಸ್ತ್ರಜ್ಞ, ಇಂಟರ್ನೆಟ್‌ ಸೆಲೆಬ್ರಿಟಿ

Advertisement

Udayavani is now on Telegram. Click here to join our channel and stay updated with the latest news.

Next