ಬೆಂಗಳೂರು: ಯಾವುದೇ ಉನ್ನತ ಸ್ಥಾನಕ್ಕೇರಲು ಪರಿಶ್ರಮ, ಪ್ರಾಮಾಣಿಕತೆ ಮತ್ತು ಮಾನವೀಯತೆ ಅತಿ ಮುಖ್ಯ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಲ್.ದತ್ತು ಅಭಿಪ್ರಾಯಪಟ್ಟರು.
ಎನ್‌ಎಚ್‌ಆರ್‌ಸಿ ಮತ್ತು ವಿಶ್ವವಿದ್ಯಾಲಯ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬೆಂಗಳೂರು ವಿವಿಯ ಪ್ರೊ.ಕೆ. ವೆಂಕಟಗಿರಿಗೌಡ ಸಭಾಂಗಭದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ “ಅಖೀಲ ಭಾರತ ಅಣಕು ನ್ಯಾಯಾಲಯ ಸ್ಪರ್ಧೆ-2017′ ಉದ್ಘಾಟಿಸಿ ಮಾತನಾಡಿದ ಅವರು, ಧನಾತ್ಮಕ ಆಲೋಚನೆ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.
ಆತ್ಮವಿಶ್ವಾಸ ಅತಿ ಮುಖ್ಯ: ವಕೀಲ ವೃತ್ತಿಗೆ ಬರುವವರಿಗೆ ಆತ್ಮವಿಶ್ವಾಸ ಅತ್ಯಂತ ಮುಖ್ಯ. ಗ್ರಾಮೀಣ ಭಾಗದ ಮಕ್ಕಳು ತಮಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಕೀಳರಿಮೆ ಬೆಳೆಸಿಕೊಳ್ಳಬಾರದು. ಇಂಗ್ಲಿಷ್ ಭಾಷೆಯಲ್ಲಿ ಅಧ್ಯಯನ ಮಾಡಿದವರನ್ನೂ ಮೀರಿ ಬೆಳೆಯುವ ಪ್ರಯತ್ನ, ವಿಶ್ವಾಸ ಇರಬೇಕು ಎಂದು ಸಲಹೆ ನೀಡಿದರು. ನಾನು ಹೈಸ್ಕೂಲ್‌ನಲ್ಲಿ ಓದುವಾಗ ನಮ್ಮ ಗುರುಗಳು ಹೇಳಿಕೊಟ್ಟ ಪಾಠ. ಹಾಗೆ ದೊಡ್ಡ ಗುರಿಯನ್ನಿಟ್ಟುಕೊಂಡು ತಲುಪಿದ್ದೇನೆ. ಪರಿಶ್ರಮ, ಪ್ರಮಾಣಿಕತೆ ಮತ್ತು ಮಾನವೀಯ ಗುಣಗಳಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಉತ್ತಮ ವೇದಿಕೆ: ಅಣಕು ನ್ಯಾಯಾಲಯ ಸ್ಪರ್ಧೆಗಳು ಕಾನೂನು ಪದವಿ ಮುಗಿಸಿದ ಅಥವಾ ವೃತ್ತಿ ರಂಗ ಪ್ರವೇಶಕ್ಕೆ ಹೊರಟ ವಿದ್ಯಾರ್ಥಿಗಳಿಗೆ ಉತ್ತಮ ಅಭ್ಯಾಸ ವೇದಿಕೆ. ಇಲ್ಲಿ ನೀವು ತೋರಿಸುವ ಸಮರ್ಥವಾದ ಮಂಡನೆ, ತೀರ್ಪು ನೀಡುವ ಸಾಮರ್ಥ್ಯ, ಪಾಂಡಿತ್ಯ ಮುಂದಿನ ವೃತ್ತಿ ಜೀವನದಕ್ಕೆ ಬುನಾದಿಯಾಗಲಿದೆ ಎಂದು ಹೇಳಿದರು.
ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥಶೆಟ್ಟಿ ಮಾತನಾಡಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅರಿವು ಇರಬೇಕು. ಕಾನೂನು ವಿದ್ಯಾಭ್ಯಾಸ ಮುಗಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಾವು ತಿಳಿದುಕೊಂಡಿರುವ ಕಾನೂನಿನ ವಿಚಾರಗಳನ್ನು ಕೇವಲ ತಮ್ಮ ವೃತ್ತಿ, ಜೀವನಕ್ಕೆ ಸೀಮಿತವಾಗಿಡದೆ. ಸಾಮಾನ್ಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಸಂವಹನ ಕಲೆ, ಪಾಂಡಿತ್ಯದಿಂದ ಎಲ್ಲರನ್ನು ತಮ್ಮತ್ತ ಸೆಳೆಯುವ ಗುಣಗಳು ಅತಿ ಮುಖ್ಯ. ಇದರಿಂದ ತಮ್ಮ ಜೀವನದಲ್ಲಿ ಉತ್ತಮ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಹಂಗಾಮಿ ಕುಲಪತಿ ಪ್ರೊ.ಜಗದೀಶ್ ಪ್ರಕಾಶ್, ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸುರೇಶ್ ನಾಡಗೌಡರ್, ಡಾ.ವಿ. ಸುದೇಶ್, ಕೆ.ಎನ್.ಭಾರ್ಗವ್ ಮತ್ತಿತರರು ಉಪಸ್ಥಿತರಿದ್ದರು.