ದ.ಕ., ಉಡುಪಿ ಜಿಲ್ಲಾ ಸ್ಟೀಲ್ ಟ್ರೇಡರ್ ಅಸೋಸಿಯೇಶನ್ ಉದ್ಘಾಟನೆ
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸ್ಟೀಲ್ ಟ್ರೇಡರ್ ಅಸೋಸಿಯೇಶನ್‌ನ ಉದ್ಘಾಟನೆ ಬುಧವಾರ ಮಂಗಳೂರಿನ ಹೊಟೇಲ್ ಓಶಿಯನ್‌ಪರ್ಲ್ ಸಭಾಂಗಣದಲ್ಲಿ ನಡೆಯಿತು. ಆಹಾರ ಖಾತೆ ಸಚಿವ ಯು.ಟಿ. ಖಾದರ್ ಅವರು ನೂತನ ಅಸೋಸಿಯೇಶನ್ ಉದ್ಘಾಟಿಸಿ ಮಾತನಾಡಿ, ಪ್ರಾಮಾಣಿಕತೆ, ಶಿಸ್ತು, ಆತ್ಮವಿಶ್ವಾಸ ಹಾಗೂ ಹೊಸತನಗಳನ್ನು ಹುಡುಕುವ ಮನೋಭಾವದಿಂದ ವ್ಯಾಪಾರ ನಡೆಸುವವರಿಗೆ ಉಜ್ವಲ ಭವಿಷ್ಯವಿದೆ. ಹೀಗಾಗಿ ವ್ಯಾಪಾರ ಕ್ಷೇತ್ರದಲ್ಲೂ ಇನ್ನಷ್ಟು ಹೊಸತನಗಳ ದರ್ಶನವಾಗಲಿ ಎಂದು ಆಶಿಸಿದರು.
ಮನೆ, ಕಟ್ಟಡಕ್ಕೆ ಅಡಿಪಾಯ ಗಟ್ಟಿಯಾದಂತೆ, ಸ್ಟೀಲ್‌ಗಳು ಅತ್ಯಂತ ಅಗತ್ಯವಾಗಿ ಬೇಕಾಗುತ್ತದೆ. ಎಲ್ಲ ರೀತಿಯ ವ್ಯಾಪಾರ – ವಹಿವಾಟು ನಡೆಸುವವರು ಅವರವರ ಕ್ಷೇತ್ರದಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು, ತಮ್ಮ ಕಷ್ಟಗಳಿಗೆ ಎಲ್ಲರೂ ಜತೆಯಾಗಿ ನಿಂತು ಸ್ಪಂದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಸ್ಟೀಲ್ ಟ್ರೇಡರ್ನವರು ಜತೆಯಾಗಿ ಸಂಘಟನೆ ಮಾಡುವ ಮೂಲಕ ಒಗ್ಗಟ್ಟಿನ ಸೂತ್ರ ಬೆಸೆದಿರುವುದು ಶ್ಲಾಘನೀಯ. ಒಗ್ಗಟ್ಟಿನ ಮೂಲಕ ನಡೆದರೆ ಸಂಘಟನೆ ಯಶಸ್ವಿಯಾಗುತ್ತದೆ ಹಾಗೂ ಆ ಮೂಲಕ ಸಂಘಟನೆಯ ಪ್ರತಿಯೊಬ್ಬರಿಗೆ ಉತ್ತಮ ಅವಕಾಶ ದೊರೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್ ಅಧ್ಯಕ್ಷ ಮನ್ಸೂರ್ ಅಹಮ್ಮದ್ ಮಾತನಾಡಿದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜೀವನ್ ಸಲ್ದಾನ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಎಚ್.ಜಿ. ಪವಿತ್ರಾ, ಹೇಮಾ ಜಿ. ನಾಯಕ್, ಪ್ರಮುಖರಾದ ಸಂಜಯ್ ಬಲಿಪ ಮುಂತಾದವರು ಉಪಸ್ಥಿತರಿದ್ದರು.
ದ.ಕ. ಹಾಗೂ ಉಡುಪಿ ಜಿಲ್ಲಾ ಸ್ಟೀಲ್ ಟ್ರೇಡರ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಮಂಗಳೂರಿನ ಆಝಾದ್ ಸ್ಟೀಲ್ಸ್‌ನ ಮನ್ಸೂರ್ ಅಹಮ್ಮದ್, ಪದವ್ ಟ್ರೇಡಿಂಗ್ ಕಾರ್ಪೊರೇಶನ್‌ನ ಪಿ. ಬಾಲಕೃಷ್ಣ ಶೆಣೈ ಉಪಾಧ್ಯಕ್ಷರಾಗಿ, ಶ್ರೀ ಗರೋಡಿ ಸ್ಟೀಲ್ಸ್‌ನ ಮನೋಜ್ ಕುಮಾರ್ ಕಾರ್ಯದರ್ಶಿಯಾಗಿ, ಪದ್ಮ ಸ್ಟೀಲ್ಸ್‌ನ ರಾಕೇಶ್ ಕೋಟ್ಯಾನ್ ಕೋಶಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಲುಡ್ರಿಕ್ ಎಂಟರ್‌ಪ್ರೈಸಸ್‌ನ ರಾಯ್ ರೋಡ್ರಿಗಸ್, ಉಡುಪಿ ಸಾಮ್ ಎಂಟರ್‌ಪ್ರೈಸಸ್‌ನ ಉಡುಪಿ ಅಜ್ಮಲ್ ಅಸಾದಿ, ಬಿ.ಸಿ. ರೋಡ್‌ನ ಲುಕ್ಮನ್ ಸ್ಟೀಲ್ ಸೆಂಟರ್‌ನ ಶಾನ್‌ಫತ್ ಶರೀಫ್, ಮಂಗಳೂರಿನ ಮಹಾಲಕ್ಷ್ಮೀ ಸ್ಟೀಲ್ಸ್‌ನ ರಾಮಚಂದ್ರ ಕೋಟ್ಯಾನ್ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಅಧಿಕಾರ ವಹಿಸಿಕೊಂಡರು. ಬಿಂಬ ಮನೋಜ್ ಸ್ವಾಗತಿಸಿದರು. ಬಬಿತಾ ಕಾರ್ಯಕ್ರಮ ನಿರೂಪಿಸಿದರು.