ದೇವನಹಳ್ಳಿ: ಇಷ್ಟು ವರ್ಷ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಯಾವುದೇ ಸರ್ಕಾರವಿರಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಿಕ್ಷಕರು ಆಡಳಿತ ಮಂಡಳಿಗಳ ನ್ಯಾಯಾಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಿದ್ದೇನೆ. ಜಾತಿ ಧರ್ಮ ರಹಿತವಾಗಿ ತಾವು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕಾರ್ಯ ಸೇವೆ ಮುಂದೆಯೂ ಇದೇ ರೀತಿ ಅತ್ಯಂತ ಪಾರದರ್ಶಕವಾಗಿ ಮುಂದುವರಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.
ಜೂನ್ ತಿಂಗಳಿನಲ್ಲಿ ಬರುವ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಗರದ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕರನ್ನು ಮತಯಾಚಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯನಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬಳಕೆಗೆ ಸಿಗುತ್ತಿದ್ದ ವಾರ್ಷಿಕ ಅನುದಾನದ ಪೈಕಿ ಬಹುತೇಕ ಮೊತ್ತವನ್ನು ಸದುಪಯೋಗ ಮಾಡಲಾಗಿದೆ. ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ನಿರ್ಮಾಣ ಹಾಗೂ ಶಾಲಾ ಕಾಲೇಜುಗಳಲ್ಲಿ ಕುಡಿಯುವನೀರಿನ ವ್ಯವಸ್ಥೆ, ಕೊಠಡಿಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎಂದರು.
ಶಿಕ್ಷಣ ಕ್ಷೇತ್ರ ಎನ್ನುವುದು ಮಹತ್ವದ ಕ್ಷೇತ್ರವಾಗಿದೆ. ಕಳೆದ ಮೂರು ಬಾರಿ ಸತತವಾಗಿ ಈ ಭಾಗದ ಶಿಕ್ಷಕರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ. ಈ ಬಾರಿಯೂ ನನ್ನ ಆಯ್ಕೆ ಮಾಡುತ್ತಾರೆಂಬ ವಿಶ್ವಾಸವಿದೆ. ಪ್ರತಿ ತಿಂಗಳ 5ನೇ ತಾರೀಖೀನೊಳಗೆ ಶಿಕ್ಷಕರ ವೇತನ ಶಿಕ್ಷಕರ ಖಾತೆಗೆ ಜಮಾ ಆಗುವಂತೆ ಶಿಫಾರಸ್ಸು ಮಾಡಲಾಗುತ್ತದೆ. ಶಿಕ್ಷಣ ಕ್ಷೇತ್ರ ಪವಿತ್ರವಾದ ಕ್ಷೇತ್ರ ದೇವಾಲಯವಿದ್ದಂತೆ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರ ವೇತನ ವಿಳಂಬ ಸೇರಿದಂತೆ, ಇನ್ನೂ ಹತ್ತು ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೆಲವರು ಕ್ಷೇತ್ರಕ್ಕೆ ಬರುವುದಿಲ್ಲ ಎಂದು ದೂರುತ್ತಿದ್ದಾರೆ. ಕ್ಷೇತ್ರ ಪರಿಚಯವಿಲ್ಲದೆಯೇ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ್ದು, ಶಿಕ್ಷಕರಿಗೆ ತಿಳಿದಿದೆ ಎಂದರು.
ಈ ವೇಳೆಯಲ್ಲಿ ಗ್ರಾಮಾಂತರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ದೆ„ಹಿಕ ಶಿಕ್ಷಕ ವೈ.ವಿ ಚಂದ್ರಶೇಖರ್, ಹನುಮಂತಪ್ಪ, ಜನಾರ್ದನ್, ಅಶೋಕ್, ಎಸ್‌ಎಲ್‌ಎಸ್ ಶಾಲೆಯ ಕಾರ್ಯದರ್ಶಿ ಧನಂಜಯ್, ಮುಖಂಡ ರವಿಕುಮಾರ್, ಸೇರಿದಂತೆ ಪುಟ್ಟಣ್ಣನವರ ಬೆಂಬಲಿಗರು ಮತ್ತಿತರರು ಹಾಜರಿದ್ದರು.