Advertisement

27ಕ್ಕೆ ಸಚಿವರಿಗೆ ಸನ್ಮಾನ, ಅಭಿಯಾನ

10:58 AM Sep 21, 2017 | Team Udayavani |

ದೇವನಹಳ್ಳಿ: ಮಾದಿಗ ಸಮುದಾಯ ಸ್ಥಳೀಯವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ. ಸಮುದಾಯದ ಎಲ್ಲಾ ಪಕ್ಷದಲ್ಲಿರುವವರು ಸಂಘಟಿತರಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ತಾಲೂಕು ಮಾದಿಗ ದಂಡೋರ ಅಧ್ಯಕ್ಷ ಜಿ.ಮಾರಪ್ಪ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಸಬಾ ಹೋಬಳಿ ಮಾದಿಗ ದಂಡೋರ ವತಿಯಿಂದ ಹಮ್ಮಿಕೊಂಡಿದ್ದ ಸೆ.27ರಂದು ದೇವನಹಳ್ಳಿ ಅಂಬೇಡ್ಕರ್‌ ಭವನದಲ್ಲಿ ಜಾಂಬವ ಜಯಂತಿ ಮತ್ತು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಮತ್ತು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅವರಿಗೆ ಸನ್ಮಾನ ಮತ್ತು ಸದಸ್ಯತ್ವ ನೋಂದಣಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 

ಅವಕಾಶಗಳಿಗಾಗಿ ಹೋರಾಟ: ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ನಮ್ಮ ಬದುಕು ಬದಲಾಗುತ್ತಿಲ್ಲ. ಮಾದಿಗ ಸಮುದಾಯ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರೂ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಜಕೀಯ ಪಕ್ಷಗಳಲ್ಲಿ ಹೊರಗಿನಿಂದ ಬಂದವರಿಗೆಮಣೆ ಹಾಕುತ್ತಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದೇವೆ. ಸಮುದಾಯವು ಸಂಘಟಿತ ಗೊಂಡು ರಾಜಕೀಯವಾಗಿ ಸಿಗಬೇಕಾದ
ಅವಕಾಶಗಳಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಸದಾಶಿವ ಆಯೋಗ ವರದಿ ಕೇಂದ್ರಕ್ಕೆ ಸಲ್ಲಿಸಿ: ಮಾದಿಗ ಸಮಾಜ ಶಿಕ್ಷಣ, ಉದ್ಯೋಗ, ರಾಜಕೀಯ ಎಲ್ಲಾ ರಂಗದಲ್ಲೂ ಹಿಂದೆ ಬಿದ್ದಿದ್ದೇವೆ. ಈ ಮೋಸದ ತಂತ್ರಗಾರಿಕೆ ಅರಿತ ಸಂಘದ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಹಾಗೂ ದಿವಂಗತ ಸಿ.ಕೆ.ಜಯರಾಮಣ್ಣನವರ ನೇತೃತ್ವದಲ್ಲಿ ಹಲವಾರು ಮುಖಂಡರು, ಕಾರ್ಯ ಕರ್ತರು ಮಾದಿಗ ದಂಡೋರ ಸಂಘಟನೆ ಸ್ಥಾಪಿಸಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಜನರನ್ನು ಸಂಘಟಿಸಿ ಹಲವಾರು ಚಳವಳಿ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡಲು ಆಯೋಗ ರಚಿಸಿ ಪರಿಶಿಷ್ಟ ಜಾತಿ ಜಾತಿವಾರು ಜನಗಣತಿ ಮಾಡುವಂತೆ ಒತ್ತಾಯಿಸಲಾಗಿತ್ತು. 

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚನೆಯಾಗಿ ರಾಜ್ಯಾದ್ಯಂತ ಸಮೀಕ್ಷೆ ಮಾಡಿ ವರದಿಯನ್ನು ಸರ್ಕಾರಕ್ಕೆ ನೀಡಿದೆ. ವರದಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮಾದಿಗ ಜಾತಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಗುರುತಿಸಿದೆ. ಮಾದಿಗ ಸಮಾಜಕ್ಕೆ ಶೇ.6, ಇದರ ಉಪಜಾತಿಗಳಿಗೆ ಶೇ.1 ರಷ್ಟು ಒಟ್ಟು ಶೇ.7 ರಷ್ಟು ಮೀಸಲಾತಿ ನೀಡಬೇಕು
ಎಂದು ತಿಳಿಸಿದೆ. ಆದರೆ ವರದಿ ಸಲ್ಲಿಸಿ ನಾಲ್ಕು ವರ್ಷಗಳೇ ಮುಗಿದರೂ ಸರ್ಕಾರ ವರದಿ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಿ ಶಿಫಾರಸು ಮಾಡದೇ ಕಡೆಗಣಿಸಿದೆ ಎಂದು ಆರೋಪಿಸಿದರು.

Advertisement

ಸಮುದಾಯ ರಾಜಕೀಯ ಹಿನ್ನೆಡೆ: ರಾಜ್ಯ ಮಾದಿಗ ದಂಡೋರ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಕರ್ನಾಟಕ ಮಾದಿಗ ದಂಡೋರ ಮತ್ತು ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಸೆ.27ರಂದು ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಜಾಂಬವ ಜಯಂತಿ, ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರಿಗೆ ಸನ್ಮಾನ ಮತ್ತು ಸದಸ್ಯತ್ವ ನೋಂದಣಿ ಅಭಿಯಾನ, ಸ್ಥಳೀಯ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಶಾಸಕ ಪಿಳ್ಳಮುನಿಶಾಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸಮುದಾಯ ರಾಜಕೀಯವಾಗಿಯೂ ಹಿನ್ನೆಡೆಯಾಗುತ್ತಿದೆ. ಇಂಥ ವಂಚನೆಯಿಂದ ಹೊರಬೇಕಾದರೆ ನಾವೆಲ್ಲರೂ ಪಕ್ಷಭೇದ ಮರೆತು ಸಂಘಟಿತರಾಗಬೇಕು ಎಂದರು.

ಸಮುದಾಯದವರಿಗೆ ಟಿಕೆಟ್‌: ಜಿಪಂ ಮಾಜಿ ಸದಸ್ಯ ಚಂದೇನಹಳ್ಳಿ ಮುನಿಯಪ್ಪ, 2018ರ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದವರಿಗೆ ಟಿಕೆಟ್‌ ನೀಡಬೇಕು ಎಂದು ಒಕ್ಕೊರಲಿ ಧ್ವನಿ ಇರಬೇಕು. ಮುಖಂಡರು ತಾಲೂಕಿನಾದ್ಯಂತ ಹಳ್ಳಿಹಳ್ಳಿಗಳಿಗೆ ಸಂಚರಿಸಿ ಜನರಿಗೆ ಈ ವಿಚಾರ ಮನವರಿಕೆ ಮಾಡಿಕೊಡಬೇಕು ಎಂದು
ಸಲಹೆ ಮಾಡಿದರು. 

ಈ ಸಂದರ್ಭದಲ್ಲಿ ಮಾದಿಗ ದಂಡೋರ ತಾಲೂಕು ಪ್ರಧಾನ ಕಾರ್ಯದರ್ಶಿ ಎಲ್‌.ಮುನಿರಾಜು, ಪುರಸಭೆ ಮಾಜಿ
ಅಧ್ಯಕ್ಷ ಎಂ.ನಾರಾಯಣಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ವಿ.ಹನುಮಂತಪ್ಪ, ಭೂ ನ್ಯಾಯಮಂಡಳಿ ಸದಸ್ಯ ಮುನಿರಾಜ್‌, ಕಸಬಾ ಹೋಬಳಿ ಅಧ್ಯಕ್ಷ ಗೋಖರೆ ಮುನಿಕೃಷ್ಣಪ್ಪ, ಟೌನ್‌ ಅಧ್ಯಕ್ಷ ಶ್ರೀನಿವಾಸ್‌, ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಎಸ್‌ಸಿ ವಿಭಾಗದ ಅಧ್ಯಕ್ಷ ಬೈಚಾಪುರ ರಾಜಣ್ಣ, ಸಂಚಾಲಕ ಆನಂದ್‌, ಮುಖಂಡ ಡಿ.ಆರ್‌.ಬಾಲರಾಜ್‌, ಮುನಿರಾಜ್‌, ಶ್ರೀರಾಮ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next