Advertisement

ಶಿಕ್ಷಣ ಇಲಾಖೆ ವಿರುದ್ಧ ಸದಸ್ಯರು ಗರಂ

03:42 PM Aug 23, 2019 | Team Udayavani |

ಹೊನ್ನಾಳಿ: ಶಿಕ್ಷಣ ಇಲಾಖೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ತಾಪಂ ಉಪಾಧ್ಯಕ್ಷ ಎಸ್‌.ಪಿ. ರವಿಕುಮಾರ್‌ ಆರೋಪಿಸಿದರು.

Advertisement

ಗುರುವಾರ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ತಾಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳು ಬರುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಇತರ ಕಾರ್ಯಕ್ರಮಕ್ಕೆ ತಾಪಂ ಸದಸ್ಯರನ್ನು ಅಹ್ವಾನಿಸದೆ ತಮ್ಮಷ್ಟಕ್ಕೆ ತಾವೇ ಸಭೆ ಸಮಾರಂಭಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.

•ಸೈಕಲ್ ಜೋಡಣೆ ಸರಿಯಿಲ್ಲ: ಸರಕಾರದಿಂದ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಸೈಕಲ್ಗಳ ಜೋಡಣೆ ಸರಿಯಾಗಿ ಮಾಡದಿರುವುದರಿಂದ ಮಕ್ಕಳ ಪೋಷಕರು ಆಟೋದಲ್ಲಿ ಸೈಕಲ್ ಒಯ್ಯುವಂತಾಗಿದೆ. ಆದ್ದರಿಂದ ಜೋಡಣೆ ಸರಿಯಾಗಿ ಮಾಡಿಸಿ, ಮಕ್ಕಳು ಶಾಲೆಯಿಂದ ಸೈಕಲ್ ತುಳಿದುಕೊಂಡು ಹೋಗುವಂತಾಗಬೇಕು ಎಂದು ಹೇಳಿದರು.

ಉಚಿತ ಸೈಕಲ್ ಪಡೆದು ಸರಿಯಾದ ಜೋಡಣೆಗೆ ಪೋಷಕರು ಮತ್ತೆ 200 ರಿಂದ 300 ರೂ. ಖರ್ಚು ಮಾಡುವ ಪರಿಸ್ಥಿತಿ ಇದ್ದು, ಸರಕಾರ ಒಂದು ಸೈಕಲ್ ಜೋಡಣೆಗೆ 250 ರೂ. ಕೊಡುತ್ತಿದೆ. ಟೆಂಡರ್‌ ಪಡೆದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪೋಷಕರು ನಮ್ಮನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.

Advertisement

ಬಿಇಒ ಪರವಾಗಿ ಸಭೆಗೆ ಆಗಮಿಸಿದ್ದ ಇಸಿಒ ಮುದ್ದನಗೌಡ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

•ಬಯೋಮೆಟ್ರಿಕ್‌ ಏನಾಯ್ತು?: ಈ ಹಿಂದಿನ ಸಭೆಯಲ್ಲಿ ಶಾಲೆಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಬೇಕೆಂದು ತಿಳಿಸಲಾಗಿತ್ತು. ಇದು ಕಾರ್ಯಗತವಾಗಿಲ್ಲ ಏಕೆ ಎಂದು ಇಸಿಒ ಅವರನ್ನು ಪ್ರಶ್ನಿಸಿದರು. ಇದಕ್ಕೆ ಇಸಿಒ ಮುದ್ದನಗೌಡ ಉತ್ತರಿಸಿ, ಇಲಾಖೆಯಲ್ಲಿ ಅನುದಾನವಿಲ್ಲ. ತಾಪಂ ಸದಸ್ಯರು ಅನುದಾನ ಬಿಡುಗಡೆಗೊಳಿಸಿದರೆ ತಕ್ಷಣ ಬಯೋಮೆಟ್ರಿಕ್‌ ಅಳವಡಿಸಲಾಗುವುದು ಎಂದರು.

•ನಿನಮಗೆ ಕಂಡಿದ್ದು ನಿಮಗೆ ಕಾಣಲ್ವಾ?: ಪಟ್ಟಣದ ಅಗ್ರಹಾರ ಬಳಿ ಇರುವ ಸ್ವಾಮಿ ವಿವೇಕಾನಂದ ಶಾಲಾ ಮಕ್ಕಳು ಶೌಚಕ್ಕೆಂದು ನದಿ ಬಳಿ ಹೋಗುತ್ತಾರೆ. ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ತಾಪಂ ಉಪಾಧ್ಯಕ್ಷ ಎಸ್‌.ಪಿ. ರವಿಕುಮಾರ್‌ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶಪ್ಪ ಪ್ರಶ್ನಿಸಿದರು.

ನೆರೆ ಹಾವಳಿ ಬಂದ ಸಂದರ್ಭದಲ್ಲಿ ನಾವು ಪ್ರವಾಹ ವೀಕ್ಷಿಸಲು ಅಗ್ರಹಾರದ ಬಳಿ ತೆರಳಿದಾಗ ವಿದ್ಯಾರ್ಥಿಗಳು ಬಯಲಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ನೋಡಿದ್ದೇವೆ. ನಮ್ಮ ಕಣ್ಣಿಗೆ ಬೀಳುವ ದೃಶ್ಯಗಳು ಇಲಾಖೆ ಅಧಿಕಾರಿಗಳಿಗೇಕೆ ಕಾಣುವುದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇರಬೇಕು. ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಶಾಲೆಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

•14,028 ಎಕರೆ ಬೆಳೆ ಹಾನಿ: ತೋಟಗಾರಿಕೆ ಇಲಾಖೆ ನಿರ್ದೇಶಕ ಜಿ.ಶಂಕರ್‌ ಇಲಾಖೆಯ ವರದಿ ಮಂಡಿಸಿ, ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಲ್ಲಿ 14,028 ಎಕರೆ ತೋಟಗಾರಿಕೆ ಬೆಳೆಗಳಲ್ಲಿ 1340 ಎಕರೆ ಅಡಿಕೆ, 150 ಎಕರೆ ತೆಂಗು, 95 ಎಕರೆ ವೀಳ್ಯದೆಲೆ, 45 ಎಕರೆ ಬಾಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಅವಳಿ ತಾಲೂಕಿನ ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್‌ ಮಾತನಾಡಿ, ಆಗಸ್ಟ್‌ನಲ್ಲಿ ವಾಡಿಕೆ ಮಳೆ 398 ಮೀ.ಮೀ ಇದ್ದು, ಶೇ. 15 ಹೆಚ್ಚು 458 ಮೀ.ಮೀ ಮಳೆಯಾಗಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಸಿರಿಧಾನ್ಯ ಯೋಜನೆಯಲ್ಲಿ ಉದ್ದು, ನವಣೆ ಇತರ ಬೆಳೆಗಳಿಗೆ ಹೆಕ್ಟರ್‌ಗೆ 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಆ. 31 ಕೊನೆ ದಿನವಾಗಿದೆ ಎಂದು ನುಡಿದರು.

ತಾ.ಪಂ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ತಾ.ಪಂ ಇಒ ಗಂಗಾಧರಮೂರ್ತಿ, ತಾ.ಪಂ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next