ಬಾಲ್ಯ ಎನ್ನುವುದು ಎಲ್ಲರ ಜೀವನದಲ್ಲೂ ಹಾಗೇ ಬಂದು ಹೋಗುವ ನೆಪವಲ್ಲ. ಅದೊಂದು ಸುಂದರವಾದ ಕಲ್ಪನೆಗೂ ಮೀರಿದ ಕೈಗೂ ಎಟುಕದ ನಕ್ಷತ್ರದಂತೆ. ನಕ್ಷತ್ರಗಳು ಆಕಾಶದಲ್ಲಿ ಹೇಗೆ ಮಿನುಗುತ್ತವೆಯೊ ಹಾಗೆ ಬಾಲ್ಯವೂ ಕೂಡ ಪ್ರತಿದಿನವೂ ಆಟ, ಪಾಠ, ತಂಟೆ ಮತ್ತು ತುಂಟಾಟಗಳಿಂದ ಕೂಡಿರುತ್ತದೆ.
ಆ ವಯಸ್ಸಿನಲ್ಲಿ ಆಡದ ಆಟಗಳೇ ಇಲ್ಲ. ಒಂದೊಂದು ಆಟವೂ ಒಂದೊಂದು ಘಟನೆಯನ್ನು ನೆನಪಿಸುತ್ತದೆ. ಅದರಲ್ಲೂ ಪ್ರಾಥಮಿಕ ಶಾಲೆಯಲ್ಲಿ ಆದಂಥ ಅನುಭವ, ಮಾಡಿದಂತಹ ತರಲೆಗಳು, ಹೇಳಿದಂತಹ ಸುಳ್ಳುಗಳು ಒಂದೇ, ಎರಡೇ ಹೇಳಲು ದಿನಗಳು ಸಾಲಲ್ಲ. ಸುಳ್ಳು ಮತ್ತು ಬಾಲ್ಯ ಅವಳಿ-ಜವಳಿ ಇದ್ದಂತೆ. ಏಕೆಂದರೆ, ಬಾಲ್ಯದಲ್ಲಿ ನಾವು ಅಮ್ಮನಿಂದ ಹಿಡಿದು ಶಾಲೆಯಲ್ಲಿ ಪಾಠವನ್ನು ಹೇಳಿಕೊಡುವ ಗುರುಗಳಿಗೂ ಒಂದಲ್ಲ ಒಂದು ರೀತಿಯಲ್ಲಾದರೂ ಸುಳ್ಳನ್ನು ಹೇಳಿರುತ್ತೇವೆ.
ಸುಳ್ಳು ಎಂದಾಕ್ಷಣ ನನಗೆ ನೆನಪಾಗೋದು ಗಣಿತ ಟೀಚರ್‌ನ ಕೈ ನನ್ನ ಕೆನ್ನೆಯನ್ನು ಕೆಂಪು ಮಾಡಿದ್ದು. ಹೌದು, ಬಾಲ್ಯದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮುಂದೆ ಆಗುವ ಅವಮಾನವನ್ನು ತಪ್ಪಿಸಿಕೊಳ್ಳೋಕೆ ಹೋಗಿ ದೊಡ್ಡ ಅವಾಂತರವೇ ಆಗಿದ್ದೂ ಇದೆ.
ನಾನು ಏಳನೆಯ ತರಗತಿಯಲ್ಲಿ ಓದುತ್ತಿರುವಾಗ ಆದಂಥ ಘಟನೆ ಇದು. ಬೇಸಿಗೆ ರಜೆ ಮುಗಿಸಿ ಶಾಲೆ ಪ್ರಾರಂಭವಾಗಿ ಒಂದು ವಾರ ಕಳೆದಿತ್ತು ಅಷ್ಟೆ. ಬೆಳಗಿನ ಅವಧಿ ಗಣಿತ ತರಗತಿ. ನನಗೆ ಗಣಿತ ಪಾಠ ಕೇಳಲು ಎಲ್ಲಿಲ್ಲದ ಉತ್ಸಾಹ. ಮನೆಗೆ ಕೊಟ್ಟ ಹೋಂವರ್ಕ್‌ನ್ನು ಮುಗಿಸಿ ಮುಂದಿನ ಲೆಕ್ಕವನ್ನೂ ಮಾಡಿಕೊಂಡು ಬಂದಿದ್ದೆ. ಆದ್ರೆ ಅವತ್ತು ತರಗತಿಯಲ್ಲಿ ಯಾರೊಬ್ಬರೂ ಲೆಕ್ಕವನ್ನು ಮಾಡಿರಲಿಲ್ಲ. ಉಳಿದವರಿಗೆ ಪನಿಷ್ಮೆಂಟ್ ಕೊಟ್ಟಿದ್ದರು. ಅಂದು ನನಗೆ ತುಂಬಾ ಖುಷಿಕೊಟ್ಟಿತ್ತು.
ಅಂದಿನಿಂದ ಟೀಚರ್‌ಗೆ ನನ್ನ ಮೇಲೆ ವಿಶ್ವಾಸ ಬೆಳೆದಿತ್ತು. ಹೀಗೆ ಇನ್ನೊಂದು ದಿನ ಹೋಮ್‌ವರ್ಕ್ ಮಾಡಲು ಕೊಟ್ಟಿದ್ದರು. ಅಂದು ನನ್ನ ಗ್ರಹಚಾರ ಸರಿಯಿರಲಿಲ್ಲ ಅಂತ ಕಾಣಿಸುತ್ತೆ. ತರಗತಿಯ ಎಲ್ಲರೂ ಹೋಮ್‌ವರ್ಕ್ ಮಾಡಿದ್ದರು, ನಾನೂ ಮಾಡಿದ್ದೆ. ಆದರೆ, ಪೂರ್ತಿಗೊಳಿಸಿರಲಿಲ್ಲ. ಟೀಚರ್ ಪ್ರತಿಯೊಬ್ಬರ ಹೋಮ್‌ವರ್ಕ್ ನೋಡುತ್ತ ಬರುತ್ತಿದ್ದರು. ಅದನ್ನು ನೋಡಿ ನನಗೆ ಎಲ್ಲಿ ನನ್ನ ನೋಟ್ಸ್ ನೋಡಿ ಎಲ್ಲರ ಮುಂದೆ ಹೊಡೆಯುತ್ತಾರೋ ಎಂದು ಭಯವಾಗುತ್ತಿತ್ತು. ನನ್ನನ್ನು ಕೇಳಿದರು, “ರವಿ ಹೋಮ್‌ವರ್ಕ್ ಮಾಡಿದ್ಯಾ?’ ಎಂದು. ತಟ್ಟನೆ, “ಮಾಡಿದ್ದೇನೆ ಟೀಚರ್’ ಎಂದು ಉತ್ತರಿಸಿದೆ. ಆದರೆ, ಅದೇಕೋ ಟೀಚರ್‌ಗೆ ನನ್ನ ಮೇಲೆ ಸಂಶಯ ಬಂದಿತ್ತು. “ನೋಟ್ಸ್ ತಗೊಂಡು ಬಾ’ ಎಂದು ಹೇಳಿದರು.
ಟೀಚರ್ ನೋಟ್ಸ್ ನೋಡಿ, “ಎಲ್ಲಿದೆ ಹೋಮ್‌ವರ್ಕ್?’ ಎಂದು ಸಿಟ್ಟಿನಿಂದ ಕಪಾಳಕ್ಕೆ ಹೊಡೆದು ಕೆನ್ನೆಯನ್ನು ಚಿವುಟಿದರು. “ಹೋಮ್‌ವರ್ಕ್ ಆಗಿದೆ ಎಂದು ಸುಳ್ಳು ಹೇಳ್ತಿಯ’ ಎಂದು ಕ್ಲಾಸಿನಿಂದ ಹೊರಗೆ ಹಾಕಿದರು. ನನ್ನ ಕೆನ್ನೆಯ ಮೇಲೆ ಅವರ ಹೊಡೆತದಿಂದ ಕೆನ್ನೆ ಕೆಂಪಾಗಿತ್ತು. ಕಣ್ಣಲ್ಲಿ ನೀರು ಸುರಿಯುತ್ತಿತ್ತು.
ಅಂದಿನಿಂದ ಟೀಚರ್‌ಗೆ ನನ್ನ ಮೇಲೆ ನಂಬಿಕೆ ಹೋಯಿತು. ನನ್ನನ್ನು ಕಂಡರೆ ಅವರಿಗೆ ಅಷ್ಟಕ್ಕಷ್ಟೆ. ಆವತ್ತಿನಿಂದ ಟೀಚರ್ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಛೇ, ನಾನೇಕೆ ಹೀಗೆ ಮಾಡಿದೆ. ಲೆಕ್ಕ ಮಾಡಿರಲಿಲ್ಲ ನಿಜ. ಆದರೆ ಲೆಕ್ಕ ಮಾಡಿದ್ದೇನೆ ಎಂದು ಸುಳ್ಳು ಹೇಳಬಾರದಿತ್ತು. ನಿಜವನ್ನು ಹೇಳಿದ್ದರೆ ಮೊದಲು ಸಂಪಾದಿಸಿದ್ದ ನಂಬಿಕೆ ಇವತ್ತಿಗೂ ಹಾಗೆ ಉಳಿಯುತ್ತಿತ್ತು.
ಏನೇ ಇರಲಿ, ಅಂದು ಮಾಡಿದ ತಪ್ಪಿಗೆ ಇವತ್ತಿಗೂ ಗಣಿತ ಎಂದಾಕ್ಷಣ ನನಗೆ ನೆನಪಾಗೋದು ಏಳನೆಯ ತರಗತಿಯ ಗಣಿತ ಟೀಚರ್! ಆ ಒಂದು ಸುಳ್ಳಿನಿಂದಾಗಿ ಇವತ್ತಿಗೂ ಪಶ್ಚಾತ್ತಾಪ ಪಡುತ್ತಿರುತ್ತೇನೆ.
ರವಿರಾಜ್, ಪತ್ರಿಕೋದ್ಯಮ ವಿಭಾಗ, ಎಂ.ಜಿ.ಎಂ. ಕಾಲೇಜು, ಉಡುಪಿ