ಶಹಾಪುರ: ನಗರದ ಫಿಲ್ಟರ್ ಬೆಡ್ ಪ್ರದೇಶದಲ್ಲಿ ಇನ್ನೂ ಸುಮಾರು ಎರಡು ನೂರು ನಿವೇಶನಗಳಿದ್ದು, ಅವುಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಗುರುತಿಸಲಾಗಿದ್ದು, ಈ ಖಾಲಿ ನಿವೇಶನಗಳನ್ನು ಸೂರು ವಂಚಿತ ಫಲಾನುಭವಿಗಳಿಗೆ ಹಂಚಿಕೆ ಮಾಡುವುದರ ಜೊತೆಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಫಿಲ್ಟರ್ ಬೆಡ್ ಏರಿಯಾದಲ್ಲಿ ಇನ್ನುಳಿದ ನಿವೇಶನಗಳ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ನಗರದ ಬಸ್ ಡಿಪೋ ಹಿಂದಿರುವ ಆಶ್ರಯ ಕಾಲೋನಿಯಲ್ಲಿ 509 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಅದರಲ್ಲಿ ಇನ್ನುಳಿದ 132 ಫಲಾನುಭವಿಗಳಿಗೆ ನಿವೇಶನ ಜಾಗ ಕೊರತೆಯಿಂದಾಗಿ ಅವರಿಗೆ ಇದುವರೆಗೂ ನಿವೇಶನ ಕಲ್ಪಿಸಲಾಗಿಲ್ಲ. ಆ ಫಲಾನುಭವಿಗಳಿಗೆ ಇಲ್ಲಿ ನಿವೇಶನ ನೀಡಲಾಗುವುದು. ಇನ್ನು ಹೆಚ್ಚಿಗೆ ಉಳಿದ ನಿವೇಶನಗಳನ್ನು ಸೂರು ವಂಚಿತ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಹಂಚಿಕೆ ಮಾಡುವುದರ ಜೊತೆ ಮನೆ ನಿರ್ಮಿಸಿಕೊಡಲಾಗುವುದು. ಈ ನಿವೇಶನಗಳ ಫಲಾನುಭವಿಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ವಿದ್ಯುತ್ ಸೌಕರ್ಯ ಒದಗಿಸಿಕೊಡಲಾಗುವುದು. ನನ್ನ ಮತಕ್ಷೇತ್ರದಲ್ಲಿ ಸೂರು ವಂಚಿತ ಕುಟುಂಬಗಳು ಇರಬಾರದೆಂಬ ಸಂಕಲ್ಪ ಮಾಡಿದ್ದು, ಅದನ್ನು ಪ್ರಾಮಾಣಿಕವಾಗಿ ನಿವಾರಿಸುವಲ್ಲಿ ಯತ್ನಿಸುವೆ ಎಂದರು.
ನೀರು ಸರಬರಾಜು ಕಾಮಗಾರಿ ಪರಿಶೀಲನೆ
ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ 56.86 ಕೋಟಿ ವೆಚ್ಚದಲ್ಲಿ ನಡೆದ ನಗರಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿ ಭರದಿಂದ ಸಾಗಿದೆ. ಅಲ್ಲದೇ ಕೆಕೆಆರ್ ಡಿಬಿ ಯೋಜನೆಯಲ್ಲಿ 16 ಕೋಟಿ ವೆಚ್ಚದಲ್ಲಿ 16 ಎಂಎಲ್‌ಡಿ ನೀರು ಶುದ್ಧೀಕರಿಸಿ ನಗರಕ್ಕೆ ಸರಬರಾಜು ಮಾಡುವ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಇನ್ನು ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕಾಮಗಾರಿಯಿಂದ ನಗರಕ್ಕೆ ಬಹಳ ವರ್ಷಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಇಡಿ ನಗರಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ಅಲ್ಲದೇ ನಗರದಲ್ಲಿ ಬಹಳ ವರ್ಷಗಳ ಹಿಂದೆ ಹಾಕಲಾದ ಕುಡಿಯುವ ನೀರು ಸರಬರಾಜು ಪೈಪ್ ಲೈನ್‌ಗಳು ಒಡೆದು ಅಲ್ಲಲ್ಲಿ ಹಾಳಾಗಿ ಹೋಗಿವೆ. ಹೊಸ ಪೈಪ್‌ಲೈನ್ ಅಳವಡಿಕೆಗೆ ಅಂದಾಜು 80 ಕೋಟಿ ರೂ. ವೆಚ್ಚವಾಗಲಿದ್ದು, ಈ ಕುರಿತು ಅನುದಾನ ಮಂಜೂರಾತಿ ನೀಡುವಂತೆ ಈಗಾಗಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ರಾಜುಗೌಡರಿಗೆ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಮನವಿ ಮಾಡಲಾಗಿದ್ದು, ಈ ವರ್ಷ ಅವರಿಂದ ಹಣ ಮಂಜೂರಾತಿ ದೊರೆಯುವ ಭರವಸೆ ಇದೆ. ಇದಕ್ಕೆ ಇಬ್ಬರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರುಪುಕರ್, ನಗರಸಭೆ ಅಮಲಪ್ಪ ಬಾದ್ಯಾಪುರ, ಪೌರಾಯುಕ್ತರಾದ ಓಂಕಾರ ಪೂಜಾರಿ, ಎಇಇ ನಾನಾಸಾಹೇಬ್, ಪರಿಸರ ಅಭಿಯಂತರ ಹರೀಶ್ ಸಜ್ಜನಶೆಟ್ಟಿ, ಜೆಇ ಮಲ್ಲಿಕಾರ್ಜುನ, ಮುಖಂಡರಾದ ನ್ಯಾಯವಾದಿ ಚಂದ್ರಶೇಖರ ಲಿಂಗದಹಳ್ಳಿ, ಶಿವಮಾಂತ ಚಂದಾಪುರ, ಮಹಾದೇವಪ್ಪ ಸಾಲಿಮನಿ, ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ವಿಜಯಕುಮಾರ ಎದುರಮನಿ, ಯಲ್ಲಪ್ಪ ಮಾಸ್ತರ ಹಳ್ಳಿಕಟ್ಟಿ, ಕಾಂಗ್ರೆಸ್ ಉಪಾಧ್ಯಕ್ಷ ಬಸವರಾಜ ನಾಯ್ಕಲ್ ಸೇರಿದಂತೆ ಇತರರಿದ್ದರು.