ಕಾರವಾರ: ಬರುವ ಆ.15 ರಂದು ಕಾರವಾರ ನಗರಸಭೆಯ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯ ಮನೆಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ತಿಳಿಸಿದ್ದಾರೆ.
ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಕಾರವಾರದ ಪಂಚಋಷಿವಾಡದಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ನಗರಸಭೆಯಿಂದ ನಿರ್ಮಿಸಿರುವ ನಾಲ್ಕು ಅಂತಸ್ತುಗಳ 16 ಸುಸಜ್ಜಿತ ಮನೆಗಳ ಕಟ್ಟಡ ಕಾಮಗಾರಿ ವೀಕ್ಷಿಸಿದ ಅವರು, ಕಾರವಾರ ನಗರಸಭೆಯ 36 ಪೌರ ಕಾರ್ಮಿಕರಿಗೆ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಂಡುವ ಯೋಜನೆಯಲ್ಲಿ ಈಗಾಗಲೇ 16 ಮನೆಗಳು ಅತ್ಯಂತ ಗುಣಮಟ್ಟದಲ್ಲಿ ನಿರ್ಮಾಣವಾಗಿದ್ದು ಆ.15 ರಂದು ಪೌರಕಾರ್ಮಿಕರಿಗೆ ವಿತರಿಸಲಾಗುವುದು ಎಂದು ಹೇಳಿದರು.
ಪ್ರತಿ ಮನೆಗೆ 11.50 ಲಕ್ಷ ರೂ.ನಂತೆ ಮನೆಗಳನ್ನು ನಿರ್ಮಿಸಲಾಗಿದ್ದು ಇದಕ್ಕಾಗಿ 2.55 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಾಕಿ ಇರುವ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಲು ಬರುವ ಆ.15 ರೊಳಗೆ ಭೂಮಿ ಪೂಜೆ ಮಾಡಲಾಗುವುದು. 2020ರ ಆ.15 ರೊಳಗೆ ಅವರಿಗೂ ಮನೆಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡುವ ಸರ್ಕಾರದ ಚಿಂತನೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಕಾರವಾರದಲ್ಲಿ ಸರ್ಕಾರದ ಆಶಯ ಈಡೇರಿದಂತಾಗಿದೆ. ಕಾರವಾರ ನಗರಸಭೆ ಅಧಿಕಾರಿಗಳು ಈ ಬಗ್ಗೆ ಆಸಕ್ತಿ ವಹಿಸಿ ಗುಣಮಟ್ಟದ ಮನೆಗಳನ್ನು ಎಲ್ಲದಕ್ಕೂ ಅನುಕೂಲವಾಗುವ ಹಾಗೆ ಹೆದ್ದಾರಿ ಪಕ್ಕದಲ್ಲಿಯೇ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಎಂದರು.
ಪೌರಕಾರ್ಮಿಕರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ: ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪೌರ ಕಾರ್ಮಿಕರಿಗೆ ವಸತಿ ಭಾಗ್ಯ ಕಲ್ಪಿಸುವ ಯೋಜನೆ ರೂಪಿಸಿ, ರಾಜ್ಯದ ಹಲವು ನಗರಸಭೆಗಳಿಗೆ ಹಣ ಮಂಜೂರು ಮಾಡಿದ್ದರು. ಕಾರವಾರ ನಗರಸಭೆಗೆ 32 ಕಾರ್ಮಿಕರಿಗೆ ಮನೆಗಳ ಭಾಗ್ಯ ಲಭ್ಯವಾಗಿತ್ತು. ಈ ಪೈಕಿ 16 ಕಾರ್ಮಿಕರ ಕನಸು ನನಸಾಗುತ್ತಿದ್ದು, ಉಳಿದ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಗೊಳಿಸಲು ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಆಸಕ್ತಿ ವಹಿಸಿದ್ದು, ಗುರುವಾರ ಹಲವು ಪೌರಕಾರ್ಮಿಕರ ಜೊತೆ ಖುದ್ದಾಗಿ ಮಾತನಾಡಿದರು. ಇದು ಹಲವು ಪೌರಕಾರ್ಮಿಕರ ನೈತಿಕ ಶಕ್ತಿ ಹೆಚ್ಚಿಸಿತು. ನಗರಸಭೆ ಆಯುಕ್ತ ಎಸ್.ಯೋಗೇಶ್ವರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೋಹನ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.