ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದಶಕಗಳಿಂದ ನಗರದ ಸ್ವತ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಪೌರಕಾರ್ಮಿಕರಿಗೆ “ಗೃಹಭಾಗ್ಯ’ ಸೌಲಭ್ಯ ದೊರೆಯದಂತಾಗಿದೆ.
ನಗರದ ಸ್ವತ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರಿಗೆ ನೆತ್ತಿ ಮೇಲೊಂದು ಸೂರು ಕಲ್ಪಿಸುವ ಉದ್ದೇಶದಿಂದ 2014-15ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಘೋಷಿಸಿತ್ತು. ಜತೆಗೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಅನುದಾನವನ್ನೂ ಮೀಸಲಿರಿಸಿತು. ಆದರೆ, ಪಾಲಿಕೆಯ ಅಧಿಕಾರಿಗಳು ಬಿಡಿಎಗೆ ಸಲ್ಲಿಸಬೇಕಾದ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ವರ್ಷ ಕಳೆದರೂ ಪೌರಕಾರ್ಮಿಕರಿಗೆ ಮನೆ ಸಿಗದಂತಾಗಿದೆ.
ಬಿಬಿಎಂಪಿಯ ಮೂರು ವಲಯಗಳಿಂದ 249 ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಅಲೂರು ಬಳಿ ಬಿಡಿಎ ವತಿಯಿಂದ ನಿರ್ಮಿಸಿರುವ ವಸತಿ ಸಮುತ್ಛಯಗಳಲ್ಲಿ ಅವರಿಗೆ ಫ್ಲ್ಯಾಟ್ ಹಂಚಿಕೆ ಮಾಡಲು ಈಗಾಗಲೇ ಸರ್ಕಾರ ಪಟ್ಟಿಗೆ ಅನುಮೋದನೆ ನೀಡಿತ್ತು.ಆದರೆ, ಬಿಡಿಎ ವತಿಯಿಂದ ಫ್ಲ್ಯಾಟ್ ಪಡೆಯಲು ನೀಡಬೇಕಾದ ಅರ್ಜಿಗಳನ್ನು ಈವರೆಗೆ ಸಲ್ಲಿಸದ ಕಾರಣದಿಂದ ಫಲಾನುಭವಿಗಳು ಆಯ್ಕೆಯಾದರೂ 249 ಪೌರಕಾರ್ಮಿಕರಿಗೆ “ಗೃಹಭಾಗ್ಯ’ ದೊರೆತಿಲ್ಲ.
ಭರ್ತಿ ಮಾಡಿಲ್ಲ: ಪೌರಾಡಳಿತ ಇಲಾಖೆಯೇ ಸ್ವತಃ ಬಿಡಿಎ ಫ್ಲ್ಯಾಟ್‌ಗಳ ಖರೀದಿಗೆ ಸಲ್ಲಿಸಬೇಕಾದ ಅರ್ಜಿಗಳನ್ನು ಖರೀದಿಸಿ ಭರ್ತಿ ಮಾಡಿಕೊಡುವಂತೆ ಪಾಲಿಕೆಗೆ ಕಳುಹಿಸಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಕೇವಲ 10 ಅರ್ಜಿಗಳನ್ನು ಮಾತ್ರ ಭರ್ತಿ ಮಾಡಿದ್ದು, ಇನ್ನು 239 ಅರ್ಜಿಗಳನ್ನು ಭರ್ತಿ ಮಾಡಿ ಬಿಡಿಎಗೆ ಸಲ್ಲಿಕೆ ಮಾಡಬೇಕಿದೆ. ಹೀಗಾಗಿ ಪೌರಕಾರ್ಮಿಕರಿಗೆ ಫ್ಲ್ಯಾಟ್ ವಿತರಣೆ ವಿಳಂಬವಾಗುತ್ತಿದೆ ಎನ್ನುತ್ತಾರೆ ಪೌರಾಡಳಿತ ಇಲಾಖೆ ಅಧಿಕಾರಿಗಳು.
ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಕಾರ್ಮಿಕರಿಗೆ ಉಚಿತವಾಗಿ ಫ್ಲ್ಯಾಟ್ ಹಂಚಿಕೆ ಮಾಡುವ ಯೋಜನೆ ಇದಾಗಿದ್ದು, ಫ್ಲ್ಯಾಟ್ ಖರೀದಿಗೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಭರಿಸಲಿವೆ. ಅದರಂತೆ ಒಂದು ಫ್ಲ್ಯಾಟ್‌ಗೆ ರಾಜ್ಯ ಸರ್ಕಾರ 6 ಲಕ್ಷ ರೂ. ಹಾಗೂ ಪಾಲಿಕೆ 3 ಲಕ್ಷ ರೂ. ಪಾವತಿಸಲಿದ್ದು, ಪೌರಕಾರ್ಮಿಕರು ಯಾವುದೇ ಹಣ ಪಾವತಿಸಬೇಕಿಲ್ಲ.
ಪಾಲಿಕೆಯಿಂದ ನೀಡಲಾದ ಫಲಾನುಭವಿಗಳ ಪಟ್ಟಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಆದರೆ, ಫ್ಲ್ಯಾಟ್‌ಗಳನ್ನು ಪಡೆಯಲು ಬಿಡಿಎ ನಿಯಮಾವಳಿ ಪ್ರಕಾರ ಅರ್ಜಿ ಭರ್ತಿ ಮಾಡಬೇಕಿದೆ. ಅರ್ಜಿಗಳನ್ನು ಇಲಾಖೆಯಿಂದಲೇ ಖರೀದಿಸಿ ಪಾಲಿಕೆಗೆ ನೀಡಿದ್ದರೂ ಈವರೆಗೆ ಪಾಲಿಕೆ ಅರ್ಜಿಗಳನ್ನು ಭರ್ತಿ ಮಾಡಿಸಿ ಬಿಡಿಎಗೆ ಸಲ್ಲಿಸಿಲ್ಲ.
-ರೇಣುಕಾ, ಮುಖ್ಯ ಯೋಜನಾ ಅಧಿಕಾರಿ, ಪೌರಾಡಳಿತ ಇಲಾಖೆ
ಪಾಲಿಕೆಯ ಮೂರು ವಲಯಗಳಲ್ಲಿ ಅರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಗುರುತಿಸಿ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಜತೆಗೆ ಬಿಬಿಎಂಪಿ ವತಿಯಿಂದ ಪಾವತಿಸಬೇಕಾದ ಮೊತ್ತವನ್ನು ಸಹ ಪೌರಾಡಳಿತ ಇಲಾಖೆಗೆ ಪಾವತಿಸಲಾಗಿದೆ.
-ಸಾವಿತ್ರಿ, ವಿಶೇಷ ಆಯುಕ್ತರು (ಆಡಳಿತ)
* ವೆಂ. ಸುನೀಲ್‌ಕುಮಾರ್