Advertisement
18 ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೋರ್ವರಿಗೆ ವಾಹನವೊಂದು ಢಿಕ್ಕಿ ಹೊಡೆದು ಸಾವನ್ನಪ್ಪಿದ ಪ್ರಕರಣದಲ್ಲಿ ವಿವಿಧ ನ್ಯಾಯಾಲಯಗಳು ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ ಈ ಮಹತ್ತರ ತೀರ್ಪನ್ನು ನೀಡಿದೆ.ಪ್ರಸ್ತುತ ಸಮಾಜದಲ್ಲಿ ಉದ್ಯೋಗ ನಿರತ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯ ಲಭಿಸುತ್ತಿದ್ದು, ಮನೆವಾರ್ತೆಯನ್ನು ನೋಡಿಕೊಳ್ಳುವ ಮಹತ್ತರ ಹೊಣೆಗಾರಿಕೆ ಯನ್ನು ನಿರ್ವಹಿಸುತ್ತಿರುವ ಗೃಹಿಣಿಯರ ಬಗೆಗೆ ಅಸಡ್ಡೆಯ ಮನೋಭಾವ ಹೆಚ್ಚುತ್ತಿದೆ. ವಿಭಕ್ತ ಕುಟುಂಬದಲ್ಲಂತೂ ಗೃಹಿಣಿಯರ ಬಗೆಗೆ ತೀರಾ ನಿರ್ಲಕ್ಷ್ಯದ ಧೋರಣೆ ತಾಳುತ್ತಿರುವುದು ಸಾಮಾನ್ಯವಾಗಿದೆ. ದಿನವಿಡೀ ಮನೆಕೆಲಸ, ಹಿರಿಯರು ಮತ್ತು ಮಕ್ಕಳ ಪಾಲನೆ, ಆರೈಕೆಯಾದಿಯಾಗಿ ದೈನಂದಿನ ಎಲ್ಲ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೂ ಗೃಹಿಣಿಯರ ಈ ಕಠಿನ ಶ್ರಮಕ್ಕೆ ಕುಟುಂಬದಿಂದಾಗಲೀ, ಸಮಾಜದಿಂದಾಗಲೀ ಕನಿಷ್ಠ ಮೆಚ್ಚುಗೆ, ಪ್ರೋತ್ಸಾಹದ ಮಾತುಗಳೂ ಇಲ್ಲವಾಗಿವೆ. ಇದು ದೇಶದೆಲ್ಲೆಡೆಯ ಸಾಮಾನ್ಯ ಚಿತ್ರಣವಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಅತ್ಯಂತ ಪ್ರಮುಖವಾಗಿದೆಯಲ್ಲದೆ ಗೃಹವಾರ್ತೆ ನೋಡಿಕೊಳ್ಳುತ್ತಿರುವ ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬಿದೆ.
ಗೃಹಿಣಿಯರು ತಮ್ಮ ಮನೆಗಳಲ್ಲಿ ಮಾಡುವ ಕೆಲಸ, ಶ್ರಮ, ತ್ಯಾಗಗಳು ಮೌಲ್ಯಾತೀತವಾಗಿದ್ದು ಅದನ್ನು ವೇತನದ ಆಧಾರದಲ್ಲಿ ತಾಳೆ ಹಾಕಲು ಸಾಧ್ಯವಿಲ್ಲ. ಯಾವುದೇ ವೇತನವಿಲ್ಲದೆ ದಿನವಿಡೀ ದುಡಿಯುವ ಗೃಹಿಣಿಯರಿಗೆ ವೇತನವನ್ನು ನಿಗದಿಪಡಿಸಿದಲ್ಲಿ ಆ ಕುಟುಂಬದಿಂದ ಆಕೆಗೆ ಸೂಕ್ತ ವೇತನ ನೀಡಲು ಸಾಧ್ಯವಾಗದು.