Advertisement

ರಾಜಧಾನಿಗೆ ತಲುಪಿದ ಕಾರ್ಕಳದ ಹೋಮ್‌ಮೇಡ್‌ ಅಣಬೆ ಬೆಡ್‌

10:48 AM Oct 25, 2019 | sudhir |

ಉಡುಪಿ: ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ ಪಡೆದ ರವಿ ಅವರ ಹೋಮ್‌ಮೇಡ್‌ ಮಶ್ರೂಮ್‌ ಬೆಡ್‌ಗಳು ರಾಜಧಾನಿ ಜನರ ಮನೆಯ ಕದ ತಟ್ಟಿದೆ.

Advertisement

ಕಾರ್ಕಳದ ರವಿ ಅವರು ಎರಡು ವರ್ಷಗಳ ಹಿಂದೆ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಅಣಬೆ ಬೇಸಾಯ ಪದ್ಧತಿ ಕುರಿತು ತರಬೇತಿ ಪಡೆದುಕೊಂಡಿದ್ದರು.
ಮನೆಯಲ್ಲಿ ಬೆಳೆದ ಅಣಬೆಯನ್ನು ಮಾರುಕಟ್ಟೆಗೆ ನೀಡದೆ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ತಾಜಾ ಮಶ್ರೂಮ್‌ ಹಾಗೂ ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಅಣಬೆ ಬಯಸುವವರ ಮನೆಗೆ ರವಿ ಅವರು ಖುದ್ದಾಗಿ ತೆರಳಿ ಡೆಲಿವರಿ ಮಾಡುತ್ತಾರೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ.

ರಾಜ್ಯಾದ್ಯಂತ ಗ್ರಾಹಕರು
ಈ ಬೆಡ್‌ಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗ್ರಾಹಕರು ಇದ್ದಾರೆ. ವಿವಿಧ ದೂರದೂರುಗಳಿಗೆ ಇವರು ಬಸ್‌ಗಳ ಮೂಲಕ ಕಳುಹಿಸುತ್ತಾರೆ. ಮಶ್ರೂಮ್‌ ಬೆಡ್‌ ಗ್ರಾಹಕರ ಮನೆಗೆ ತಲುಪಿದ 10 ದಿನದೊಳಗೆ ಕಟಾವಿಗೆ ಸಿದ್ಧವಾಗುತ್ತದೆ. ಬೆಳೆ ಹೊರ ಬಂದ ಮೂರು ದಿನಗಳ ವರೆಗೆ ಮಶ್ರೂಮ್‌ ತನ್ನ ತಾಜಾತನವನ್ನು ಕಾಯ್ದುಕೊಳ್ಳುತ್ತದೆ. ಒಂದು ಬೆಡ್‌ನಿಂದ ಸುಮಾರು 400 ಗ್ರಾಂ ಅಣಬೆ ಪಡೆಯಬಹುದಾಗಿದೆ.

ತಯಾರಿ ಹೇಗೆ?
ರವಿ ಅವರು ಮಶ್ರೂಮ್‌ ಬೆಡ್‌ ಮನೆಯಲ್ಲಿ ತಯಾರಿಸುತ್ತಾರೆ. ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಭತ್ತದ ಹುಲ್ಲು ತುಂಬಿ ಅದರ ತುದಿಯಲ್ಲಿ ಅಣಬೆ ಬೀಜ ಹಾಕುತ್ತಾರೆ. ಒಂದು ಬೆಡ್‌ಗೆ ಸುಮಾರು 100 ಗ್ರಾಂ. ಬೀಜ ಬಳಸಲಾಗುತ್ತದೆ. ಅನಂತರ ಬ್ಯಾಗಿನ ಕೆಳಗೆ ಮತ್ತು ಸುತ್ತ 4-5 ರಂಧ್ರ ಮಾಡಿ ಮೂರು ವಾರ ಹಾಗೆ ಬಿಡಲಾಗುತ್ತದೆ. 21ನೇ ದಿನದ ಗ್ರಾಹಕರಿಗೆ ಮನೆಗಳಿಗೆ ತಲುಪಿಸಲಾಗುತ್ತದೆ.

ಹೆಚ್ಚಿದ ಬೇಡಿಕೆ
ಹೋಮ್‌ ಮೇಡ್‌ ಮಶ್ರೂಮ್‌ ಬೆಡ್‌ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ತಿಂಗಳಿಗೆ ಸುಮಾರು 1000 ಮಶ್ರೂಮ್‌ ಬೆಡ್‌ ಮಾರಾಟವಾಗುತ್ತಿದೆ.

Advertisement

ಏನೆಲ್ಲ ಬೇಕು?
ಭತ್ತದ ಹುಲ್ಲನ್ನು 3-4 ಇಂಚು ಉದ್ದ ಕತ್ತರಿಸಿ ತಣ್ಣೀರಿನಲ್ಲಿ ನೆನೆಸಬೇಕು. ಹಲ್ಲು ಸೋಂಕು ತಪ್ಪಿಸಲು ಬಿಸಿ ನೀರಿನಲ್ಲಿ ಅರ್ಧ ಗಂಟೆ ಕುದಿಸಬೇಕು. ಕುದಿಸಲಾದ ಹುಲ್ಲನ್ನು ಸಂಪೂರ್ಣವಾಗಿ ನೆರಳಿನಲ್ಲಿ ಒಣಗಿಸಬೇಕು. ಇದು ಅಣಬೆ ಹುಲುಸಾಗಿ ಬೆಳೆಯಲು ಇದು ಸಹಕಾರಿ.

ಏನೆಲ್ಲ ತಯಾರಿಸಬಹುದು?
ಅಣಬೆಯನ್ನು ಬಳಸಿ ಬಾಯಲ್ಲಿ ನೀರೂರಿಸುವ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಬಹುದು. ಅಣಬೆ ಕರಿ, ಬಿರಿಯಾನಿ, ಸೂಪ್‌, ಪಕೋಡ, ಪಲಾವ್‌, ಮೊಟ್ಟೆ ಪಲ್ಯ, ಟೊಮೆಟೋ ಕರಿ, ಕಟ್ಲೆಟ್‌, ಅಣಬೆ ಪಾಯಸ, ಅಷ್ಟೇ ಏಕೆ ಅಣಬೆ ಉಪ್ಪಿನ ಕಾಯಿಯನ್ನೂ ತಯಾರಿಸಬಹುದು.

ಬಾಳೆ ಎಲೆ ಪ್ಯಾಕ್‌!
ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದುಕೊಂಡು ಹೋಮ್‌ಮೇಡ್‌ ಮಶ್ರೂಮ್‌ ತಯಾರಿಸಲಾಗುತ್ತಿದೆ. ಒಮ್ಮೆ ಖರೀದಿಸಿದ ಗ್ರಾಹಕರು ಇನ್ನೊಬ್ಬ ಗ್ರಾಹಕರಿಗೆ ಮಾಹಿತಿ ನೀಡುತ್ತಾರೆ. ಇದರಿಂದ ವ್ಯಾಪಾರ ವೃದ್ಧಿಸುತ್ತಿದೆ. ಊರ ಸಮೀಪದ ಮನೆಗಳಿಗೆ ಮಶ್ರೂಮ್‌ ನೀಡುವ ಬಾಳೆ ಎಲೆಯಲ್ಲಿ ಪ್ಯಾಕ್‌ ಮಾಡಿ ಡೆಲಿವರಿ ಮಾಡಲಾಗುತ್ತದೆ. ಮಶ್ರೂಮ್‌ ಬೀಜಗಳನ್ನು ಬೆಂಗಳೂರಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
– ರವಿ , ಮಶ್ರೂಮ್‌ ಬೆಡ್‌ ತಯಾರಕ

Advertisement

Udayavani is now on Telegram. Click here to join our channel and stay updated with the latest news.

Next