ಹುಬ್ಬಳ್ಳಿ: ತಾವು ಸಾಕುವ ನಾಯಿಯನ್ನು ಬೆಳಗ್ಗೆ, ಸಂಜೆ ವೇಳೆ ವಾಯುವಿಹಾರ ನೆಪದಲ್ಲಿ ಕರೆದೊಯ್ದು ಇನ್ನೊಬ್ಬರ ಮನೆ ಮುಂದೆ ಶೌಚ, ಮೂತ್ರ ಮಾಡಿಸುವ ಜನ ಅನೇಕರಿದ್ದಾರೆ. ಇಂತಹ ಕಾಟದಿಂದ ರೋಸಿ ಹೋದ ನಾಗರಿಕರೊಬ್ಬರು ಮನೆ ಮುಂದೆ ಇಂತಹ ಕಾರ್ಯಕ್ಕೆ “ಎಚ್ಚರಿಕೆ ಫಲಕ’ ಹಾಕಿದ್ದು, ಮನೆ ಮುಂದೆ ನಾಯಿ ಶೌಚ ಮಾಡಿಸುವವರಿಂದಲೇ ಅದನ್ನು ಎತ್ತಿ ಹಾಕಿಸುವ ಮೂಲಕ ಬುದ್ಧಿ ಕಲಿಸಿದ್ದಾರೆ!
ಇಲ್ಲಿನ ಅಶೋಕ ನಗರದ ಉದ್ಯಾನವನ ಎದುರಿನ ನಿವಾಸಿ ಗಣೇಶ ಜರತಾರಘರ ಎನ್ನುವವರ ಮನೆ ಇದ್ದು, ಅನೇಕರು ತಮ್ಮ ನಾಯಿಗಳನ್ನು ತೆಗೆದುಕೊಂಡು ಬಂದು ಅವರ ಹೊರಗೋಡೆಗೆ ಹೊಂದಿಕೊಂಡಂತೆ ಶೌಚ ಹಾಗೂ ಮೂತ್ರ ಮಾಡಿಸುತ್ತಿದ್ದರು. ಈ ಬಗ್ಗೆ ಹೇಳಿದರೂ ಕೇಳುವವರಿಲ್ಲವಾಗಿತ್ತು.
ಇದರ ದುರ್ನಾತದಿಂದ ಮನೆಯವರು ಹೊರಗೆ ಕುಳಿತುಕೊಳ್ಳುವುದಕ್ಕೆ, ಮಧ್ಯಾಹ್ನ ವೇಳೆ ವಾಹನ ನಿಲ್ಲಿಸುವುದಕ್ಕೂ ಸಾಧ್ಯವಾಗದ ಸ್ಥಿತಿ ಇತ್ತು. ಇದರಿಂದ ರೋಸಿ ಹೋದ ಜರತಾರಘರ ಅವರು ಮನೆಯ ಮುಂದೆ ಎಚ್ಚರಿಕೆ ನೋಟಿಸ್ ಅಂಟಿಸಿದ್ದಾರಲ್ಲದೆ, ನೋಟಿಸ್ ಅಂಟಿಸಿದ ಮೇಲೂ ಕೆಲವರು ತಮ್ಮದೇ ಕಾರ್ಯಕ್ಕೆ ಮುಂದಾದಾಗ ಒಬ್ಬರನ್ನು ಹಿಡಿದು ಅವರ ನಾಯಿ ಮಾಡಿದ ಶೌಚವನ್ನು ಅವರ ಕೈಯಿಂದಲೇ ಎತ್ತಿ ಹಾಕಿಸಿದ್ದಾರೆ.
ಕೆಲವೊಂದು ಬಾರಿ ಬಡಿಗೆ ಹಿಡಿದು ಕಾವಲು ನಿಲ್ಲುವ ಸ್ಥಿತಿ ಅನುಭವಿಸಿದ್ದೇವೆ. ಬೆಳಗ್ಗೆ ನಾವು ಮನೆ ಒಳಗೆ ಇದ್ದಾಗ ಕೆಲವರು ನಾಯಿ ಮಲ-ಮೂತ್ರ ಮಾಡಿಸಿ ಜಾಗ ಖಾಲಿ ಮಾಡಿಸುತ್ತಿದ್ದರು. ಇದರ ತಡೆಗೆ ಎಚ್ಚರಿಕೆ ನೋಟಿಸ್ ಅಂಟಿಸಬೇಕಾಯಿತು. ಒಬ್ಬರಿಂದ ಅವರ ಕೈಯಿಂದಲೇ ನಾಯಿ ಮಲ ಎತ್ತಿಸಿದಾಗಿನಿಂದ ಮನೆ ಮುಂದೆ ಹೊಲಸು ಮಾಡುವುದು ನಿಂತಿದೆ ಎಂಬುದು ಗಣೇಶ ಜರತಾರಘರ ಅವರ ಅನಿಸಿಕೆ.