Advertisement

ಸೂರು ಅರಸಿದೆ ಅತಂತ್ರ ಬದುಕು

11:15 AM Aug 23, 2019 | Team Udayavani |

ಚಿಕ್ಕೋಡಿ: ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ಪ್ರವಾಹಕ್ಕೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಅಪಾರ ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಪ್ರಾಥಮಿಕ ವರದಿ ಪ್ರಕಾರ 6,270 ಮನೆಗಳಿಗೆ ಹಾನಿಯಾಗಿದೆ. 174 ಜಾನುವಾರುಗಳು ಮೃತಪಟ್ಟಿವೆ. ಚಿಕ್ಕೋಡಿ ಉಪವಿಭಾಗದ ಐದು ತಾಲೂಕಿನಲ್ಲಿ 4,632 ಮನೆಗಳಿಗೆ ಭಾಗಶಃ ಹಾನಿ ಹಾಗೂ 1,638 ಮನೆಗಳು ಸಂಪೂರ್ಣ ನೆಲಕಚ್ಚಿದ್ದರಿಂದ ಜನರು ಬದುಕು ಅತಂತ್ರವಾಗಿದೆ.

Advertisement

ಚಿಕ್ಕೋಡಿ ತಾಲೂಕು ಒಂದರಲ್ಲೇ 3,167 ಮನೆಗಳಿಗೆ ಹಾನಿ ಸಂಭವಿದೆ. 803 ಮನೆಗಳು ಸಂಪೂರ್ಣ ಬಿದ್ದಿವೆ. ನಿಪ್ಪಾಣಿ ತಾಲೂಕಿನಲ್ಲಿ 1,050 ಮನೆಗಳು ಭಾಗಶಃ, 564 ಮನೆಗಳು ಸಂಪೂರ್ಣ ಬಿದ್ದಿವೆ. ಕಾಗವಾಡ ತಾಲೂಕಿನ 11 ಮನೆಗಳು ಭಾಗಶಃ ಮತ್ತು 8 ಮನೆಗಳು ಸಂಪೂರ್ಣ ಬಿದ್ದಿವೆ. ರಾಯಬಾಗ ತಾಲೂಕಿನಲ್ಲಿ 404 ಮನೆಗಳು ಭಾಗಶಃ ಮತ್ತು 263 ಮನೆಗಳು ಸಂಪೂರ್ಣ ಬಿದ್ದು ಹೋಗಿವೆ.

174 ಜಾನುವಾರಗಳ ಪೈಕಿ ಚಿಕ್ಕೋಡಿ ತಾಲೂಕಿನಲ್ಲಿ 56, ನಿಪ್ಪಾಣಿ ತಾಲೂಕಿನಲ್ಲಿ 17, ಅಥಣಿ ತಾಲೂಕಿನಲ್ಲಿ 52, ಕಾಗವಾಡ ತಾಲೂಕಿನಲ್ಲಿ 21, ರಾಯಬಾಗ ತಾಲೂಕಿನಲ್ಲಿ 28 ಜಾನುವಾರುಗಳು ಮೃತಪಟ್ಟಿವೆ ಎಂದು ಪ್ರಾಥಮಿಕ ವರದಿಯಲ್ಲಿ ದಾಖಲಾಗಿದೆ.

ಬೀದಿಗೆ ಬಂದ ಬದುಕು: 2005ರ ಪ್ರವಾಹದಲ್ಲಿ ಬಿದ್ದು ಹೋಗಿದ್ದ ಮನೆಗಳನ್ನು ಕಷ್ಟಪಟ್ಟು ಕಟ್ಟಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದ ಜನರು ಕೃಷ್ಣೆಯ ರೌದ್ರನರ್ತನಕ್ಕೆ ಮತ್ತೂಮ್ಮೆ ಬೀದಿಗೆ ಬರುವಂತೆ ಮಾಡಿದೆ. ಕಣ್ಣೆದುರೇ ಮನೆಗಳು ನೆಲಕಚ್ಚಿದ್ದನ್ನು ಕಂಡು ಮರುಗುವಂತಾಗಿದೆ. ಸುಂದರ ಬದುಕಿನ ಕನಸು ಕಟ್ಟಿಕೊಂಡಿದ್ದ ಜನತೆಯ ಮೇಲೆ ಈಗ ಆಕಾಶವೇ ಕಳಚಿ ಬಿದ್ದಂತಾಗಿದೆ. ಮನೆಮಂದಿಯೆಲ್ಲ ಪರಿಹಾರ ಕೇಂದ್ರ ಮತ್ತು ಊರ ಗುಡಿಗಳೇ ವಾಸಸ್ಥಾನವಾಗಿವೆ. ಮಹಾರಾಷ್ಟ್ರದ ಜಲಘಟ್ಟ ಪ್ರದೇಶ ಮತ್ತು ವಿವಿಧ ಜಲಾಶಯಗಳಿಂದ ಹರಿದು ಬಿಟ್ಟಿರುವ ಅಪಾರ ಪ್ರಮಾಣದ ನೀರಿನಿಂದ ಚಿಕ್ಕೋಡಿ ಉಪವಿಭಾಗದ ಐದು ತಾಲೂಕಿನಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಸಾವಿರಾರು ಕುಟುಂಬಗಳು ಮನೆ-ಮಠ ಕಳೆದುಕೊಂಡು ಅತಂತ್ರ ಬದುಕು ಸಾಗಿಸುತ್ತಿದ್ದಾರೆ.

 

Advertisement

•ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next