Advertisement

ರಸ್ತೆ ಬದಿ ನಿಂತು ರಿಶ್ಯೂಮೆ ಹಂಚಿದವನಿಗೆ ಸಿಕ್ಕಿತು ಗೂಗಲ್‌ ಉದ್ಯೋಗ

11:20 AM Jul 31, 2018 | udayavani editorial |

ವಾಷಿಂಗ್ಟನ್‌ : ಇದು ವಾಸ್ತವವೇ ಆದರೂ ಟೆಕ್‌ ಜಗತ್ತಿನ ಒಂದು ಪವಾಡವೇ ಎನ್ನಬೇಕು. 

Advertisement

“ನಾನು ನಿರಾಶ್ರಿತ, ಯಶಸ್ಸಿಗಾಗಿ ಹಸಿದಿದ್ದೇನೆ; ನನ್ನ ರಿಶ್ಯೂಮೆಯನ್ನು ಸ್ವೀಕರಿಸಿ’ ಎಂಬ ದೊಡ್ಡ ಫ‌ಲಕವನ್ನು ಕೈಯಲ್ಲಿ ಹಿಡಿದುಕೊಂಡು ಅಮೆರಿಕದ ಸಿಲಿಕಾನ್‌ ವ್ಯಾಲಿಯ ರಸ್ತೆ ಬದಿಯಲ್ಲಿ ನಿಂತು ತನ್ನ ರಿಶ್ಯೂಮೆಯನ್ನು ಹಂಚುತ್ತಿದ್ದವನ ಫೋಟೋ ಕ್ಲಿಕ್ಕಿಸಿದ ಮಹಿಳೆಯೊಬ್ಬಳು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿದ ಪರಿಣಾಮವಾಗಿ ಯಾರೂ ನಂಬದಿರುವಂತಹ ಪವಾಡವೇ ನಡೆದು ಹೋಯಿತು.

ಈ ಯುವಕನ ಕುರಿತಾಗಿ “ಫ‌ುಲ್‌ ಮೇಕಪ್‌ ಆಲ್‌ಕೆಮಿಸ್ಟ್‌’ ಎಂಬ ಟ್ವಿಟರ್‌ ನಾಮಾಂಕಿತ ಮಹಿಳೆಯು ತನ್ನ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಳು : “ರಸ್ತೆ ಬದಿ ಹಣ ಬೇಡುವ ಬದಲು ಜನರಿಗೆ ಈ ಯುವಕ ತನಗೆ ಉದ್ಯೋಗ ಕೊಡಿರೆಂದು ಬೇಡಿ ತನ್ನ ರಿಶ್ಯೂಮೆಯನ್ನು ಹಂಚುತ್ತಿದ್ದುದನ್ನು ನಾನಿಂದು ಕಂಡೆ; ಸಿಲಿಕಾನ್‌ ವ್ಯಾಲಿಯಲ್ಲಿ ಯಾರಾದರೂ ಈತನಿಗೆ ನೆರವಾದರೆ ಅದು ನಿಜಕ್ಕೂ ಒಂದು ಒಳ್ಳೆಯ ಕೆಲಸವಾದೀತು ಮತ್ತು ಆ ಮೂಲಕ ಈ ಡೇವಿಡ್‌ಗೆ ಬದುಕಿನಲ್ಲಿ ಮೇಲೆ ಬರಲು ಸಾಧ್ಯವಾದೀತು’ 

ಅದಾಗಿ ಆಕೆ ತನ್ನ ಸರಣಿ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಳು : “ತುಂಬಾ ಆಸೆ ಆಕಾಂಕ್ಷೆಗಳೊಂದಿಗೆ ಈ ಡೇವಿಡ್‌ ಸಿಲಿಕಾನ್‌ ವ್ಯಾಲಿಗೆ ಬಂದಿದ್ದ. ಆದರೆ ಉದ್ಯೋಗ ಪಡೆಯಲು ವಿಫ‌ಲನಾದ; ಆತನ ಬಳಿ ಇದ್ದ ಹಣವೆಲ್ಲವೂ ಖರ್ಚಾಗಿ ಹೋಗಿತ್ತು. ಕೊನೆಗೆ ಫ್ರೀ ಲ್ಯಾನ್ಸರ್‌ ಕೆಲಸ ಪಡೆಯಲು ಕೂಡ ಆತ ವಿಫ‌ಲನಾದ…’

“ನಾನು ಡೇವಿಡ್‌ ಜತೆಗೆ ಸುಮಾರು ಒಂದು ತಾಸು ಕಾಲ ಮಾತನಾಡಿದೆ; ಹಣ ಇಲ್ಲದೆ ತಾನು ಪಾರ್ಕ್‌ ಗಳಲ್ಲಿ ಮಲಗುತ್ತಿರುವುದಾಗಿ ಆತ ಹೇಳಿದ; ಫ್ರೀ ಲ್ಯಾನ್ಸ್‌ ಕೆಲಸ ಪಡೆಯಲು ತಾನು ಇನ್ನೂ ಪ್ರಯತ್ನಿಸುತ್ತಿದ್ದೇನೆ; ಇಂಟರ್‌ ವ್ಯೂ ಎದುರಿಸುವುದು, ಅರ್ಜಿ ಹಾಕುವುದು ನಡೆದೇ ಇದೆ ಎಂದ’. 

Advertisement

ಅಂತೂ ಆಕೆ ಟ್ವಿಟರ್‌ನಲ್ಲಿ  “ನಿರಾಶ್ರಿತನಾಗಿರುವ, ಯಶಸ್ಸಿಗಾಗಿ ಹಸಿದಿರುವ’ ಡೇವಿಡ್‌ ಬಗ್ಗೆ ಬರೆದ ಟ್ವೀಟ್‌ಗಳು ಅಸಂಖ್ಯಾತ ಟ್ವಿಟರಾಟಿಗಳನ್ನು ಸೆಳೆಯಿತು. ದೊಡ್ಡ ದೊಡ್ಡ ಕಂಪೆನಿಗಳ ಕಣ್ಣಿಗೂ ಅದು ಬಿದ್ದಿತು. ಪರಿಣಾಮ ಪವಾಡ !

ಅಮೆರಿಕದ ಸಿಲಿಕಾನ್‌ ವ್ಯಾಲಿಯ ರಸ್ತೆ ಬದಿಯಲ್ಲಿ ನಿಂತು ತನ್ನ ರಿಶ್ಯೂಮೆ ಪ್ರತಿಗಳನ್ನು ಜನರಿಗೆ ಹಂಚುತ್ತಿದ್ದ ಈ ವ್ಯಕ್ತಿಗೆ ಈಗ ಗೂಗಲ್‌, ನೆಟ್‌ ಫ್ಲಿಕ್ಸ್‌ ಮತ್ತು ಲಿಂಕ್‌ಡ್‌ ಇನ್‌ ನಂತಹ ಟೆಕ್‌ ದಿಗ್ಗಜ ಸಂಸ್ಥೆಗಳು ಉದ್ಯೋಗದ ಕೊಡುಗೆ ನೀಡಿವೆ.

ಈತ ಕೈಯಲ್ಲಿ ಫ‌ಲಕ ಹಿಡಿದು ತನ್ನ ರಿಶ್ಯೂಮೆಯನ್ನು ದಾರಿ ಹೋಕರಿದ ಹಂಚುತ್ತಿದ್ದಾಗಿನ ಫೋಟೋ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ ಲೋಡ್‌ ಮಾಡಿದ “ಫ‌ುಲ್‌ ಮೇಕಪ್‌ ಆಲ್‌ಕೆಮಿಸ್ಟ್‌’ ಟ್ವಿಟರ್‌ ನಾಮಾಂಕಿತ ಮಹಿಳೆಗೆ ಈಗ ಸಕತ್‌ ಅಚ್ಚರಿಯಾಗಿದೆ; ಖುಷಿಯೂ ಆಗಿದೆ. ಇದೊಂದು ಪವಾಡ ಎಂದಾಕೆ ಉದ್ಗರಿಸಿದ್ದಾಳೆ. 

ಈ ಒಬ್ಬ ಅನಾಮಿಕ ವ್ಯಕ್ತಿಗಾಗಿ ಆಕೆ ಮಾಡಿದ್ದ ಟ್ವೀಟ್‌ ಕನಿಷ್ಠ 50,000 ಪಟ್ಟು ರೀ ಟ್ವೀಟ್‌ ಆಗಿರುವುದು ಕೂಡ ಒಂದು ದಾಖಲೆಯೇ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next