Advertisement

ಗೃಹರಕ್ಷಕ ಸಿಬಂದಿಗೆ ವೇತನ ಬಂದಿಲ್ಲ ಆದರೂ ಕರ್ತವ್ಯಕ್ಕೆ ಸಿದ್ಧ !

12:56 PM Apr 12, 2018 | Team Udayavani |

ಮಂಗಳೂರು: ಚುನಾವಣಾ ಕರ್ತವ್ಯಕ್ಕೆ ಹೊರಟು ನಿಂತಿರುವ ಜಿಲ್ಲೆಯ ಗೃಹರಕ್ಷಕ ದಳದ ಸಿಬಂದಿಗೆ ಕಳೆದ ಮೂರು ತಿಂಗಳಿನಿಂದ ಗೌರವ ಧನವೇ ಪಾವತಿಯಾಗಿಲ್ಲ! 

Advertisement

ವೇತನ ಸಿಗದೆ ಜೀವನ ಸಾಗಿಸುವುದು ಹೇಗೆಂಬ ಚಿಂತೆಯಲ್ಲಿ ಸಿಬಂದಿ ಇದ್ದರೆ, ಅಧಿಕಾರಿಗಳು ತಾಂತ್ರಿಕ ಕಾರಣದಿಂದ ಹೀಗಾಗಿದೆ ಎನ್ನುತ್ತಾರೆ!

ಗೃಹರಕ್ಷಕರಿಗೆ ತಿಂಗಳ ಗೌರವಧನವನ್ನು ಪೊಲೀಸ್‌ ಇಲಾಖೆಯ ಮುಖಾಂತರ ನೀಡಲಾಗುತ್ತದೆ. ತಾಂತ್ರಿಕ ಕಾರಣಗಳೇನೇ ಇದ್ದರೂ ತಿಂಗಳ ಸಂಬಳದಲ್ಲಿ ದಿನ ದೂಡುತ್ತಿರುವ ಗೃಹರಕ್ಷಕರ ಸಂಬಳದ ಸಮಸ್ಯೆ ಯನ್ನು ತತ್‌ಕ್ಷಣಕ್ಕೇ ಇತ್ಯರ್ಥಪಡಿಸಬೇಕಿತ್ತು. ಆದರೆ ಮೂರು ತಿಂಗಳಿನಿಂದ ಹೀಗಾಗುತ್ತಿದೆ ಎಂದಾಗಲೂ ಗೌರವಧನವನ್ನು ಶೀಘ್ರ ನೀಡುವುದಕ್ಕೆ ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿಲ್ಲ. 

ಜಿಲ್ಲೆಯಲ್ಲಿ 1,000 ಮಂದಿ ಗೃಹರಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 800 ಮಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹಗಲು – ರಾತ್ರಿ ಎನ್ನದೆ ಒತ್ತಡದಲ್ಲೇ ಕೆಲಸ ನಿರ್ವಹಿಸುತ್ತಿರುವ ಗೃಹರಕ್ಷಕ ಸಿಬಂದಿ ವೇತನ ಇಲ್ಲದೆ ಕಷ್ಟ ಪಡುತ್ತಿದ್ದಾರೆ. ಆದರೂ ತಮ್ಮ ಸಮಸ್ಯೆ ತೋರ್ಪಡಿಸದೆ ಚುನಾವಣಾ ಕರ್ತವ್ಯಕ್ಕೆ ಹೊರಟು ನಿಂತಿದ್ದಾರೆ.

ತಾಂತ್ರಿಕ ಕಾರಣ
ವೇತನ ಬಾರದಿರುವ ಬಗ್ಗೆ ಗೃಹರಕ್ಷಕ ಸಿಬಂದಿ ಪ್ರಶ್ನಿಸಿದರೆ ಬಜೆಟ್‌ ಬಾರದಿರುವುದರಿಂದ ಮತ್ತು ಆರ್ಥಿಕ ವರ್ಷಾಂತ್ಯವಾಗಿರುವುದರಿಂದ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ತತ್‌ಕ್ಷಣವೇ ವೇತನ ನೀಡಲಾಗುವುದು ಎಂಬ ಉತ್ತರ ಪೊಲೀಸ್‌ ಇಲಾಖೆಯಿಂದ ಬರುತ್ತದೆ. ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ನಡೆದ ಘಟಕಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ವಿ.ಜೆ. ಸಜಿತ್‌ ಅವರು, ತಾಂತ್ರಿಕ ಕಾರಣದಿಂದ ವೇತನ ಪಾವತಿಯಾಗಿಲ್ಲ. ಎಪ್ರಿಲ್‌ನಲ್ಲಿ ಮೂರು ತಿಂಗಳ ಸಂಬಳವನ್ನು ಒಟ್ಟಿಗೇ ನೀಡಲಾಗುವುದು ಎಂದು ಹೇಳಿದ್ದಾರೆ.

Advertisement

ಎರಡು ತಿಂಗಳಿಗೊಮ್ಮೆ ಸಂಬಳ
ಗೃಹರಕ್ಷಕ ದಳದ ಸಿಬಂದಿಗೆ ಮೂರು ತಿಂಗಳಿನಿಂದ ನಿರಂತರ ಸಂಬಳ ದೊರೆತಿಲ್ಲ. ಆದರೆ ಈ ಹಿಂದೆಯೂ ತಿಂಗಳಿಗೆ ಸರಿಯಾಗಿ ಸಂಬಳ ದೊರೆಯದೆ ಎರಡು ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತದೆ. ಕೆಲಸ ಹೆಚ್ಚಿದ್ದರೂ ಸಂಬಳ ನೀಡುವಾಗ ತಡವಾಗುತ್ತದೆ. ಇದರಿಂದಾಗಿ ತಿಂಗಳ ಸಂಬಳವನ್ನೇ ನಂಬಿರುವ ಗೃಹರಕ್ಷಕರಿಗೆ ತೀರಾ ಕಷ್ಟವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಗೃಹರಕ್ಷಕ ದಳದ ಘಟಕಾಧಿ ಯೋರ್ವರು “ಉದಯವಾಣಿ’ಯೊಂದಿಗೆ ನೋವು ಹಂಚಿಕೊಂಡರು.

ಒಂದೆರಡು ದಿನದಲ್ಲಿ ಸಂಬಳ
ಗೃಹರಕ್ಷಕರಿಗೆ ಮೂರು ತಿಂಗಳಿನಿಂದ ಗೌರವಧನ ದೊರೆಯದಿರುವ ಬಗ್ಗೆ ಈಗಾಗಲೇ ಪೊಲೀಸ್‌ ಇಲಾಖೆಯ ಗಮನಕ್ಕೆ ತರಲಾಗಿದೆ. ಆರ್ಥಿಕ ವರ್ಷಾಂತ್ಯ ಆಗಿರುವುದರಿಂದ ಸ್ವಲ್ಪ ಸಮಸ್ಯೆಯಾಗುತ್ತಿದ್ದು, ಶೀಘ್ರದಲ್ಲೇ ನೀಡಲಾಗುವುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಆಯುಕ್ತರು ತಿಳಿಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ  ಪಾವತಿಯಾಗಬಹುದು.
– ಡಾ| ಮುರಳೀಮೋಹನ ಚೂಂತಾರು, ಗೃಹರಕ್ಷಕ ದಳದ ಜಿಲ್ಲಾ  ಸಮಾದೇಷ್ಟ

325ರಿಂದ 380 ರೂ.ಗೇರಿಕೆ
ಗೃಹರಕ್ಷಕ ದಳದ ಸಿಬಂದಿಗೆ ಈವರೆಗೆ ದಿನಕ್ಕೆ 325 ರೂ.ಗಳಂತೆ ಗೌರವಧನ ಸಿಗುತ್ತಿತ್ತು. ಇದೀಗ ಸರಕಾರವು ಗೌರವಧನದಲ್ಲಿ 45 ರೂ.ಗಳನ್ನು ಹೆಚ್ಚಳ ಮಾಡಿದ್ದು, ಎಪ್ರಿಲ್‌ 1ರಿಂದ ಅನ್ವಯವಾಗುವಂತೆ 380 ರೂ. ದೊರೆಯಲಿದೆ. ಜಿಲ್ಲೆಯಲ್ಲಿ ಒಟ್ಟು 14 ಗೃಹರಕ್ಷಕ ದಳ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next