ನವದೆಹಲಿ: ದೇಶದ 125ಕ್ಕೂ ಹೆಚ್ಚು ನಗರಗಳಲ್ಲಿ 5ಜಿ ಸೇವೆಗಳು ಲಭ್ಯವಾಗಿರುವಂತೆಯೇ ಭಾರತವು “6ಜಿ’ ಕಡೆಗೆ ಹೆಜ್ಜೆಯಿಡಲಾರಂಭಿಸಿದೆ. ಇದಕ್ಕೆ ಪೂರಕವೆಂಬಂತೆ, ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ “6ಜಿ ಸಂಶೋಧನೆ ಮತ್ತು ಅಭಿವೃದ್ಧಿಯ ಪರೀಕ್ಷಾ ವ್ಯವಸ್ಥೆ’ಯನ್ನು ಅನಾವರಣಗೊಳಿಸಿದ್ದಾರೆ. 2030ರ ಒಳಗಾಗಿ ಅದು ದೇಶದಲ್ಲಿ ಜಾರಿ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.
2023ರಿಂದ 2025 ಮತ್ತು 2025 ರಿಂದ 2030ರ ಅವಧಿಯಲ್ಲಿ ಎರಡು ಹಂತದಲ್ಲಿ ಸ್ಪೆಕ್ಟ್ರಂ ಅನ್ನು ಸಿದ್ಧಗೊಳಿಸಿ ಲೋಕಾರ್ಪಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದನ್ನು ಸುಗಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಉನ್ನತ ಮಟ್ಟದ ಸಮಿತಿ ಕೂಡ ರಚನೆಯಾಗಿದೆ.
ನವದೆಹಲಿಯಲ್ಲಿ ಹೊಸ ಇಂಟರ್‌ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯೂನಿ ಯನ್(ಐಟಿಯು) ಪ್ರಾದೇಶಿಕ ಕಚೇರಿ ಮತ್ತು ಇನ್ನೋವೇಷನ್ ಸೆಂಟರ್ ಉದ್ಘಾಟಿಸಿರುವ ಪ್ರಧಾನಿ ಮೋದಿ, “ಭಾರತ್ 6ಜಿ ವಿಷನ್ ಡಾಕ್ಯುಮೆಂಟ್” ಅನ್ನೂ ಅನಾವರಣಗೊಳಿಸಿದರು. ಇದಲ್ಲದೇ, “ಕಾಲ್ ಬಿಫೋರ್ ಯು ಡಿಗ್” ಎಂಬ ಮೊಬೈಲ್ ಆ್ಯಪ್ ಅನ್ನೂ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, “ಇಂದಿನ ಭಾರತವು ಅತ್ಯಂತ ಕ್ಷಿಪ್ರವಾಗಿ ಡಿಜಿಟಲ್ ಕ್ರಾಂತಿಯ ಮುಂದಿನ ಹಂತದತ್ತ ದಾಪುಗಾಲಿಡುತ್ತಿದೆ. ಜಗತ್ತಿನಲ್ಲೇ ಅತ್ಯಂತ ವೇಗವಾಗಿ 5ಜಿ ಸೇವೆಯನ್ನು ಅಳವಡಿಸಿಕೊಂಡ ದೇಶ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ. ಕೇವಲ 120 ದಿನಗಳಲ್ಲಿ ಭಾರತದ 125ಕ್ಕೂ ಹೆಚ್ಚು ನಗರಗಳಲ್ಲಿ 5ಜಿ ಸೇವೆ ಆರಂಭವಾಗಿದ್ದು, ಈ ಸೇವೆಗಳು ಸುಮಾರು 350 ಜಿಲ್ಲೆಗಳನ್ನು ತಲುಪಿದೆ” ಎಂದು ಹೇಳಿದರು.
5ಜಿ ಬಿಡುಗಡೆಯಾದ ಕೇವಲ 6 ತಿಂಗಳ ಅವಧಿಯಲ್ಲೇ ನಮ್ಮ ದೇಶವು 6ಜಿ ಕಡೆ ಸಾಗುವ ಪ್ರಕ್ರಿಯೆ ಆರಂಭಿಸಿದೆ. ಇಂದು ಅನಾವರಣಗೊಳಿಸಿದ ವಿಷನ್ ಡಾಕ್ಯುಮೆಂಟ್ ಈ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.