Advertisement

ಓದು ಬರಹ ನೂರು ತರಹ

12:30 AM Jan 02, 2019 | |

ಹೋಂವರ್ಕ್‌ನಿಂದ ತಿಳಿವಳಿಕೆ ಹೆಚ್ಚುತ್ತದೆ, ಪಾಠ ಬೇಗ ಅರ್ಥವಾಗುತ್ತದೆ. ಹೀಗಿದ್ದರೂ, ಹೋಂ ವರ್ಕ್‌ ಮಾಡಲು ಹೆಚ್ಚಿನ ಮಕ್ಕಳು ಹಿಂದೇಟು ಹಾಕುತ್ತವೆ. “ಮಕ್ಕಳು ಸರಿಯಾಗಿ ಹೋಂ ವರ್ಕ್‌ ಮಾಡ್ತಿಲ್ಲ. ಮಾಡಿದ್ರೂ ಅದರಲ್ಲಿ ಶಿಸ್ತೇ ಇಲ್ಲ. ಹೇಳಿ ಹೇಳಿ ನಮಗೂ ಸಾಕಾಗಿ ಹೋಗಿದೆ…’ ಎಂಬುದು ಮನೆಮನೆಯ ಅಮ್ಮಂದಿರ ಮಾತು. ಹೋಂವರ್ಕ್‌ ಎಂಬ ಕಷ್ಟದ ಕೆಲಸವನ್ನು ಇಷ್ಟದ ಕೆಲಸವಾಗಿ ಬದಲಿಸೋಕೆ ನೂರಾರು ಮಾರ್ಗಗಳಿವೆ. ಅವುಗಳಲ್ಲಿ ಆಯ್ದ ಕೆಲವನ್ನು ತಿಳಿಯಬೇಕೇ? ಈ ಲೇಖನ ಓದಿ…
 
“ಇವಳಿಗೆ ಹೋಂವರ್ಕ್‌ ಮಾಡಿಸುವಷ್ಟರಲ್ಲಿ ಸುಸ್ತು ಹೊಡೆದು ಹೋಗಿರುತ್ತೆ’
“ಯಾಕಾದ್ರೂ ಸ್ಕೂಲ್‌ನಲ್ಲಿ ಹೋಂವರ್ಕ್‌ ಕೊಡ್ತಾರೋ? ದೊಡ್ಡ ತಲೆನೋವು’
“ಹೋಂವರ್ಕ್‌ ಕೊಡಬಾರದು ಅಂತ ಗೌರೆ¾ಂಟ್‌ ಇನ್ನೂ ರೂಲ್ಸ್‌ ಮಾಡಿಲ್ವಾ?’
ಸಂಜೆ ಹೊತ್ತಲ್ಲಿ ಹೀಗೊಂದಷ್ಟು ಹೋಂವರ್ಕ್‌ ಸಹಸ್ರನಾಮದ ಆಲಾಪ ಪ್ರತಿ ಮನೆಯ ಅಮ್ಮನ ಕೊರಳಿಂದಲೂ ಒಕ್ಕೊರಲಿನಿಂದ ಮೇಲೆದ್ದು ದಟ್ಟಗೊಳ್ಳುವ ಅಸಹನೆಯ ಘಳಿಗೆಯಲ್ಲಿ ಏಳುವ ಪ್ರಶ್ನೆ ಒಂದೇ… ಹೋಂವರ್ಕ್‌ ಅಂದ್ರೆ ಅಷ್ಟೆಲ್ಲಾ ಕಷ್ಟಾನಾ?
ಮಕ್ಕಳಿಗೆ ಹೊರೆಯಾಗದಂತೆ, ಹದವಾದ ಪ್ರಮಾಣದಲ್ಲಿಯೂ ಹೋಂವರ್ಕ್‌ ಕೊಡಬಾರದು ಎಂದು ಬಯಸುವ ಹೆತ್ತವರು ಶುದ್ಧ ಸೋಂಬೇರಿಗಳು. ನಮ್ಮ ಮಕ್ಕಳು ದಿನದ ಬಹುಮುಖ್ಯ ಭಾಗವನ್ನು ಶಾಲೆಯಲ್ಲಿ ಕಳೆದಿರುತ್ತಾರೆ. ಅಂತಹ ಹೊತ್ತಲ್ಲಿ ಅವರೇನು ಕಲಿತರು ಎಂಬುದು ಗೊತ್ತಾಗುವುದೇ ಹೋಂವರ್ಕ್‌ ಮುಖೇನ. ಇಲ್ಲವೆಂದರೆ ಮಕ್ಕಳ ಪುಸ್ತಕ ಬಿಡಿಸಿ ನೋಡುವ ಉಸಾಬರಿಗೆ ಎಷ್ಟು ಮಂದಿ ಹೋಗುತ್ತೇವೆ? ಅವರೊಂದಿಗೆ ಕೂತು, ಶಾಲೆಯಲ್ಲಾದ ಘಟನೆಗಳನ್ನು ಕೇಳುತ್ತಾ, ಅವರ ಪುಸ್ತಕಗಳನ್ನು ನಾವೂ ಓದಿ ಅರ್ಥ ಮಾಡಿಕೊಂಡು, ಹೋಂವರ್ಕ್‌ ಮಾಡಿಸುತ್ತಾ, ಹರಟುವ ಹೊತ್ತು ಹೊರಲೋಕಕ್ಕೆ ಆಗಷ್ಟೇ ತೆರೆದುಕೊಂಡಿರುವ ಮಗು ಮತ್ತು ಅಮ್ಮನ ನಡುವೆ ಹೊಸ ಬಾಂಧವ್ಯ ಹುಟ್ಟಿಕೊಳ್ಳುವ ಸಮಯ. ಇಷ್ಟು ಅರ್ಥವಾಗಿಬಿಟ್ಟರೆ ಹೋಂವರ್ಕ್‌ ತಲೆನೋವಾಗುವುದೇ ಇಲ್ಲ.

Advertisement

ಹೋಂವರ್ಕ್‌ ಸಮಸ್ಯೆ ಹೇಗಾಯಿತು?
ಪಕ್ಕದ ಮನೆಯ ಎಲ್‌ಕೆಜಿ ಹುಡುಗಿ. ಜೋರಾಗಿ ಅಳುತ್ತಾ ಎಬಿಸಿಡಿ ಬರೆಯುತ್ತಿದ್ದಳು. ಅವಳಮ್ಮನ ಕೈಯಲ್ಲೊಂದು ಕೋಲು. ಬಾಯಲ್ಲಿ ಬೇಕಷ್ಟು ಬೈಗುಳ. ಏನಾಯಿತು ಎಂದರೆ, “ನೋಡಿ.. ಹೋಂವರ್ಕ್‌ ಬೇಗ ಮುಗಿಸು ಅಂದ್ರೆ ಆಚೀಚೆ ನೋಡ್ತಾ ನಿಧಾನ ಮಾಡ್ತಿದಾಳೆ. ಲೆಟರ್ ಲೈನ್‌ನಿಂದ ಹೊರಗೆ ಬಂದಿದೆ. ಇದಾದ್ಮೇಲೆ ಸ್ಕೇಟಿಂಗ್‌ ಕ್ಲಾಸ್‌ ಇದೆ. ರೆಡಿ ಆಗಿ ಹೋಗಬೇಕಲ್ವಾ?’. ಸೆಕ್ಷನ್‌ ಡ್ಯಾಶ್‌ಡ್ಯಾಶ್‌ ಪ್ರಕಾರ ಮಗು ಭಾರೀ ದೊಡ್ಡ ಕ್ರಿಮಿನಲ್‌ ಅಪರಾಧ ಮಾಡಿದೆ, ಕೋಲಿನ ಮೂಲಕ ಕೊಡುತ್ತಿರುವ ಶಿಕ್ಷೆ ಅದಕ್ಕೆ ಸೂಕ್ತವಾಗಿದೆ ಎಂಬ ಜಡ್ಜ್ ಮುಖಭಾವ ಅವರದ್ದು. ಅವಳು ಬರೆಯುತ್ತಿದ್ದ ಪುಸ್ತಕ ನೋಡಿದೆ. ಹುಡುಗಿ ಆ ವಯಸ್ಸಿಗೆ ತುಂಬಾ ಮುದ್ದಾಗಿಯೇ ಬರೆದಿದ್ದಳು. ಎಲ್ಲೋ ಒಂದೆರಡು ಅಕ್ಷರ ಸಾಲಿಂದ ಈಚೆ ಬಂದಿತ್ತಷ್ಟೆ. ಅಕ್ಷರ ಹೊರಬಂದದ್ದು ಸಮಸ್ಯೆಯಾ? ಸ್ಕೇಟಿಂಗ್‌ ಕ್ಲಾಸ್‌ ಇರುವುದು ಸಮಸ್ಯೆಯಾ? ಇಲ್ಲಾ.. ಹೋಂವರ್ಕೇ ಸಮಸ್ಯೆಯಾ?

“ನಾವು ಚಿಕ್ಕವರಿದ್ದಾಗ ಅಮ್ಮ ಹೀಗೆ ಕೂತು ಹೋಂವರ್ಕ್‌ ಮಾಡಿಸಿದ್ದೇ ನೆನಪಿಲ್ಲ. ಈಗಿನ ಮಕ್ಕಳಿಗೆ ಕಲಿಸುವುದು ಕಷ್ಟ ಎಂದು ಹೇಳುವುದನ್ನೂ ಕೇಳಿದ್ದೇವೆ. ಕಾರಣ ಸಿಂಪಲ್‌- ನಮ್ಮ ಸುತ್ತಲೂ ಈಗೊಂದು ಸ್ಪರ್ಧಾತ್ಮಕ ಲೋಕ ಸೃಷ್ಟಿಯಾಗಿದೆ. ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಧಾವಂತ. ನಾನು ಹೇಳಿದ ಆ ಎಲ್‌ಕೆಜಿ ಹುಡುಗಿಗೆ ಒಂದು ದಿನ ಸ್ಕೇಟಿಂಗ್‌ ಕ್ಲಾಸ್‌, ಮತ್ತೂಂದು ದಿನ ವೆಸ್ಟರ್ನ್ ಡ್ಯಾನ್ಸ್‌ ಕ್ಲಾಸ್‌, ಕೀಬೋರ್ಡ್‌ಗೆ ಸೇರಿಸಬೇಕು ಎಂದು ಹೇಳುತ್ತಿದ್ದರು!

“ಇಷ್ಟೊಂದೆಲ್ಲಾ ಒಟ್ಟಿಗೆ ಕಲಿಸಿದರೆ ಅವಳಿಗೆ ಕಷ್ಟ ಆಗುತ್ತೆ’ ಎಂದು ನಾನೇ ತಡೆಯಲಾಗದೆ ಹೇಳಿದ್ದೆ. ಪರಮ ಅಜ್ಞಾನಿ ಎಂಬಂತೆ ನನ್ನನ್ನು ನೋಡಿದ್ದರು. ಪಠ್ಯೇತರ ಚಟುವಟಿಕೆ ಮಗುವಿಗೆ ಬೇಕು ನಿಜ. ಅದು ಖುಷಿಯಿಂದ ಕಲಿವ ಹಾಗಿರಬೇಕೇ ಹೊರತು, ಅದೇ ಹೊರೆಯಾಗಬಾರದು. ಆ ಕ್ಲಾಸಿಗೆ ಸಾವಿರ ಸಾವಿರ ದುಡ್ಡು ತೆತ್ತಿರುವಾಗ ಇಲ್ಲಿ ನಿಧಾನವಾಗಿ ಕೂತು ಹೋಂವರ್ಕ್‌ ಮುಗಿಸಲಾದರೂ ಸಮಯ ಎಲ್ಲಿದೆ? ಹೋಂವರ್ಕ್‌ ಸಮಸ್ಯೆಯಲ್ಲ. ಅದನ್ನು ಮಾಡಿಸುವ ವಿಧಾನವೇ ಸಮಸ್ಯೆ. ಹಾಗಿದ್ದರೆ, ಮಕ್ಕಳಿಗೆ ಖುಷಿಯಾಗಿ ಹೋಂವರ್ಕ್‌ ಮಾಡಿಸುವುದು ಹೇಗೆ?

ಆಗಷ್ಟೇ ಹೋಂವರ್ಕ್‌ ಶುರುವಾದಾಗ…
ಸಾಮಾನ್ಯವಾಗಿ ಎಲ್‌ಕೆಜಿಯಿಂದ ಹೋಂವರ್ಕ್‌ ಶುರುವಾಗಿರುತ್ತದೆ. ಅಕ್ಷರ/ ನಂಬರ್‌ಗಳನ್ನು ಬರೆಸುವುದು, ಕಲರಿಂಗ್‌, ರೈಮ್ಸ್‌ ಕಲಿಯುವುದು, ಶೇಪ್ಸ್‌ ಮಾಡುವುದು.. ಇಂಥವೇ ಹೆಚ್ಚು. ಮೇಲ್ನೋಟಕ್ಕೆ ಏನೂ ಅಲ್ಲವೇ ಅಲ್ಲ ಎನಿಸುವಂಥದ್ದಿವು. ಆದರೆ ಇಷ್ಟನ್ನೇ ಮಾಡಿಸುವಾಗ ಅಮ್ಮ ಹೈರಾಣಾಗಿರುತ್ತಾಳೆ. ಆರಂಭದ ಈ ದಿನಗಳಲ್ಲಿ ಮಗುವಿನ ಬಳಿ “ಹೋಂವರ್ಕ್‌ ಮಾಡು ಎಂದು ಹೇಳಿ, ನಮ್ಮ ಕೆಲಸ ನಾವು ಮಾಡುತ್ತಿರಲು ಸಾಧ್ಯವೇ ಇಲ್ಲ. ಹೇಗೆ ಉಣ್ಣುವುದನ್ನು, ಬ್ರಶ್‌ ಮಾಡುವುದನ್ನು ಕೈ ಹಿಡಿದು, ಜೊತೆಗಿದ್ದು ಕಲಿಸುತ್ತೇವೋ ಹಾಗೇ ಹೋಂವರ್ಕ್‌ ಕೂಡ ಮಗುವಿಗೆ ಹೊಸದೊಂದು ಕಲಿಕೆ. ಮಗುವನ್ನು ಸಾಕುವ ಪ್ರತಿ ಹಂತದಲ್ಲಿ ತುಂಬಾ ಅವಶ್ಯಕವಾದ ತಾಳ್ಮೆಯೇ ಇಲ್ಲಿ ಮಣಗಟ್ಟಲೆ ಬೇಕಾಗಿರುವುದು. ಜೊತೆಗೆ ಹಿಡಿಯಷ್ಟು ಪ್ರೀತಿ ಇರಿಸಿ ಕಲಿಸಿದರೆ ಮಕ್ಕಳು ಬೇಗ ಕಲಿಯುತ್ತವೆ. ಇದೆಲ್ಲಾ ಹೇಳಲು ಸುಲಭ, ಮಾಡಿಸುವುದು ಕಷ್ಟ ಎನಿಸಬಹುದು. ಖಂಡಿತ ಕಷ್ಟವೇ. ಶ್ರಮವಹಿಸಿ ನಿರಂತರವಾಗಿ ಪ್ರಯತ್ನಿಸಿದರೆ ಫ‌ಲ ಸಿಕ್ಕಿಯೇ ಸಿಗುತ್ತದೆ. ಇವತ್ತು ನೆಟ್ಟ ಬೀಜ ಇವತ್ತೇ ಹಣ್ಣು ಕೊಟ್ಟದ್ದು ಎಲ್ಲಾದರೂ ಇದೆಯೇ?

Advertisement

ಹೇಗೆಲ್ಲಾ ಮಾಡಿಸಬಹುದು?
1)    ಎದ್ದ ಕೂಡಲೇ ಮುಖ ತೊಳೆದು, ಆಮೇಲೆ ತಿಂಡಿ ತಿಂದು, ಸ್ನಾನ ಮಾಡಿ, ಆಟವಾಡಿ, ಟಿವಿ ನೋಡುವುದು… ಪ್ರತಿ ಮಗುವಿಗೂ “ಹೀಗೇ.. ಎಂದೊಂದು ದಿನಚರಿ ಸೆಟ್‌ ಆಗಿರುತ್ತದಲ್ಲ. ಹಾಗೆಯೇ ಕಲಿಕೆ ದಿನಚರಿಯ ಭಾಗವಾಗಬೇಕು. ಶಾಲೆ ಇರಲಿ, ಬಿಡಲಿ, ದಿನಕ್ಕೆ ಒಂದು ಗಂಟೆ ಓದುವುದು/ಬರೆಯುವುದು (ಅದು ಶಾಲೆಯದ್ದೇ ಆಗಬೇಕಾಗಿಲ್ಲ) ಮಾಡಲೇಬೇಕು ಎಂಬುದು ಮಗುವಿನ ತಲೆಗೆ ಹೊಕ್ಕಾಗ ಆ ಹೊತ್ತನ್ನು ಅದಕ್ಕಷ್ಟೇ ಮೀಸಲಿಡುತ್ತಾನೆ. ಈ ಅವಧಿಗೆ ನಮ್ಮಿಷ್ಟದ ಹೆಸರನ್ನೂ ಕೊಡಬಹುದು. ಸರಸ್ವತಿ ಬರುವ ಸಮಯ, ರೀಡಿಂಗ್‌ ಟೈಮ್‌ ಇತ್ಯಾದಿ.

2)    ಆರಂಭದಲ್ಲಿ ಒಂದು ಗಂಟೆಯ ಅವಧಿ ಮಗುವಿಗೆ ಏಕಾಗ್ರತೆಯಿಂದ ಕೂರಲು ಕಷ್ಟವಾದೀತು. ಆಗ ಆಯಾ ಮಗುವಿನ ಸಾಮರ್ಥ್ಯಕ್ಕೆ ತಕ್ಕನಾಗಿ ಅವಧಿಯನ್ನು ಕಡಿಮೆಗೊಳಿಸಬಹುದು. ಆಟದ ನಂತರ ಅಥವಾ ಟಿವಿ ನೋಡಿದ ಮೇಲೆಯೋ ಬಾಕಿ ಉಳಿದ ಸಮಯವನ್ನು ಕಲಿಕೆಗೇ ಮೀಸಲಿಡಬೇಕು. ಒಂದೇ ಸರಿ ಕೂತು ಎಲ್ಲವನ್ನೂ ಮಾಡಿ ಮುಗಿಸಬೇಕು ಎನ್ನಲು ಅವನೇನೂ ಪಿಎಚ್‌.ಡಿ ಓದುತ್ತಿಲ್ಲ ತಾನೇ?

 3) ಹೋಂವರ್ಕ್‌ ಎನ್ನುವುದು ನೀನು ಮಾಡಬೇಕಾದದ್ದು. ಅದು ನಿನ್ನ ಜವಾಬ್ದಾರಿ ಎಂಬುದನ್ನು ಮಗುವಿಗೆ ನಿಧಾನವಾಗಿ ಮನದಟ್ಟು ಮಾಡಬೇಕು. ಆರಂಭಿಕ ವರ್ಷಗಳಲ್ಲಿ ಇದನ್ನು ಮಾಡಿಬಿಟ್ಟರೆ ಆಮೇಲೆ ಹೋಂವರ್ಕ್‌ ಸಮಸ್ಯೆಯಾಗದು. “ಬೆಳೆಯುವ ಸಿರಿ ಮೊಳಕೆಯಲ್ಲಿ… ಎಂಬುದು ಇಲ್ಲಿಗೂ ಅನ್ವಯ. “ಅವನಿನ್ನೂ ಚಿಕ್ಕವನು, ಬಿಡು. ಆಮೇಲೆ ಮಾಡುತ್ತಾನೆ ಎಂಬ ಧೋರಣೆ ತಪ್ಪು. ಅವನ
ಹೋಂವರ್ಕ್‌ ಉಳಿಯಿತೆಂದು ನಾವು ಮಾಡಲು ಆರಂಭಿಸಿದರೆ ದೊಡ್ಡ ತರಗತಿಗೆ ಹೋಗುವಾಗ ಅದೇ ಅಭ್ಯಾಸವಾಗುತ್ತದೆ.

4) “ಇಬ್ಬರೂ ಸೇರಿ ಹೋಂವರ್ಕ್‌ ಮಾಡೋಣಾÌ? ಎಂದರೆ ಅಮ್ಮನೂ ಜೊತೆಗಿರುತ್ತಾಳೆ ಎಂದು ಮಗುವಿಗೆ ಖುಷಿಯಾಗುತ್ತದೆ. ಅದರರ್ಥ: ಅಮ್ಮ ಹೋಂವರ್ಕ್‌ ಮಾಡಿಕೊಡುತ್ತಾಳೆ ಎಂದಲ್ಲ. ಗೊತ್ತಾಗದ್ದನ್ನು ಹೇಳಿಕೊಡಲು ಬೆಂಬಲಕ್ಕಿದ್ದಾಳೆ ಎನ್ನುವ ಸಮಾಧಾನ
ಹುಟ್ಟಬೇಕು. ಆಗ ಹೋಂವರ್ಕ್‌ ಕಷ್ಟ ಎನಿಸದು.

5) ಮಗುವಿಗೆ ಪ್ರತಿಯೊಂದರಲ್ಲೂ ಆಟ ಇದ್ದರೆ ಖುಷಿ. “ಇಂತಿಷ್ಟು ಸಮಯದೊಳಗೆ ಇಷ್ಟು ಸಾಲು ಬರೆದು ಮುಗಿಸೋಣ ಎಂದರೆ ಹೋಂವರ್ಕ್‌ ಕೂಡಾ ಆಟದಂತೆ ಖುಷಿಯಾಗಿ ಮಾಡುವಂಥದ್ದು ಎನಿಸುತ್ತದೆ. ಟೈಮ್‌ ಮ್ಯಾನೇಮೆಂಟ್ ಕೂಡಾ
ಅಭ್ಯಾಸವಾಗುತ್ತದೆ.

6) ಮಗು ಹಲವು ಬಾರಿ ತನ್ನದೇ ಸಮಯ ತೆಗೆದುಕೊಂಡು ಎಲ್ಲವನ್ನೂ ಮಾಡುತ್ತಿರುತ್ತಾನೆ. ಆಗ ಅವಸರದಿಂದ ಮುಗಿಸುವಂತೆ ಒತ್ತಡ ಹೇರಬಾರದು. ಬೇಗ ಮುಗಿಸುವುದಕ್ಕಿಂತ ಕಾನ್ಸೆಪ್ಟ್ ಅರ್ಥವಾಗಿಸುವತ್ತ ಗಮನ ಹರಿಸಬೇಕು.

7) ಹೋಂವರ್ಕ್‌ ಮಾಡಿದರೆ ಏನಾದರೂ ಕೊಡುತ್ತೇನೆ ಎಂದು ಗಿಫ್ಟ್ನಿಂದ ಹುರಿದುಂಬಿಸಲೇಬಾರದು. ಮೆಚ್ಚುಗೆಯೇ ಗಿಫ್ಟ್ ಆಗಬೇಕು. ಅದನ್ನು ಮಗುವೂ ಇಷ್ಟ ಪಡುತ್ತದೆ.

8) ಹೋಂವರ್ಕ್‌ ಮಾಡಿಲ್ಲ ಎಂದರೆ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ ಎಂಬ ಪ್ರಜ್ಞೆ ಮಕ್ಕಳಲ್ಲಿ ಬೆಳೆಯಬೇಕು. ಉದಾಹರಣೆಗೆ- ಹೋಂವರ್ಕ್‌ ಆಗದೆ ಟಿವಿ ನೋಡುವ ಹಾಗಿಲ್ಲ ಅಥವಾ ಹೋಂವರ್ಕ್‌ ಮುಗಿದ ಮೇಲೆಯೇ ಆಟ.

9) ಎಷ್ಟೇ ಕಷ್ಟವಾದರೂ ಮಕ್ಕಳೇ ಹೋಂವರ್ಕ್‌ ಮಾಡಬೇಕು. ಒಂದು ವೇಳೆ ಆಗಿಲ್ಲ ಎಂದರೆ ಶಾಲೆಯಲ್ಲಿ ಅದರ ಪರಿಣಾಮ ಎದುರಿಸುತ್ತಾರಲ್ಲ. ಅದನ್ನು ಒಮ್ಮೆಯಾದರೂ ಎದುರಿಸಲಿ. ಹಾಗಾದಾಗ, ಮರುದಿನ ಹೇಗಾದರೂ ಮಾಡಿ ಹೋಂವರ್ಕ್‌ ತಾನೇ ಮುಗಿಸಬೇಕು ಎಂಬುದು ಗೊತ್ತಾಗಿರುತ್ತದೆ.

10) ಒಂದನೇ ಕ್ಲಾಸಿನಲ್ಲಿ ವಿಷಯಾಧಾರಿತ ಪಠ್ಯ ಆರಂಭವಾಗುತ್ತದೆ. ಹೊರೆ ಜಾಸ್ತಿ ಆದಂತೆಯೂ ಅನಿಸುತ್ತದೆ. ಆಗ ಸ್ವಲ್ಪ ಹೆಚ್ಚು ಹೊತ್ತು ಅವರ ಜೊತೆಗಿದ್ದು ಕಲಿಸಿದರಾಯಿತು.

ಪ್ರತಿಯೊಂದು ಮಗುವೂ ಭಿನ್ನ. ಕಲಿಕೆಯ ವಿಧಾನ, ಬುದ್ಧಿಮತ್ತೆಯ ಮಟ್ಟ ಎಲ್ಲವೂ ಭಿನ್ನವೇ. ಹಾಗಾಗಿ ಅವರಿಗೆ ಕಲಿಸುವಾಗ ನಾವು ಮಾಡಬೇಕಾದ ಪ್ಲ್ಯಾನ್‌ಗಳು ಒಂದೇ ಆಗಿರಲು ಸಾಧ್ಯವಿಲ್ಲ. ಪಕ್ಕದ ಮನೆಯ ಹುಡುಗ ಹೋಂವರ್ಕ್‌ ಮಾಡುವ ರೀತಿಯನ್ನೇ ನಮ್ಮ ಮನೆಯಲ್ಲೂ ಅನುಸರಿಸಲು ಹೋದಾಗ ಸೋಲಬಹುದು. ಹಾಗಾಗಿ, ನಮಗೇನು ಹೊಂದುತ್ತದೆ ಎಂದು ನಾವೇ ಯೋಚಿಸಬೇಕು. ಅದೊಂದು ವೀಡಿಯೋ ವೈರಲ್‌ ಆಗಿತ್ತು. ನಾಲ್ಕೈದು ವರ್ಷದ ಮಗು ತನ್ನಮ್ಮನ ಬಳಿ ಕೈಮುಗಿದು ಅಲವತ್ತುಕೊಳ್ಳುತ್ತದೆ. “ಅಮ್ಮಾ.. ನಿಧಾನವಾಗಿ ಹೇಳು. ಪ್ರೀತಿಯಿಂದ ಹೇಳಿಕೊಡು. ತನಗೆ ಚೆನ್ನಾಗಿಯೇ ಗೊತ್ತಿರುವ ಎಬಿಸಿಡಿಗಳನ್ನು ಗದರಿಸಿ ಕೇಳಿದಾಗ ಕಂಗಾಲಾಗಿ ಅಷ್ಟನ್ನೂ ಉಲ್ಟಾಪಲ್ಟಾ ಹೇಳುತ್ತದೆ. ಆ ಅಮ್ಮನ ಮೇಲೆ ಎಲ್ಲಿಲ್ಲದ ಸಿಟ್ಟು ಬರುತ್ತದೆ ನಮಗೆ. ಅಂಥಾ ಅಮ್ಮ ನಾವಾಗುವುದು ಬೇಡ!

ಶ್ರೀಕಲಾ ಡಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next