ಕೋಲಾರ: 2024ರ ವೇಳೆಗೆ ಪ್ರತಿ ಮನೆ ಮನೆಗೆ ಅಗತ್ಯ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ ಎಂದು ರಾಷ್ಟ್ರೀಯ ಜಲ ಜೀವನ್ ಮಿಷನ್ ನಿರ್ದೇಶಕ ಅಮಿತ್ ಶುಕ್ಲಾ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಜಲ ಜೀವನ್ ಮಿಷನ್ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಅಂತರ್ಜಲ ಮಟ್ಟವನ್ನು ಅಭಿ ವೃದ್ಧಿ ಪಡಿಸಲಾಗುವುದು.
ಎಲ್ಲಾ ಇಲಾಖೆಗಳು ಸೇರಿ ಯೋಜನೆಯನ್ನು ರೂಪಿಸ ಬೇಕು. ಮುಂದಿನ 30-40 ವರ್ಷಗಳಿಗೆ ನೀರಿನ ಲಭ್ಯತೆಯ ಬಗ್ಗೆ ಗಮನಹರಿಸಬೇಕು ಎಂದು ವಿವರಿಸಿದರು. ಬರಪೀಡಿತ ಪ್ರದೇಶವಾದ ಇಸ್ರೇಲ್‌ನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಉತ್ತಮವಾಗಿ ಕೃಷಿ ಮಾಡುತ್ತಿದ್ದಾರೆ. ಬೋರ್‌ವೆಲ್‌ಗಳ ಮರು ಪೂರಣ ಮಾಡಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಫ್ಲೋರೈಡ್ ಅಂಶ ಇರುವೆಡೆ ದೊಡ್ಡ ಚೆಕ್ ಡ್ಯಾಂ ನಿರ್ಮಿಸಿ ನೀರನ್ನು ಇಂಗಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ:- ಅಪ್ಪು ಅಂತಿಮ ದರ್ಶನ: ಶಿವಣ್ಣನ ತಬ್ಬಿ ಕಣ್ಣೀರಿಟ್ಟ ನಂದಮೂರಿ ಬಾಲಕೃಷ್ಣ
750 ಮಿ.ಮೀ ಮಳೆ: ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಜಿಲ್ಲೆಯಲ್ಲಿ ಸರಾಸರಿ ವಾರ್ಷಿಕ 750 ಮಿ.ಮೀ ಮಳೆಯಾಗುತ್ತದೆ. ಆದರೆ, ಈ ಬಾರಿ ಶೇ.60 ಹೆಚ್ಚು ಉತ್ತಮ ಮಳೆಯಾಗಿದೆ. ಕೆ.ಸಿ ವ್ಯಾಲಿ ಯೋಜನೆಯ ಮೂಲಕ ಸರ್ಕಾರವು ಜಿಲ್ಲೆಯ ಕೆರೆಗಳಿಗೆ ನೀರನ್ನು ತುಂಬಿಸುತ್ತದೆ ಎಂದು ಹೇಳಿದರು. ಈ ವರ್ಷ ಉತ್ತಮವಾಗಿ ಮಳೆಯಾಗಿ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನೇ ಶೇ.100 ಅವಲಂಬಿಸಲಾಗಿದೆ. ಹಿಂದಿನ ವರ್ಷಗಳಲ್ಲಿ 30-40 ಕೋಟಿ ರೂ. ಹಣವನ್ನು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಬಳಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 4440 ಕೊಳವೆ ಬಾವಿ: ಅಂತರ್ಜಲ ಮಟ್ಟವನ್ನು ವೃದ್ಧಿಸಲು ಚೆಕ್-ಡ್ಯಾಂ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ತೆಗೆದುಕೊಂಡು ಕುಡಿಯುವ ನೀರು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 2500 ಕೆರೆಗಳಿವೆ. 2019ರಿಂದ ಅಂತರ್ಜಲ ಮಟ್ಟ ಅಭಿವೃದ್ಧಿಯಾಗಿದೆ. 4440 ಕೊಳವೆ ಬಾವಿಗಳು ಜಿಲ್ಲೆಯಲ್ಲಿವೆ ಎಂದು ಮಾಹಿತಿ ನೀಡಿದರು. ಜಿಪಂ ಸಿಇಒ ಉಕೇಶ್ ಕುಮಾರ್, ಜಲಜೀವನ್ ಯೋಜನೆಯ ಮ್ಯಾನೇಜರ್ ಅನೂಪ್ ದ್ವಿವೇದಿ, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಉಪಸ್ಥಿತರಿದ್ದರು.