ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ನಂತರ ಬಾಗಿಲ ಬಳಿ ಇಟ್ಟಿರುವ ಕೀಗಳನ್ನು ಪತ್ತೆ ಹಚ್ಚಿ ಮನೆ ಕಳವು ಮಾಡುತ್ತಿದ್ದ ಮಹಿಳೆಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾವಲ್‌ಬೈರಸಂದ್ರದ ಜಯಂತಿ ಅಲಿ ಯಾಸ್ ಕುಟ್ಟಿಯಮ್ಮ (31) ಬಂಧಿತೆ.
ಆರೋಪಿಯಿಂದ 75 ಗ್ರಾಂ ಚಿನ್ನಾಭರಣ, 638 ಗ್ರಾಂ ಬೆಳ್ಳಿ ಅಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಕುಟ್ಟಿಯಮ್ಮ ಇತ್ತೀಚೆಗೆ ಬೈರಪ್ಪ ಗಾರ್ಡನ್ ಮತ್ತು ಎಎಂಎಸ್ ಲೇಔಟ್‌ನಲ್ಲಿ ಎರಡು ಮನೆಗಳಲ್ಲಿ ಹಾಡಹಗಲೇ ಮನೆಗಳ್ಳತನ ಮಾಡಿದ್ದಳು. ಈ ಸಂಬಂಧ ಮನೆ ಮಾಲಿಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮನೆಗಳ್ಳತನ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಜಯಂತಿ ವಿರುದ್ಧ ವಿದ್ಯಾರಣ್ಯಪುರ, ಡಿ.ಜೆ.ಹಳ್ಳಿ ಸೇರಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 23 ಕಳವು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಈಕೆ, ಜಾಮೀನು ಪಡೆದು ಹೊರಬಂದ ಬಳಿಕವೂ ಮತ್ತೆ ಅದೇ ಕೃತ್ಯವನ್ನು ಮುಂದುವರಿಸಿದ್ದಾಳೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಏಪ್ರಿಲ್ ನಲ್ಲಿ ಸಿನಿ ಧಮಾಕಾ; ಅಂತರ ನೋಡಿಕೊಂಡು ತೆರೆಗೆ ಬರಲು ಯೋಚನೆ
ಕೀ ಸಿಕ್ಕರಷ್ಟೇ ಕಳವು!
ಹಗಲು ಹೊತ್ತಿನಲ್ಲಿ ಬೀದಿ ಬೀದಿ ಸುತ್ತುತ್ತಿದ್ದ ಆರೋಪಿ ಜಯಂತಿ, ಜನ ಸಂದಣಿ ಕಡಿಮೆ ಇರುವ ಬೀದಿಗಳಲ್ಲಿ ಕೆಲ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದಳು. ನಂತರ ಮೊದಲಿಗೆ ಕಾಲಿಂಗ್ ಬೆಲ್ ಒತ್ತಿ ಮನೆಯಲ್ಲಿ ಯಾರಾದರೂ ಇದ್ದಾರೆಯೇ? ಅಥವಾ ಇಲ್ಲವೇ? ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದಳು. ಯಾರ ಇಲ್ಲದಿರುವು ದನ್ನು ಖಚಿತ ಪಡಿಸಿಕೊಂಡು ನಂತರ ಮನೆಯ ಹೊರಗಡೆ ಚಪ್ಪಲಿ ಸ್ಟಾಂಡ್, ಸಜ್ಜಾ, ರಂಗೋಲಿ ಡಬ್ಬಿ ಇತರೆಡೆ ಮನೆ ಕೀ ಇರಿಸಿದ್ದಾರೆಯೇ ಎಂದು ಹುಡುಕುತ್ತಿದ್ದಳು. ಕೀ ಸಿಕ್ಕರೆ ಸೀದಾ ಬೀಗ ತೆರೆದು ಒಳಗೆ ನುಗ್ಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. ಕೀ ಸಿಗದಿದ್ದರೆ ಬೇರೆ ಕಡೆ ಹೋಗುತ್ತಿದ್ದಳು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.