ಹೊಸದಿಲ್ಲಿ : ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವಂಥ ಕರ್ನಾಟಕ ಸೇರಿದಂತೆ 10 ರಾಜ್ಯಗಳ 38 ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವಂತೆ, ಸೂಕ್ತ ಪರೀಕ್ಷೆಗಳನ್ನು ನಡೆಸಿ, ಸಕ್ರಿಯ ಕಣ್ಗಾವಲು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ದೇಶದ 45 ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ.
ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಜಿಲ್ಲಾ ಆಸ್ಪತ್ರೆಗಳ ಸೂಪರಿಂಟೆಂಡೆಂಟ್‌ಗಳು, ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದನ್ ಈ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ತಮಿಳು ನಾಡು, ರಾಜಸ್ಥಾನ, ಹರ್ಯಾಣ, ಗುಜರಾತ್, ಜಮ್ಮು- ಕಾಶ್ಮೀರ, ಉತ್ತರಾಖಂಡ ಮತ್ತು ಮಧ್ಯ ಪ್ರದೇಶದ 38 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ.
ಜನಸಾಂದ್ರತೆ ಅಧಿಕವಿರುವ ನಗರ ಪ್ರದೇಶಗಳಲ್ಲಿ ಸೋಂಕಿನ ವ್ಯಾಪಿಸುವಿಕೆ, ಮನೆ-ಮನೆ ಸರ್ವೇ ಮಾಡಬೇಕಾದ ಅಗತ್ಯತೆ, ಸಮರ್ಪಕ ಪರೀಕ್ಷೆ, ಪ್ರಕರಣಗಳ ನಿರ್ವಹಣೆ ಮತ್ತು ಜಾರಿ ಮಾಡಬೇಕಾದ ನಿಯಂತ್ರಣ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜತೆಗೆ, ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಹಿರಿಯ ನಾಗರಿಕರು, ವಿವಿಧ ರೋಗಗಳಿಂದ ಬಳಲುತ್ತಿರುವವರು ಸೇರಿದಂತೆ ಅಧಿಕ ರಿಸ್ಕ್ ಉಳ್ಳಂಥವರನ್ನು ರಕ್ಷಿಸಲು ಕ್ರಮ ಕೈಗೊಳ್ಳುವ ಕುರಿತೂ ಸೂಚಿಸಲಾಯಿತು.
ಒಂದೇ ದಿನ 9,983 ಮಂದಿಗೆ ಸೋಂಕು
ಕಳೆದೊಂದು ವಾರದಿಂದ ಪ್ರತಿದಿನವೂ ದೇಶದಲ್ಲಿ 9 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಭಾನುವಾರ ಬೆಳಗ್ಗೆ 8ರಿಂದ ಸೋಮವಾರ ಬೆಳಗ್ಗೆ 8 ರವರೆಗಿನ 24 ಗಂಟೆಗಳ ಅವಧಿಯಲ್ಲಿ ಮತ್ತೆ 9,983 ಮಂದಿಗೆ ಸೋಂಕು ದೃಢಪಟ್ಟಿದೆ. ಜತೆಗೆ 206 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ.48.36ಕ್ಕೇರಿದ್ದು, ಒಟ್ಟಾರೆ 1.24 ಲಕ್ಷಕ್ಕೂ ಹೆಚ್ಚು ಮಂದಿ ಗುಣ ಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.