Advertisement

ಬಸವಕಲ್ಯಾಣದಲ್ಲಿ ಎಚ್‌ಡಿಕೆ ವಾಸ್ತವ್ಯಕ್ಕೆ ಮನೆ ಹುಡುಕಾಟ

06:44 PM Mar 26, 2021 | Team Udayavani |

ಬೀದರ: ಸತತ ಸೋಲುಗಳಿಂದ ಕಂಗೆಟ್ಟಿರುವ ಜೆಡಿಎಸ್‌ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಪಕ್ಷದ ಅಸ್ತಿತ್ವ ಗಟ್ಟಿಗೊಳಿಸಲು ಮುಂದಾಗಿದೆ. ಇದಕ್ಕಾಗಿ ಖುದ್ದು μಲ್ಡಿಗಿಳಿದಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಬಸವಕಲ್ಯಾಣದಲ್ಲೇ 15 ದಿನ ಠಿಕಾಣಿ ಹೂಡಲಿದ್ದು, ಅವರಿಗಾಗಿ ಸುಸಜ್ಜಿತ ಮನೆ ಹುಡುಕಾಟ ಶುರುವಾಗಿದೆ.

Advertisement

ಕಾಂಗ್ರೆಸ್‌ ಶಾಸಕ ದಿ| ಬಿ. ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ಕ್ಷೇತ್ರ ಹಿಂದೊಮ್ಮೆ ಜನತಾ ಪರಿವಾರದ ಭದ್ರಕೋಟೆ ಎನಿಸಿಕೊಂಡಿತ್ತು. ಈಗ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಮತ್ತು ಶತಾಯಗತಾಯ ಕಮಲ ಅರಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿವೆ. ಈ ನಡುವೆ ಈ ಉಪ ಕದನವನ್ನು ಪ್ರತಿಷ್ಠೆಯಾಗಿ ಪಡೆದಿರುವ ಜೆಡಿಎಸ್‌ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದು ಮತ್ತೂಮ್ಮೆ ಇತಿಹಾಸ ಮರುಕಳಿಸುವುದು, ಆ ಮೂಲಕ ಪಕ್ಷದ ಸಾಮರ್ಥ್ಯ ವೃದ್ಧಿಕೊಳ್ಳಲು ಸಜ್ಜಾಗಿದೆ.

ಹಾಗಾಗಿ ರಾಜ್ಯದ ಮೂರು ಉಪ ಚುನಾವಣೆಗಳ ಪೈಕಿ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಒಟ್ಟು 14 ಚುನಾವಣೆಗಳನ್ನು ಎದುರಿಸಿರುವ ಕಲ್ಯಾಣ ಕ್ಷೇತ್ರದಲ್ಲಿ 7 ಬಾರಿ ಜನತಾ ಪರಿವಾರವೇ ಗೆಲುವಿನ ನಗೆ ಬೀರಿದೆ. ಈ ಒಂದೇ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಜೆಡಿಎಸ್‌ ಚಿಂತನೆ ನಡೆಸಿದೆ. ಇದಕ್ಕಾಗಿ ಕ್ಷೇತ್ರದ ಮುಸ್ಲಿಂ ಸಮುದಾಯದ ಪ್ರಬಲ ನಾಯಕ, ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿದ್ದ
ಸೈಯದ್‌ ಯಸ್ರಬ್‌ ಅಲಿ ಖಾದ್ರಿ ಅವರನ್ನು ಕಣಕ್ಕಿಳಿಸಿದೆ.

ಅಭ್ಯರ್ಥಿ ಖಾದ್ರಿ ಪರ ಪ್ರಚಾರಕ್ಕಾಗಿ ಕುಮಾರಸ್ವಾಮಿ ಏ.2ರಿಂದ 15 ದಿನಗಳ ಬಸವಕಲ್ಯಾಣದಲ್ಲಿ ಠಿಕಾಣಿ ಹೂಡಲು ನಿರ್ಧರಿಸಿದ್ದು, ಜೆಡಿಎಸ್‌ ನಾಯಕರು ಅವರ ವಾಸ್ತವ್ಯಕ್ಕಾಗಿ ಸುಸಜ್ಜಿತ ಮತ್ತು ವ್ಯವಸ್ಥಿತ ಮನೆಗಾಗಿ ಹುಡುಕಾಟ ನಡೆಸಿದ್ದಾರೆ. ಚುನಾವಣಾ ತಂತ್ರಗಾರಿಕೆ ರೂಪಿಸಲು ಖಾಸಗಿತನವೂ ಮುಖ್ಯವಾಗಿರುವುದರಿಂದ ಹೋಟೆಲ್‌ ಬದಲಾಗಿ ಮನೆಯನ್ನೇ ನೋಡಲಾಗುತ್ತಿದೆ. ಸ್ಥಳೀಯ ರಾಜಕೀಯ ಲೆಕ್ಕಾಚಾರಗಳೇನು? ಮತದಾರರ ಮನದಲ್ಲಿ
ಏನಿದೆ ಎಂಬುದನ್ನೂ ಸೂಕ್ಷ್ಮವಾಗಿ ಅರಿತುಕೊಂಡು ತಂತ್ರ ರೂಪಿಸುವುದು ಜೆಡಿಎಸ್‌ನ ಉದ್ದೇಶವಾಗಿದೆ.

ಕಲ್ಯಾಣ ಉಪ ಕದನಕ್ಕೆ ಈಗಾಗಲೇ ಧುಮುಕಿರುವ ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಗುರುವಾರ ಬಸವಕಲ್ಯಾಣ ಕ್ಷೇತ್ರಕ್ಕೆ ಭೇಟಿ ನೀಡಿ ಹುರಿದುಂಬಿಸಿದ್ದಾರೆ. ಅಭ್ಯರ್ಥಿ ಸೈಯದ್‌ ಯಸ್ರಬ್‌ ಅಲಿ ಖಾದ್ರಿ ನಾಮಪತ್ರ ಸಲ್ಲಿಕೆ ವೇಳೆ ಸಾಥ್‌ ನೀಡಿ ನಂತರ ಅಕ್ಕಮಹಾದೇವಿ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜಕೀಯ ಪಕ್ಷಗಳ ನಾಮಪತ್ರ ಸಲ್ಲಿಕೆ ಬಳಿಕ ಚುನಾವಣಾ ಕಣ ರಂಗೇರುತ್ತಿದ್ದಂತೆ ಕುಮಾರಸ್ವಾಮಿ ಅವರು ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ.ಅಲ್ಲಿಯವರೆಗೆ ಮನೆಯನ್ನು ಅಂತಿಮಗೊಳಿಸಿ ವಾಸ್ತವ್ಯಕ್ಕೆ ಸಜ್ಜುಗೊಳಿಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.

Advertisement

ಹುಬ್ಬಳ್ಳಿಯಲ್ಲೂ ಮನೆ ಮಾಡಿದ್ದರು!
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲಗೊಳಿಸಲು ಕಳೆದ ಬಾರಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಬೈರಿದೇವರಕೊಪ್ಪದಲ್ಲಿ ಜೆಡಿಎಸ್‌ ಮುಖಂಡರು ಸುಸಜ್ಜಿತ ಮನೆ ಹುಡುಕಿ ಸಕಲ ವ್ಯವಸ್ಥೆ ಮಾಡಿದ್ದರು. “ಆಗಾಗ’ ಬಂದು ಹೋಗುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಕಾಲಕ್ರಮೇಣ ಬರುವುದನ್ನೇ ನಿಲ್ಲಿಸಿದರು. ಈಗ ಅವರ ಹೆಸರಿನಲ್ಲಿ ಮಾಡಿದ್ದ ಮನೆ ಖಾಲಿ ಮಾಡಲಾಗಿದೆ!

ಹಿಂದೆ ಭದ್ರಕೋಟೆಯಾಗಿದ್ದ ಬಸವಕಲ್ಯಾಣ ಕ್ಷೇತ್ರದಲ್ಲಿ ಜೆಡಿಎಸ್‌ನ್ನು ಅಧಿ  ಕಾರಕ್ಕೆ ತರುವುದು ಪಕ್ಷದ ಗುರಿ. ಉಪ ಚುನಾವಣೆ ಹಿನ್ನೆಲೆ ಏ.1ರಿಂದ 15 ದಿನ ಕುಮಾರಸ್ವಾಮಿ ಬಸವಕಲ್ಯಾಣದಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಇದಕ್ಕಾಗಿ ನಗರದಲ್ಲಿ ಸುಸಜ್ಜಿತ ಮನೆ ಹುಡುಕಾಟ ಆರಂಭಿಸಲಾಗಿದೆ.
ರಮೇಶ ಪಾಟೀಲ ಸೋಲಪುರ,
ಜಿಲ್ಲಾಧ್ಯಕ್ಷ ಜೆಡಿಎಸ್‌, ಬೀದರ

ಉಪ ಚುನಾವಣೆ ಹಿನ್ನೆಲೆ 15 ದಿನಗಳ ಕಾಲ ಬಸವಕಲ್ಯಾಣದಲ್ಲಿಯೇ ಠಿಕಾಣಿ ಹೂಡಲು ನಿರ್ಧರಿಸಿದ್ದೇನೆ. ಕ್ಷೇತ್ರದ ಪ್ರತಿಯೊಂದು ಮನೆ-ಮನೆಗೆ ತೆರಳಿ ಪಕ್ಷದ ಬಗ್ಗೆ ಜನರಿಗೆ ಕೊಟ್ಟ ಆಡಳಿತ ಮನವರಿಕೆ ಮಾಡಿಕೊಡಲಾಗುವುದು. ಬಿಜೆಪಿ ಸೃಷ್ಟಿಸಿರುವ ಕೆಟ್ಟ ದಿನಗಳನ್ನು ಹೋಗಲಾಡಿಸಲು ನಾವು ಬಸವಕಲ್ಯಾಣ ಚುನಾವಣೆ ಮೂಲಕ ಹೋರಾಡುತ್ತೇವೆ.
ಎಚ್‌.ಡಿ ಕುಮಾರಸ್ವಾಮಿ, ಮಾಜಿ ಸಿಎಂ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next