Advertisement

ಪೊಲೀಸ್‌ ದೌರ್ಜನ್ಯ ಆರೋಪ ಗೃಹ ಇಲಾಖೆಯಿಂದ ತನಿಖೆ

12:42 PM Apr 11, 2017 | Team Udayavani |

ಮಂಗಳೂರು: ಅಹ್ಮದ್‌ ಖುರೇಶಿ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದೆ ಎಂಬ ವಿಚಾರದ ಬಗ್ಗೆ ತನಿಖೆ ನಡೆಸಿ ಸಂಪೂರ್ಣ ವರದಿ ಪಡೆದುಕೊಳ್ಳುವುದಾಗಿ ಗೃಹಸಚಿವರು ಈಗಾಗಲೇ ತಿಳಿಸಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತಂತೆ ನಾನು ಗೃಹಸಚಿವರಲ್ಲಿ ಮಾತನಾಡಿದ್ದೇನೆ. ಪ್ರಕರಣದ ಬಗ್ಗೆ ತನಿಖೆಗೆ ಅಧಿಕಾರಿಯೋರ್ವರನ್ನು ನೇಮಕ ಮಾಡಿ ಪೂರ್ಣ ವರದಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ತಪ್ಪಿತಸ್ಥರು ಯಾರೇ ಇರಲಿ ಕಾನೂನು ಅದರದ್ದೇ ಆದ ಕ್ರಮ ಕೈಗೊಳ್ಳುತ್ತದೆ ಎಂದರು.

ಮಾನವೀಯ ನೆಲೆಯಲ್ಲಿ ನಾನು ಈಗಾಗಲೇ ಸ್ಪಂದಿಸಿದ್ದೇನೆ. ಖುರೇಶಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದು ಗೃಹಸಚಿವರಿಗೆ ಇದನ್ನು ತಿಳಿಸುತ್ತೇನೆ. ಇದೇ ರೀತಿಯಾಗಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಎಎಸ್‌ಐ ಐತಪ್ಪ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ ಎಂದವರು ಹೇಳಿದರು.

ವೃಥಾರೋಪ ಸಲ್ಲದು
ಯಾರೋ ಕೆಲವು ಮಂದಿ ತಪ್ಪು ಮಾಡಿದರೆ ಇಡೀ ಪೊಲೀಸ್‌ ಇಲಾಖೆಯನ್ನು ದೂಷಿಸುವುದು ಅಥವಾ ಅಲ್ಪಸಂಖ್ಯಾಕರಿಗೆ ವಿರುದ್ಧವಾಗಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದರು. 

ಪೊಲೀಸ್‌ ಇಲಾಖೆ ಕೇಸರೀಕರಣಗೊಂಡಿದೆ ಎನ್ನುವ ಆರೋಪದ ಬಗ್ಗೆ ಪ್ರಶ್ನಿಸಿದಾಗ ಇದರಲ್ಲಿ ಅರ್ಥವಿಲ್ಲ. ಪೊಲೀಸ್‌ ಇಲಾಖೆಯ ನೀತಿ ನಿಯಮಗಳಿಗೆ ವಿರುದ್ಧವಾಗಿ ಕಾರ್ಯವೆಸಗುವ ಕೆಲವು ಮಂದಿ ಇರಬಹುದು.

Advertisement

ಅಂತಹವರನ್ನು ಇಲಾಖೆ ಗುರುತಿಸಿ ಕ್ರಮ ಕೈಗೊಳ್ಳಬೇಕು. ಅದರ ಬದಲು ಇಡೀ ಪೊಲೀಸ್‌ ವ್ಯವಸ್ಥೆಯ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ  ಎಂದು ಅವರು ಹೇಳಿದರು.

ಪ್ರಕರಣದಲ್ಲಿ ಸಚಿವರ ವಿರುದ್ಧ ಕೆಲವು ಮಂದಿ ದೂಷಣೆ ಮಾಡುತ್ತಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿಧಿದಾಗ, ಇದು ಪ್ರಥಮ ಬಾರಿಯಲ್ಲ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಇದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ. ಎಲ್ಲರೂ ಮಾವಿನ ಮರಕ್ಕೆ ಕಲ್ಲು ಎಸೆಯುತ್ತಾರೆ. ಆಲದ ಮರಕ್ಕೆ ಯಾರು ಕಲ್ಲು ಎಸೆಯುವುದಿಲ್ಲ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next