ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರದ ವಿದ್ಯಮಾನಗಳು ಹಾಗೂ ನ್ಯಾಯಾಲಯದ ತೀರ್ಪುಗಳ ಅನುಷ್ಠಾನದ ಮೇಲುಸ್ತುವಾರಿಗಾಗಿ ಉನ್ನತಾಧಿಕಾರಿಗಳ ಸಮಿತಿಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ. ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಗ್ಯಾನೇಶ್ ಕುಮಾರ್ ನೇತೃತ್ವದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಈ ಸಮಿತಿಯಲ್ಲಿ ಇರಲಿದ್ದಾರೆ.
ನ.9ರಂದು ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವಿವಾದಿತ ಸ್ಥಳದಲ್ಲೇ ರಾಮಮಂದಿರ
ನಿರ್ಮಾಣವಾಗಬೇಕು. ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಬೇಕು. ವಿವಾದಿತ ಪ್ರದೇಶದ ಮೇಲಿನ
ಹಕ್ಕುಗಳಿಗಾಗಿ ಕಾನೂನಾತ್ಮಕ ಹೋರಾಟ ನಡೆಸಿದ್ದ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಿಸಲು ಅಯೋಧ್ಯೆಯಲ್ಲೇ 5 ಎಕರೆ ಜಾಗ ನೀಡಬೇಕೆಂದು ಆದೇಶಿಸಿತ್ತು. ಈ ಆದೇಶಗಳ ಅನುಷ್ಠಾನದ ಮೇಲುಸ್ತುವಾರಿಯನ್ನು ಕುಮಾರ್ ನೇತೃತ್ವದ ಸಮಿತಿ ವಹಿಸಿಕೊಳ್ಳಲಿದೆ.
ಸಮಿತಿಗೆ: ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಮೂರು ಸಂಭಾವ್ಯ ಸ್ಥಳಗಳನ್ನು ಗುರುತು ಮಾಡಿರುವ ಉತ್ತರ ಪ್ರದೇಶ ಸರ್ಕಾರ, ಆ ಮೂರೂ ಸ್ಥಳಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಕೇಂದ್ರ ಗೃಹ ಇಲಾಖೆಯನ್ನು ಕೋರಿತ್ತು. ಅದೂ ಸೇರಿದಂತೆ, ತೀರ್ಪಿಗೆ ಸಂಬಂಧಿಸಿದ ವಿದ್ಯಮಾನಗಳೂ ಅಸ್ತಿತ್ವಕ್ಕೆ ಬಂದಿರುವ ಸಮಿತಿಯ ಸುಪರ್ದಿಗೆ ಬರಲಿದೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹತ್ವದ ಜವಾಬ್ದಾರಿ?: ಕುತೂಹಲದ ವಿಚಾರವೆಂದರೆ, ಜಮ್ಮು ಕಾಶ್ಮೀರ ಮತ್ತು ಲಡಾಖ್‌ಗಳನ್ನು
ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ನಂತರ, ಆ ಎರಡೂ ಪ್ರಾಂತ್ಯಗಳ ವಿದ್ಯಮಾನಗಳ ಮೇಲುಸ್ತುವಾರಿ ವಹಿಸುವ ಜವಾಬ್ದಾರಿಯನ್ನೂ ಗ್ಯಾನೇಶ್ ಕುಮಾರ್ ಅವರೇ ಹೊತ್ತಿದ್ದಾರೆ.
ಸಿಬಿಐನ ಮಾಜಿ ನಿರ್ದೇಶಕರ ವಿಚಾರಣೆ ಲಕ್ನೋದ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ 1992 ಡಿ. 6ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ ಎಂದು ವರದಿಯಾಗಿದೆ. ಬಾಬ್ರಿ ಮಸೀದಿ ನೆಲಸಮ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಬಿಐ ಜಂಟಿ ನಿರ್ದೇಶಕ ಎಂ. ನಾರಾಯಣ ಸ್ವಾಮಿ, ಮಸೀದಿ ಕೆಡವುವ 2ವಿಡಿಯೋಗಳನ್ನು ಕಲೆ ಹಾಕಿದ್ದರು. 15 ಎಂಎಂ ಹಾಗೂ 35 ಎಂಎಂ ಫಿಲ್ಮ್ಗಳಲ್ಲಿ ಚಿತ್ರೀಕರಿಸಲಾಗಿರುವ ಆ ವಿಡಿಯೋಗಳನ್ನು ಚಾಲೂಗೊಳಿಸಿ ತೋರಿಸುವಂತೆ ಹಳೆಯ ತಂತ್ರಜ್ಞಾನದ ಪ್ರೊಜೆಕ್ಟರ್‌ಗಳು ಈಗ ಲಭ್ಯವಿಲ್ಲವಾದ್ದರಿಂದ ಆ ವಿಡಿಯೋಗಳನ್ನು ಅವಲೋಕಿಸುವ ಕೆಲಸಕ್ಕೆ ಕೋರ್ಟ್ ಮುಂದಾಗಿಲ್ಲ. ಹೀಗಾಗಿ ನಾರಾಯಣ ಸ್ವಾಮಿ ಅವರನ್ನೇ ಕೂಲಂಕಶವಾಗಿ ಪ್ರಶ್ನೆ ಮಾಡಿ ಮಾಹಿತಿಗಳನ್ನು ಕಲೆ ಹಾಕಲು ನ್ಯಾಯಾಲಯ ತೀರ್ಮಾನಿಸಿದೆ.