ಬೆಂಗಳೂರು: ಕ್ವಾರಂಟೈನ್ ಮಾಡಲು ಹೋದ ಆರೋಗ್ಯ ಯೋಧರ ಮೇಲೆ ಹಲ್ಲೆ ನಡೆಸಿದ ಪಾದರಾಯನಪುರಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇಂತಹ ಕೆಲಸ ಮಾಡಿದವರಿಗೆ ಪೊಲೀಸ್ ಆಕ್ಷನ್ ಎಂದರೆ ಏನು ಎಂದು ತೋರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಆರೋಗ್ಯ ಯೋಧರು ದ್ವಿತೀಯ ಸಂಪರ್ಕದ ಜನರನ್ನು ಕ್ವಾರಂಟೈನ್ ಮಾಡಲು ಹೋಗಿದ್ದರು. 58 ಜನರನ್ನು ಕ್ವಾರಂಟೈನ್ ಮಾಡಬೇಕಿತ್ತು. 15 ಮಂದಿ ಆ ಮೊದಲೇ ಕ್ವಾರಂಟೈನ್ ಆಗಿದ್ದರು. ಇನ್ನೂ 20 ಜನರು ತಯಾರಿದ್ದರು. ಆದರೆ ಆಗ ಕೆಲವರು ಅಪಸ್ವರ ಎತ್ತಿ ನಾವು ಕ್ವಾರಂಟೈನ್ ಗೆ ಬರುವುದಿಲ್ಲ ಎಂದು ಗಲಾಟೆ ಮಾಡಿದರು ಎಂದರು.
ಸ್ಥಳದಲ್ಲಿ ನೂರಕ್ಕಿಂತಲೂ ಹೆಚ್ಚು ಜನರು ಗುಂಪು ಸೇರಿ ಹಾಕಿದ್ದ ಪೆಂಡಾಲ್, ಕುರ್ಚಿಗಳನ್ನು ನಾಶ ಮಾಡಿದರು. ಸಿಸಿ ಕ್ಯಾಮರಾ, ಬ್ಯಾರಿಕೇಡ್ ಗಳ ಮೇಲೆ ಹಲ್ಲೆ ಮಾಡಿದರು. ಪೊಲೀಸರು, ವೈದ್ಯಕೀಯ ಸಿಬ್ಬಂದಿ ಗಳ ಮೇಲೆ ಕಲ್ಲು ತೂರಾಟ, ಹಲ್ಲೆ ಮಾಡಿದ್ದಾರೆ ಎಂದು ಗೃಹ ಸಚಿವರು ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ನಿಯಂತ್ರಣ ಮಾಡಿದ್ದಾರೆ. ಘಟನೆಗೆ ಕಾರಣವಾದವರು ಎಷ್ಟೇ ದೊಡ್ಡವರಿರಲಿ ಕ್ರಮ ಕೈಗೊಳ್ಳಿ ಎಂದು ನಿನ್ನೆಯೇ ಸೂಚಿಸಿದ್ದೆ. ಅದರಂತೆ 54 ಜನರನ್ನು ಅರೆಸ್ಟ್ ಮಾಡಲಾಗಿದೆ. ಅರೆಸ್ಟ್ ಮುಂದುವರಿಯುತ್ತದೆ. ಪರಾರಿಯಾದವರನ್ನು ಹಿಡಿಯುತ್ತೇವೆ. ಮ್ಯಾಜಿಸ್ಟ್ರೇಟ್ ದೂರು ನೀಡಿದ್ದೇವೆ. ಎನ್ ಡಿ ಎ ಕಾಯ್ದೆ ಅಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈಗಾಗಲೇ ತಂಡ ರಚಿಸಿದ್ದೇವೆ. ಅದರ ನೇತೃತ್ವದಲ್ಲಿ ತನಿಖೆ ಮಾಡುತ್ತೇವೆ. ಇದರ ಹಿಂದೆ ಯಾರಿದ್ದಾರ ಎಂದು ತನಿಖೆ ನಡೆಸುತ್ತೇವೆ ಎಂದರು. ಪಾದರಾಯಣಪುರದಲ್ಲಿ 58 ಜನರು ಕ್ವಾರಂಟೈನ್ ಆಗಬೇಕಿತ್ತು. ಈಗ 19 ಜನರು ಆಗಿದ್ದಾರೆ. ಉಳಿದವರು ಸ್ವಯಂ ಪ್ರೇರಣೆಯಿಂದ ಬನ್ನಿ, ಇಲ್ಲದಿದ್ದರೆ ಅನಿವಾರ್ಯವಾಗಿ ಕಾನೂನು ಕ್ರಮದಿಂದ ಕ್ವಾರಂಟೈನ್ ಮಾಡಿಸಬೇಕಾಗುತ್ತದೆ ಎಂದರು.
ಈ ಸಮಯದಲ್ಲಿ ಸರಕಾರದ ವಿರುದ್ಧ ಪುಂಡಾಟಿಕೆ ಮಾಡಿದರೆ ಅವರ ಪುಂಡನ್ನು ಅಡಗಿಸುವ ಕೆಲಸವನ್ನು ನಿರ್ದಾಕ್ಷಿಣ್ಯವಾಗಿ, ಯಾರ ಮುಲಾಜಿಲ್ಲದೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅದಕ್ಕೆ ಅವಕಾಶ ನೀಡಬೇಡಿ ಎಂದು ಗೃಹ ಸಚಿವರು ಎಚ್ಚರಿಸಿದರು.
ಸರಕಾರದ ಕಾರ್ಯಕ್ರಮಗಳನ್ನು ವಿರೋಧಿಸುವ ಪ್ರವೃತ್ತಿ ಇಲ್ಲಿನ ಕೆಲ ಪುಡಿ ನಾಯಕರಿಗಿದೆ. ಅವರಿಗೆ ರಾಜಕೀಯ ರಕ್ಷಣೆ ಇದೆ. ಇದರ ಹಿಂದೆ ಯಾರಿದ್ದಾರೆ ಅದರ ಬಗ್ಗೆ ತನಿಖೆ ಮಾಡುತ್ತೇವೆ ಎಂದರು.