Advertisement

ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ: ಆರಗ ಜ್ಞಾನೇಂದ್ರ ಗುಡುಗು

03:40 PM Jul 07, 2022 | Team Udayavani |

ಬೆಳಗಾವಿ: ಪಿಎಸ್ ಐ ಅಕ್ರಮ ಪರೀಕ್ಷಾ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕಾನೂನಿನ ಕಕ್ಷೆಗೆ ತಂದು, ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದರು.

Advertisement

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ನಿಪ್ಪಾಣಿ ಶಹರ ಮತ್ತು ಗ್ರಾಮೀಣ ಪೊಲೀಸ್ ಠಾಣೆಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಸಚಿವರು, ಪಿಎಸ್ ಐ ಹಗರಣದ ತನಿಖೆ ಯಾವುದೇ ಹಸ್ತಕ್ಷೇಪ ಇಲ್ಲದೆ, ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ತನಿಖೆಯು ಅತ್ಯಂತ ನಿಷ್ಪಕ್ಷಪಾತ ವಾಗಿ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕರು, ಹತಾಶರಾಗಿ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ, ಸಿಐಡಿ ತನಿಖೆಗೆ ವಹಿಸಲಾದ ಹಲವಾರು ದೂರುಗಳ ಬಗ್ಗೆ  ಎಫ್ ಐಆರ್ ದಾಖಲಾಗಿಲ್ಲ, ಎಫ್ಐಆರ್ ಆದ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲ, ಆದರೆ ಈಗ ಪಿಎಸ್ ಐ ನೇಮಕ ಪ್ರಕರಣದಲ್ಲಿ ಪ್ರಾಮಾಣಿಕವಾಗಿ ತನಿಖೆ ಆಗುತ್ತಿರುವ ವಿಷಯದಲ್ಲಿ ನಮ್ಮ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.

ಬಿಜೆಪಿ ವಿರೋಧ ಪಕ್ಷವಾಗಿ ಕಡ್ಲೆಪುರಿ ತಿನ್ನುತ್ತಿದ್ದರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸಚಿವರು ನಾವು ಕೇಳಿದ್ದೆವು, ಆದರೆ ಅವರು ಸ್ಪಂದಿಸಿರಲಿಲ್ಲ. ಹಾಗಾದರೆ ನಾವು ಪ್ರಶ್ನೆ ಮಾಡದೇ ಇರುವುದನ್ನು, ಅವರು ಕೇಸುಗಳನ್ನು ಮುಚ್ಚಿ ಹಾಕುವುದಕ್ಕೆ ಸಿಕ್ಕಿದ ಪರವಾನಿಗೆ ಎಂದು ತಿಳಿದಿದ್ದರೇ ಎಂದು ತಿರುಗೇಟು ನೀಡಿದರು.

ನನ್ನ ಹಾಗೂ ಮುಖ್ಯಮಂತ್ರಿಯವರ, ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಸಚಿವರು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next