ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಕೊಡಿಸುತ್ತೇನೆ. ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಹರ್ಷನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಸರ್ಕಾರ ನಿಮ್ಮ ಜೊತೆ ಇರುತ್ತದೆ ಎಂದು ಧೈರ್ಯ ತುಂಬಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತಿಳಿದಿದೆ. ಐದು ಜನ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ. ಯಾರೂ ಭಾವುಕರಾಗಬಾರದು ನಗರದಲ್ಲಿ ಶಾಂತಿ ಕಾಪಾಡಬೇಕು ಎಂದರು.
ಹರ್ಷನ ಕೊಲೆಗೆ ಕಾರಣ ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ. ಹರ್ಷನ ಮೇಲೆಯೂ ಒಂದೆರಡು ಪ್ರಕರಣಗಳಿದ್ದವು ಎನ್ನಲಾಗುತ್ತಿದೆ. ಹರ್ಷನ ಕೊಲೆ ಮಾಡಿದವರನ್ನು ಶೀಘ್ರವೇ ಬಂಧಿಸುತ್ತೇವೆ. ಏನು ಮಾಡಿಬೇಕಾದರೂ ಬಚಾವಾಗುತ್ತೇವೆ ಎಂದುಕೊಂಡವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ಯುವಕನ ಬರ್ಬರ ಹತ್ಯೆ
ಆಕ್ರೋಶಕ್ಕೊಳಗಾದವರಿಂದ ಕಲ್ಲು ತೂರಾಟ ನಡೆದಿದೆ. ಬೈಕ್ ಗಳನ್ನು ಸುಟ್ಟು ಹಾಕಲಾಗಿದೆ. ಯಾರೂ ಈ ರೀತಿಯ ಕೃತ್ಯಕ್ಕೆ ಕೈಹಾಕಬಾರದು. ನಗರದಲ್ಲಿ ಶಾಲಾ ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಹರ್ಷನ ಕೊಲೆಗೆ ಯಾವ ಸಂಘಟನೆ ಕಾರಣ ಎಂಬ ಮಾಹಿತಿ ಇಲ್ಲ. ಹರ್ಷನ ಮೇಲೆ ಈ ಹಿಂದೆ ಹಲ್ಲೆ ನಡೆದಿತ್ತು ಎಂಬ ಮಾಹಿತಿ ಇದೆ. ಇನ್ನಷ್ಟೇ ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬೇಕಿದೆ. ಮುಂದೆ ಈ ರೀತಿಯ ಪ್ರಕರಣ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಬೇಕಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಜನರಿಗಿರುವಷ್ಟೇ ಆಕ್ರೋಶ ನಮಗೂ ಇದೆ. ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸುವ ಮೂಲಕ ಆಕ್ರೋಶ ತೀರಿಸಿಕೊಳ್ಳಬೇಕು. ಅದನ್ನು ಬಿಟ್ಟು ಶಾಂತಿ ಸುವ್ಯವಸ್ಥೆಗೆ ಯಾರೂ ಧಕ್ಕೆಯುಂಟು ಮಾಡಬಾರದು. ಹಿಜಾಬ್ ಗಲಾಟೆಗೂ ಇದಕ್ಕೂ ಸಂಬಂಧ ಇದೆ ಎನಿಸುವುದಿಲ್ಲ ಎಂದು ಗೃಹಸಚಿವರು ಹೇಳಿದರು.