Advertisement

ಶೀತಕ್ಕೆ ಆರಾಮ ಬಾಣ

06:30 PM Jul 16, 2019 | mahesh |

ಮಳೆಗಾಲದಲ್ಲಿ ಮಕ್ಕಳನ್ನು ಕಾಡುವ ತೊಂದರೆಗಳು ಒಂದೆರಡಲ್ಲ. ಮುದ್ದು ಮಕ್ಕಳನ್ನು ಸುಸ್ತು ಮಾಡುವ ಶೀತ, ಕಫ‌, ಕೆಮ್ಮಿನಂಥ ಸಮಸ್ಯೆಯಿಂದ ಬಚಾವಾಗಲು ಸರಳ ಪರಿಹಾರಗಳು ಇಲ್ಲಿವೆ…

Advertisement

ಕಂದಮ್ಮನಿದ್ದರೆ ಆ ಸಂಭ್ರಮ ಹೇಳತೀರದು. ಅದರ ನಗು, ಅಳು, ತುಂಟಾಟ, ತೊದಲು ಮಾತು ಕೇಳುತ್ತಿದ್ದರೆ. ಸಮಯ ಹೋಗುವುದೇ ತಿಳಿಯದು. ಹಾಂ, ಹಾಗಂತ ಮೈಮರೆತಿರೋ ಕಷ್ಟ ಕಷ್ಟ. ಯಾಕಂದ್ರೆ, ಇದು ಮಳೆಗಾಲ. ಅಮ್ಮನ ಗರ್ಭದೊಳಗೆ ನವಮಾಸ ಬೆಚ್ಚಗೆ ಮಲಗಿದ್ದ ಮುದ್ದು ಕಂದನಿಗೆ ಶೀತದ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾದೀತು. ಹಾಗಾಗಿ, ಅಗತ್ಯಕ್ಕಿಂತ ಹೆಚ್ಚೇ ಜಾಗ್ರತೆ ವಹಿಸಬೇಕು. ಶೀತದ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಕೆಲವು ಸುಲಭ ಪರಿಹಾರಗಳು ಇಲ್ಲಿವೆ.

– ಮಗುವಿಗೆ ಶೀತ ಪ್ರಾರಂಭದ ಹಂತದಲ್ಲಿದ್ದರೆ ತುಳಸಿ ಹಾಗೂ ಸಾಂಬ್ರಾಣಿ ರಸವನ್ನು ಜೇನಿನಲ್ಲಿ ಬೆರೆಸಿ ಕೊಡಿ.

– ಶೀತದೊಂದಿಗೆ ತಲೆನೋವು, ತಲೆಭಾರ ಕಾಣಿಸಿಕೊಂಡಿದ್ದರೆ (ಚಿಕ್ಕ ಮಕ್ಕಳಿಗೆ ವಿಕ್ಸ್‌, ಝಂಡುಬಾಮ್‌ ಹಚ್ಚಬಾರದು) ಕಟುಕರೋಣಿ (ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ)ಯನ್ನು ನೀರಲ್ಲಿ ಅರೆದು, ಸ್ವಲ್ಪ ಬಿಸಿ ಮಾಡಿ, ಹಣೆ, ತಲೆ ಹಾಗೂ ನೆತ್ತಿಗೆ ಲೇಪಿಸುವುದರಿಂದ ತಲೆನೋವು, ನೆಗಡಿ ಕಡಿಮೆಯಾಗುತ್ತದೆ.

-ಮೂಗಿನಲ್ಲಿ ಶೀತ ಹರಿಯುತ್ತಿದ್ದರೆ ಹಸುವಿನ ತುಪ್ಪವನ್ನು ಮೂಗಿನ ಹೊಳ್ಳೆಗೆ ಹಚ್ಚಿ ಅಥವಾ ಬೇಬಿ ಪೌಡರ್‌/ಕುಂಕುಮವನ್ನು ಬಿಸಿ ಮಾಡಿ ನೆತ್ತಿಗೆ ಹಾಕಿ.

Advertisement

– ಮೂಗು ಕಟ್ಟಿ, ಮಗು ನಿದ್ದೆ ಮಾಡಲು ತೊಂದರೆ ಪಡುತ್ತಿದೆ ಎಂದಾದರೆ ಮೂಗಿನ ಬಳಿ ಕರ್ಪೂರವನ್ನು ಹಿಡಿದು, ಮೂಸಲು ಬಿಡಿ. ಇದರಿಂದ ಕಟ್ಟಿದ ಮೂಗು ತೆರೆಯುವುದು.

– ಮಗುವಿನ ಎದೆಯಲ್ಲಿ ಗುರುಗುರು ಶಬ್ದ ಬರುತ್ತಿದೆ ಅಂತಾದರೆ ಕಫ‌ ಕಟ್ಟಿದೆ ಎಂದರ್ಥ. ಅಂಥ ಸಂದರ್ಭದಲ್ಲಿ ಒಂದು ಚಿಕ್ಕ ತುಂಡು ಕರ್ಪೂರ ತೆಗೆದುಕೊಂಡು, ಅದಕ್ಕೆ ಒಂದು ಹನಿ ತೆಂಗಿನೆಣ್ಣೆ ಹಾಕಿ ಎರಡೂ ಕೈಯಲ್ಲಿ ಚೆನ್ನಾಗಿ ತಿಕ್ಕಿ ಎದೆ ಹಾಗೂ ಬೆನ್ನಿಗೆ ಹಚ್ಚಿ. ಹೀಗೆ ಮಾಡಿದರೆ ಕಫ‌ ಕರಗುವುದಲ್ಲದೆ, ಮೂಗು ಕಟ್ಟಿದ ಸಮಸ್ಯೆಯೂ ಪರಿಹಾರವಾಗುತ್ತದೆ.

-ಲಿಂಬೆ ಹಾಗೂ ಜೇನು ಸೇರಿಸಿದ ಶರಬತ್ತನ್ನು ಮಗುವಿಗೆ ಆಗಾಗ ಸ್ವಲ್ಪ ಸ್ವಲ್ಪ ಕುಡಿಸುವುದರಿಂದ ಕಫ‌ ಕರಗುತ್ತದೆ.

– ಮಗುವಿನ ಗಂಟಲು ಕಟ್ಟಿದೆ ಅಂತಾದರೆ ಜೇನು, ಹಸಿ ಶುಂಠಿ ರಸವನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಅರ್ಧ ಚಮಚೆಯಂತೆ ಕೊಡಿ. ಒಣ ಕೆಮ್ಮು ನಿಲ್ಲಲು ಜೇನು, ಒಣ ಶುಂಠಿಯ ರಸ ಸಹಾಯಕ.

ವೈದ್ಯರ ಸಲಹೆ ಮೇರೆಗೆ ಅಥವಾ ಹಿರಿಯರ ಸಲಹೆ ಪಡೆದು, ಈ ಮನೆಮದ್ದುಗಳನ್ನು ಮಗುವಿಗೆ ನೀಡಿದರೆ ಉತ್ತಮ.

-ವಂದನಾ ರವಿ ಕೆ.ವೈ.

Advertisement

Udayavani is now on Telegram. Click here to join our channel and stay updated with the latest news.

Next