ಅಪ್ಪ-ಅಮ್ಮ ಏನ್ಮಾಡ್ತಾರೆ ಎಂಬ ಪ್ರಶ್ನೆ ಬಂದಾಗ ಅಪ್ಪನ ಉದ್ಯೋಗವನ್ನು ಹೆಮ್ಮೆಯಿಂದ ಹೇಳುವವರೆಲ್ಲರೂ ಅಮ್ಮನ ಬಗ್ಗೆ ಹೇಳಲು ಹಿಂಜರಿಯುತ್ತಾರೆ. ಯಾಕೆಂದರೆ, ಹೆಚ್ಚು ಮಂದಿಯ ಅಮ್ಮಂದಿರು ಹೌಸ್‌ವೈಫ್ ಅಥವಾ ಹೋಮ್‌ಮೇಕರ್ ಆಗಿದ್ದಾರೆ ಎಂಬ ಕಾರಣಕ್ಕೆ. ಅಡುಗೆ ಮಾಡೋದು, ಪಾತ್ರೆ ತೊಳೆಯೋದು, ಕಸ ಗುಡಿಸೋದು, ಬಟ್ಟೆ ಒಗೆಯೋದು ಅಷ್ಟೇ ತಾನೆ ಇನ್ನೇನು ಕೆಲಸ ಎಂಬ ಉಡಾಫೆ. ಆದರೆ, ಒಂದು ಮಾತಂತೂ ನೂರಕ್ಕೆ ನೂರು ನಿಜ. ಹೋಮ್‌ಮೇಕರ್ ಆಗುವುದು ಅಷ್ಟು ಸುಲಭವಲ್ಲ.
ಅಮ್ಮ, ಹೆಂಡತಿ, ತಾಯಿ ಇಲ್ಲದ ಒಂದೆರಡು ದಿನ ಆ ಮನೆ ಹೇಗಿರುತ್ತೆ ಅಂತ ಹಲವರಿಗೆ ಗೊತ್ತಿರಬಹುದು. ಒಂದೇ ದಿನದಲ್ಲಿ ಒಂದು ವಾರ ಕಸ ಗುಡಿಸದ ಮನೆಯಂತೆ ಪಾಳು ಬಿದ್ದಿರುತ್ತದೆ. ಒಬ್ಬರ ಅಡುಗೆಯಾದರೂ ಇಪ್ಪತ್ತು ಮಂದಿಗೆ ಅಡುಗೆ ಮಾಡಿದಂತೆ ಪಾತ್ರೆಗಳು ಸಿಂಕ್‌ನಲ್ಲಿ ರಾಶಿ ಬಿದ್ದಿರುತ್ತದೆ. ಇನ್ನು ಬಟ್ಟೆಗಳ ಅವಸ್ಥೆಯೋ ದೇವರಿಗೇ ಪ್ರೀತಿ. ಮನೆಪೂರ್ತಿ ಒಂದೆಡೆ ಇಟ್ಟ ವಸ್ತುಗಳು ಎಲ್ಲೆಲ್ಲೋ ಬಿದ್ದು ಇದು ನಮ್ಮನೆಯೋ ಇನ್ಯಾರ ಮನೆಯೋ ಅನ್ನುವಷ್ಟರ ಮಟ್ಟಿಗೆ ಬದಲಾವಣೆ ಆಗಿರುತ್ತದೆ. ಮನೆಯಲ್ಲಿರುವಷ್ಟು ದಿನ ಹೆಂಗಸರನ್ನು ಬೈಯುವವರು ಒಮ್ಮೆ ವಾಪಾಸ್ ಮನೆಗೆ ಬಂದಿºಟ್ರೆ ಸಾಕಪ್ಪ ಎಂದು ಎಂದುಕೊಳ್ಳುತ್ತಾರೆ.
ಇಷ್ಟೆಲ್ಲ ಪಡಿಪಾಟಲು ಅನುಭವಿಸಿದ್ರೂ ಹೆಂಡ್ತಿ ಮನೆಗೆ ಮರಳಿ ಬಂದಾಗ ಮಾತ್ರ ಮತ್ತದೇ ಉಡಾಫೆಯ ಮಾತು. “ನಿಂಗೇನು ಕೆಲ್ಸ, ದಿನವಿಡೀ ಮನೆಯಲ್ಲೇ ಇರ್ತೀಯಾ. ಒಂದಿನ ಆಫೀಸ್‌ಗೆ ಹೋಗಿ ಕೆಲ್ಸ ಮಾಡು ಗೊತ್ತಾಗುತ್ತೆ’ ಎಂದು ಬಿಡುತ್ತಾರೆ. ಆದರೆ, ನಮ್ಮ ದುಡಿಮೆಗೆ ಬ್ರೇಕ್, ಸ್ಯಾಲರಿ ಎಲ್ಲವೂ ಇದೆ ಎಂಬುವುದು ಅವರಿಗೆ ಅರ್ಥವಾಗುವುದಿಲ್ಲ. ಹೌಸ್‌ವೈಫ್ ಕೆಲಸಕ್ಕೆ ಬ್ರೇಕ್, ಸ್ಯಾಲರಿ ಯಾವುದೂ ಇಲ್ಲ. ದಿನವಿಡೀ ಬರೀ ಕೆಲ್ಸ… ಕೆಲ್ಸ… ಕೆಲ್ಸ ಅಷ್ಟೆ. ಪ್ರತಿಯಾಗಿ ಸಿಗುವುದು ಬೈಗುಳ, ಗೊಣಗಾಟ ಮಾತ್ರ.
ಮುಂಜಾನೆ ಎಲ್ಲರೂ ಸುಖನಿದ್ದೆಯಲ್ಲಿದ್ದರೆ, ಅಲಾರಂ ಸದ್ದಿಗೆ ಗಡಿಬಿಡಿಯಿಂದ ಏಳಬೇಕು. ಸ್ನಾನ ಮುಗಿಸಿ, ದೇವರ ಪೂಜೆ ಮಾಡಬೇಕು. ಬೆಳಗ್ಗಿನ ತಿಂಡಿ, ಗಂಡನ ಲಂಚ್ ಬಾಕ್ಸ್‌ಗೆ ಮಧ್ಯಾಹ್ನದ ಊಟ ತಯಾರಿಸಬೇಕು. ಈ ಮಧ್ಯೆಯೇ “ಬೆಳಗ್ಗೆ ಬೆಳಗ್ಗೆ ಏನು ಪಾತ್ರೆ ಸೌಂಡ್ ಮಾಡ್ತೀಯಾ’ ಎಂಬ ಬೈಗುಳ ಸಹ ತಪ್ಪಲ್ಲ. ತಿಂಡಿ ಬಿಸಿಯಾಗಿದ್ರಂತೂ, “ಇಷ್ಟು ಬಿಸಿಬಿಸಿ ತಿನ್ನೋದು ಹೇಗೆ, ಬೆಳಗ್ಗೆ ಬೇಗ ಎದ್ದು ಮಾಡೋಕೆ ಆಗಲ್ವಾ’ ಅನ್ನೋ ಕಿರುಚಾಟ ಬೇರೆ. ಎಲ್ಲವನ್ನೂ ಕೇಳಿಸಿಕೊಂಡೂ ಕೇಳಿಸಿಕೊಳ್ಳದಂತೆ ಬಟ್ಟೆಗಳನ್ನು ನೀಟಾಗಿ ಐರನ್ ಮಾಡಿಕೊಟ್ಟು ಎಲ್ಲೆಲ್ಲೋ ಇಟ್ಟ ವಾಚ್, ಫೈಲ್‌ಗಳನ್ನು ಹುಡುಕಿಕೊಡಬೇಕು. ಲೇಟಾಗ್ತಿದೆ ಅನ್ನೋ ಮಕ್ಕಳನ್ನು ಬ್ಯಾಗ್ ತುಂಬಿಸಿ ಕಳುಹಿಸಬೇಕು. ಎಲ್ಲರನ್ನೂ ಕಳುಹಿಸಿ ಉಸ್ಸಪ್ಪಾ ಅನ್ನೋ ಹೊತ್ತಿಗೆ ಬೆಳಗ್ಗೆಯೇ ಮಾಡಿದ ತಿಂಡಿ ತಣ್ಣಗಾಗಿದ್ದರೂ ಮೃಷ್ಟಾನ್ನವೆನಿಸುತ್ತದೆ.
ಮತ್ತೆ ಕಸ ಗುಡಿಸಿ, ಬಟ್ಟೆಗಳನ್ನು ಒಗೆಯೋ ಹೊತ್ತಿಗೆ ಮಧ್ಯಾಹ್ನ. ಈ ಮಧ್ಯೆ ಹುಷಾರಿಲ್ಲ ಎಂದ ಅಮ್ಮ, ಊರಲ್ಲಿ ಸಿಕ್ಕಾಪಟ್ಟೆ ಮಳೆ ಎಂದ ಅತ್ತೆ ಎಲ್ಲರಿಗೂ ಫೋನ್ ಮಾಡಿ ಮಾತನಾಡಬೇಕು. ಮಧ್ಯಾಹ್ನದ ಊಟ ಮುಗಿಸಿ ಸ್ಪಲ್ಪ ಮಲಗುವ ಅನ್ನೋ ಹೊತ್ತಿಗೆ ಇನ್ಯಾರೋ ಬಂದು ಬಿಟ್ಟಿರುತ್ತಾರೆ. “ಅಯ್ಯೋ ನಂಗೆ ಸಾಕಾಯ್ತು’ ಅಂದ್ರೂ ಮನೆಗೆ ಬಂದವರ ಮುಖಕ್ಕೆ ರಪ್ಪನೆ ಬಾಗಿಲು ಹಾಕಲಾಗುವುದಿಲ್ಲವಲ್ಲ. ಹಲ್ಲು ಕಿರಿದು ಮನೆಯೊಳಗೆ ಕರೆದು ಸತ್ಕರಿಸಬೇಕು. ಅವರಿದ್ದಷ್ಟೂ ಹೊತ್ತು ಮಾತನಾಡುತ್ತ ಕೂರಬೇಕು. ಕೆಲಸ ರಾಶಿ ಬಿದ್ದಿದ್ದರೂ, ನಂಗೆ ಮನೆ ತುಂಬಾ ಕೆಲಸವಿದೆ, ನೀವಿನ್ನು ಹೊರಡಿ ಎನ್ನಲಾಗುವುದಿಲ್ಲ.
ಸಂಜೆ ಮರಳಿ ಗಂಡ, ಮಕ್ಕಳು ಮನೆಗೆ ಬಂದಾಗ ಮತ್ತೆ ಟೀ, ಕಾಫಿ ಏನಾದರೂ ಸ್ನ್ಯಾಕ್ಸ್. ಮತ್ತೆ ರಾತ್ರಿಗೆ ಅಡುಗೆ. ಸೀರಿಯಲ್ ನೋಡಬೇಕೆಂದು ಕೊಂಡರೂ ಅಡುಗೆ ಕೋಣೆಯಿಂದ ಅಲ್ಪಸ್ಪಲ್ಪ ಇಣುಕಿದ್ದಷ್ಟೇ ಬಂತು. ಅಷ್ಟರಲ್ಲೇ ಸೀರಿಯಲ್ ಮುಗಿದಿರುತ್ತದೆ. ಎಲ್ಲರೂ ಊಟ ಮಾಡಿ ಮಲಗುವ ಕೋಣೆ ಸೇರಿದರೆ, ಎಲ್ಲಾ ಪಾತ್ರೆ ತೊಳೆದು ಹೌಸ್‌ವೈಫ್ ರೂಮು ಸೇರೋ ಹೊತ್ತಿಗೆ ಎಲ್ಲರೂ ಸುಖನಿದ್ರೆಯಲ್ಲಿರುತ್ತಾರೆ. ಬೆಳಗ್ಗಿನಿಂದ ರಾತ್ರಿಯ ವರೆಗೆ ಹೀಗೆ ನಾನ್ ಸ್ಟಾಪ್ ದುಡಿದರೂ ಹೇಳುವಾಗ ಅವಳಿಗೇನೂ ಕೆಲಸವಿಲ್ಲ ಜಸ್ಟ್ ಹೌಸ್ ವೈಫ್ ಅಷ್ಟೆ.
ಇದೆಲ್ಲದರ ನಡುವೆ ಗಂಡ, ಮಕ್ಕಳು ಹುಷಾರು ತಪ್ಪಿದರೂ ಅವಳೇ ಡಾಕ್ಟರ್. ತರಕಾರಿ ಮುಗಿದರೆ ಅವಳೇ ಸರ್ವೆಂಟ್, ಸಿಕ್ಕಾಪಟ್ಟೆ ಕಳೆ ಬೆಳೆದಿರುವ ಗಾರ್ಡನ್‌ಗೆ ಅವಳೇ ಮಾಲಿ. ಮನೆಯಲ್ಲಿರುವ ಎಲ್ಲಾ, ಎಲ್ಲರ ಸಮಸ್ಯೆಗಳಿಗೂ ಅವಳಲ್ಲಿ ಪರಿಹಾರ ಇದ್ದೇ ಇದೆ. ಮನೆಯ ಜೀವಾಳವೇ ಆಗಿರುವ ಅವಳು ಇಲ್ಲದಿದ್ದರೆ ಆಧಾರಸ್ತಂಭವೇ ಇಲ್ಲದಂತೆ. ಮನೆಯ ಸಂಪೂರ್ಣ ಚಿತ್ರಣವೇ ಬದಲಾಗಿಬಿಡುತ್ತದೆ. ತನ್ನೆಲ್ಲ ಖುಷಿಯನ್ನು ಬದಿಗಿರಿಸಿ ಆಕೆ ಇಷ್ಟೆಲ್ಲ ಮಾಡಿದರೂ ಅವಳು ಮನೆಯಲ್ಲಿ¨ªಾಳೆ, ಏನೂ ಮಾಡುತ್ತಿಲ್ಲ ಅನ್ನೋ ಪಟ್ಟ.
ಆದರೆ, ಒಂದು ಮಾತಂತೂ ನಿಜ. ಹೋಮ್ ಮೇಕರ್ ಆಗುವುದು ಅಷ್ಟು ಸುಲಭವಲ್ಲ. ನಮ್ಮೆಲ್ಲ ಪ್ರೀತಿ, ಸಮಯ, ಶ್ರಮವನ್ನು ಮತ್ತೂಬ್ಬರಿಗಾಗಿ ಮೀಸಲಿಡಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ, ಅವಳನ್ನು ದೂರುವ ಮುನ್ನ ಇನ್ನೊಮ್ಮೆ, ಮತ್ತೂಮ್ಮೆ, ಮಗದೊಮ್ಮೆ ಯೋಚಿಸಿ. ಆಕೆಯ ನಿಸ್ವಾರ್ಥ ಸೇವೆಗೆ ನೀವೆಂದೂ ಬೆಲೆ ಕಟ್ಟಲಾರಿರಿ.
ವಿನುತಾ ಪೆರ್ಲ