ಮಂಗಳೂರು : ಕೊರೊನಾ ಪಾಸಿಟಿವ್ ಬಂದು ಮನೆಯಲ್ಲಿ ಚಿಕಿತ್ಸೆ (ಹೋಮ್ ಐಸೊಲೇಶನ್) ಪಡೆಯುತ್ತಿರುವವರನ್ನೂ ಇನ್ನು ಮುಂದೆ ಸರಕಾರಿ ಐಸೋಲೇಶನ್ ಸೆಂಟರ್‌ಗಳಲ್ಲೇ ದಾಖಲಿಸಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ಧತೆ ಆರಂಭವಾಗಿದೆ. ಆದರೆ ಉಡುಪಿಯಲ್ಲಿ ಇನ್ನೂ ಕಾರ್ಯೋನ್ಮುಖವಾಗಬೇಕಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಪಾಸಿಟವ್ ಹೊಂದಿದ ಸೋಂಕುಪೀಡಿತ ರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭ ವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 12 ಸಾವಿರ ಮಂದಿ (ಒಟ್ಟು ಸೋಂಕುಪೀಡಿತ ರಲ್ಲಿ ಶೇ.87) ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,100 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಯಲ್ಲಿದ್ದಾರೆ.
ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕೇರ್ ಸೆಂಟರ್ ಗಳಿದ್ದು, ಸುಮಾರು 2 ಸಾವಿರ ಮಂದಿಗೆ ವ್ಯವಸ್ಥೆ ಇದೆ. ಅಲ್ಲಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಸ್ವಲ್ಪ ಗಂಭೀರ ಸ್ಥಿತಿಯಲ್ಲಿರುವವರನ್ನು ಕೂಡಲೇ ಸ್ಥಳಾಂತರಿಸಲಾಗುವುದು. ಅಗತ್ಯ ಬಿದ್ದರೆ ಇನ್ನಷ್ಟು ಕೇರ್ ಸೆಂಟರ್‌ಗಳನ್ನು ಆರಂಭಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಹೋಮ್ ಐಸೊಲೇಶನ್‌ನಲ್ಲಿ ಇರು ವವರು ತಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದಾಗ ಐಸಿಯು ಅಥವಾ ವೆಂಟಿಲೇಟರ್ ಬೆಡ್ ಕೇಳುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುವಾಗ ಅವರು ನಿಗದಿತ ನಿಯಮ ಗಳನ್ನು ಪಾಲಿಸುತ್ತಾರೆಯೇ ಇಲ್ಲವೇ ಎಂಬ ಸಂಶಯವಿದೆ. ಹಾಗಾಗಿ ಈ ಸ್ಥಳಾಂತರಿಸುವ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರತಿಕ್ರಿಯಿಸಿ, ಹೋಮ್ ಐಸೋಲೇಶನ್‌ನಲ್ಲಿ ಪಾಸಿಟಿವ್ ಬಂದವರ ಇರುವವರ ನಿಗಾ ಸರಿಯಾಗಿ ನಡೆಯದೆ ಇರುವ ಕಾರಣ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸರಿಯಾಗಿ ಮೇಲ್ವಿಚಾರಣೆ ನಡೆಸುವ ಕೆಲಸ ಸದ್ಯಕ್ಕೆ ನಡೆಯುತ್ತಿದೆ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.