ಮೈಮನದ ದಣಿವನ್ನು ನಿವಾರಿಸಿ, ಚೈತನ್ಯ ತುಂಬಲು ಹಲವು ಸುಲಭದ ವಿಧಾನಗಳಿವೆ. ಅವುಗಳಲ್ಲಿ ಒಂದು ಹೋಮ್ ಸ್ಪಾ. ಇಂದು ಎಲ್ಲೆಡೆಯಲ್ಲಿ “ಸ್ಪಾ’ ವಿಧಾನದ ಸೌಂದರ್ಯ ಸ್ವಾಸ್ಥ್ಯ ಹಾಗೂ ರಿಲ್ಯಾಕ್ಸಿಂಗ್ ಆರೈಕೆಗಳು ಜನಪ್ರಿಯವಾಗುತ್ತಿವೆ. ಆದರೆ, ಹೋಮ್ ಸ್ಪಾ ದುಬಾರಿ ಅಲ್ಲವೇ ಅಲ್ಲ. ಮನೆಯಲ್ಲೇ ಸಿಗಬಹುದಾದಂಥ ಸೌಂದರ್ಯ ಚಿಕಿತ್ಸೆ ಇದು. ಅದರಲ್ಲೂ ಮೊಡವೆಗೆ ಇದುವೇ ರಾಮಬಾಣ.
ವಿಧಾನ ಹೇಗೆ?
- ಮೊದಲು ಅಭ್ಯಂಗ ಸ್ನಾನ. ಕೊಬ್ಬರಿ ಎಣ್ಣೆ ಬೆಚ್ಚಗೆ ಮಾಡಿ, ಅದರಲ್ಲಿ 8- 10 ಹನಿ ಶ್ರೀಗಂಧ ತೈಲ ಬೆರೆಸಿ ಶರೀರಕ್ಕೆ ಮಾಲೀಶು ಮಾಡಬೇಕು.
– ಬಾದಾಮಿ ತೈಲ, ಆಲಿವ್ ತೈಲಗಳಿಂದಲೂ ಮೃದುವಾಗಿ ಮುಖವನ್ನು ಮಾಲೀಶು ಮಾಡಬಹುದು. ಮಾಲೀಶು ಮಾಡುವಾಗ ತುದಿ ಬೆರಳುಗಳಿಂದ ಮೃದುವಾಗಿ ತೈಲ ಲೇಪಿಸಿ ವರ್ತುಲಾಕಾರದಲ್ಲಿ ಹೆಚ್ಚು ಒತ್ತಡ ನೀಡದೆ, ಮಾಲೀಶು ಮಾಡಬೇಕು.
– ಮೈಕೈಗಳಿಗೆ ಮಾಲೀಶು ಮಾಡಲು ಬೆಚ್ಚಗಿನ ಕೊಬ್ಬರಿ ಎಣ್ಣೆಯಲ್ಲಿ ಶುದ್ಧ ಕರ್ಪೂರ ಬೆರೆಸಿ, ಈ ಎಣ್ಣೆಯಿಂದ ಮಾಲೀಶು ಮಾಡಿದರೆ ಮೈಕೈ ನೋವು ಇದ್ದರೂ ನಿವಾರಣೆಯಾಗುವುದರ ಜೊತೆಗೆ ಕರ್ಪೂರವು ಕೇಂದ್ರೀಯ ನರಮಂಡಲವನ್ನು ಉದ್ದೀಪಿಸುವುದರಿಂದ, ಮನಸ್ಸು ಉಲ್ಲಸಿತವಾಗುತ್ತದೆ.
– ಶಿರೋಭ್ಯಂಗ ಅಥವಾ ತಲೆಕೂದಲಿಗೆ ತೈಲ ಲೇಪಿಸಲು ಅವರವರ ದೇಹ ಪ್ರಕೃತಿಯಂತೆ ಹಲವು ತೈಲಗಳನ್ನು ಆರಿಸಬಹುದು. ಆಲಿವ್ ತೈಲ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ- ಇವು ಕೂದಲನ್ನು ಸಂರಕ್ಷಿಸಲು ಹಿತಕರ. ತುಂಬಾ ಉಷ್ಣ ದೇಹವುಳ್ಳವರು, ಕಣ್ಣು ಉರಿ ಉಳ್ಳವರು ಕೊಬ್ಬರಿ ಎಣ್ಣೆಯೊಂದಿಗೆ ಹರಳೆಣ್ಣೆ ಬೆರೆಸಿ ಮಾಲೀಶು ಮಾಡಬಹುದು. ಎಳ್ಳೆಣ್ಣೆಗೆ ಕರಿಬೇವು, ಒಂದೆಲಗ, ಮದರಂಗಿ ಸೊಪ್ಪು ಅರೆದು ಬೆರೆಸಿ ಕುದಿಸಿ ತೈಲ ತಯಾರಿಸಿದರೆ ತಲೆಕೂದಲು ಉದುರುವುದು, ಹೊಟ್ಟು ಉದುರುವುದು ನಿವಾರಣೆಯಾಗುತ್ತದೆ.
ಡಾ. ಅನುರಾಧಾ ಕಾಮತ್