Advertisement

ಮನೆಯೇ ಪಾಠ ಶಾಲೆಯಾಗಲಿ

03:52 PM Jun 23, 2018 | |

ಇಂಡಿ: ಮಕ್ಕಳು ವಿದ್ಯಾವಂತರಾಗಬೇಕಾದರೆ ಮನೆಯೇ ಶಾಲೆಯನ್ನಾಗಿ ಮಾರ್ಪಡಿಸಬೇಕು. ಆಗ ಮಾತ್ರ  ಮಕ್ಕಳು ವಿದ್ಯಾವಂತರಾಗುತ್ತಾರೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಹೇಳಿದರು.

Advertisement

ಶುಕ್ರವಾರ ತಾಲೂಕಿನ ಹಿರೇಬೇವನೂರ ಗ್ರಾಮದ ಮರುಳಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ನೂತನ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಥಾಮಸ್‌ ಅಲ್ವಾ ಎಡಿಸನ್‌ ಒಬ್ಬ ಶ್ರೇಷ್ಠ ವಿಜ್ಞಾನಿಯಾ ಗಿದ್ದ,ಅವನು ಶಾಲೆಯಲ್ಲಿ ಕಲಿತಿಲ್ಲ. ಅವನ ತಾಯಿ ಅವನಿಗೆ ಮನೆಯಲ್ಲಿಯೇ ಜ್ಞಾನ ನೀಡಿದ್ದಳು ಎನ್ನುವುದನ್ನು ಮರೆಯಬಾರದು. ಒಬ್ಬ ಮಗುವಿಗೆ ಮನೆಯಲ್ಲಿ ನಾಲ್ವರು ಶಿಕ್ಷಕರು. ಅಪ್ಪ, ಅಮ್ಮ, ಅಜ್ಜಿ, ಅಜ್ಜ ಹೀಗೆ. ಇವರು  ಮಗುವಿಗೆ 6 ವರ್ಷ ಶ್ರೇಷ್ಠ ಪಾಠ ಮಾಡಬೇಕು. ಒಳ್ಳೆ ಕತೆಗಳನ್ನು ಹೇಳಬೇಕು. ಮಗುವಿಗೆ ಒಳ್ಳೆ ನಡತೆ ಕಲಿಸಿದರೆ ಅದೆ ಮಗು ಒಳ್ಳೆ ವ್ಯಕ್ತಿಯಾಗಿ ದೇಶಕ್ಕೆ ಬೇಕಾಗುವವನಾಗುತ್ತಾನೆ ಎಂದರು.

ಗಾಂಧೀಜಿ ಒಂದೇ ದಿವಸಕ್ಕೆ ಮಹಾತ್ಮರಾಗಿಲ್ಲ. ಅವರು ಇಂಗ್ಲೆಂಡ್‌ಗೆ ಹೋಗುವಾಗ ಅವರ ತಾಯಿ ಮಾಂಸ
ತಿನ್ನಬಾರದು, ಸರಾಯಿ ಕುಡಿಯಬಾರದು ಎಂದು ಉಪದೇಶ ಮಾಡಿದ್ದರು. ಅದನ್ನು ಮಹಾತ್ಮ ಗಾಂಧೀಜಿ ಚಾಚೂ ತಪ್ಪದೇ ಪಾಲಿಸಿದ್ದರು. ಕಾರಣ ಮನೆ ಶುದ್ಧವಾಗಿರಬೇಕು. ಆಗ ಅದೇ ಶಾಲೆಯಾಗುತ್ತರೆಂದರು.

ಶಾಲೆಗೆ ಕೇವಲ ಕಟ್ಟಡವಿದ್ದರೆ ಸಾಲದು. ಇಂದು ಹೊಸ ಜಗತ್ತು ಬಂದಿದೆ. ಜ್ಞಾನದ ಯಂತ್ರ ಕಿಸೆಯಲ್ಲಿದೆ.
ಅದರ ಸದುಪಯೋಗವಾಗಬೇಕು. ಶಾಲೆಯಲ್ಲಿ ಗಣಿತ, ಇಂಗ್ಲಿಷ್‌, ಕಂಪ್ಯೂಟರ್‌ ಮತ್ತು ವಿಜ್ಞಾನಗಳನ್ನು ಕಲಿಸುವ
ಶಿಕ್ಷಕರ ಅಗತ್ಯವಿದೆ. ಗ್ರಾಮದ ಮಕ್ಕಳು ದಡ್ಡರು, ಪಟ್ಟಣದ ಮಕ್ಕಳು ಜ್ಞಾನವಂತರು ಎಂದೇನೂ ಇಲ್ಲ. ಈ ಜಗತ್ತಿನಲ್ಲಿ
ಶ್ರೇಷ್ಠರೆನಿಸಿಕೊಂಡವರೆಲ್ಲ ಗ್ರಾಮದವರೇ ಎಂದು ನೆನಪಿಸಿದ ಅವರು, ಮಕ್ಕಳ ಭವಿಷ್ಯಕ್ಕೆ ಮನೆಯ ಪಾಠವೇ ಮುಖ್ಯ
ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗಾರ ಮಾತನಾಡಿ, ಆಸ್ಪತ್ರೆಗಳು ಮತ್ತು ಪೊಲೀಸ್‌ ಠಾಣೆ ಹೆಚ್ಚಾದರೆ ಅಭಿವೃದ್ಧಿಯಾದಂತಲ್ಲ. ಸಮಾಜದಲ್ಲಿ ಶಾಲೆಗಳು ಮತ್ತು ಶಿಕ್ಷಕರು ಹೆಚ್ಚಾದರೆ ಮಾತ್ರ ಅಭಿವೃದ್ಧಿಯಾದಂತೆ ಎಂದರು.

ಮರುಳಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಎಸ್‌. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಬಾಬು
ಗುರೂಜಿ, ಮಲ್ಲಿಕಾರ್ಜುನ ಹಿರೇಮಠ, ಆತ್ಮಾನಂದ ಶ್ರೀಗಳು, ಲಿಂಗಾನಂದ ಶ್ರೀಗಳು, ಕ್ಷೇತ್ರ ಶಿಕ್ಷಣಾಧಿಕಾರಿ
ಎಸ್‌.ಬಿ. ಬಿಂಗೇರಿ, ಎಸ್‌.ಬಿ. ಪಾಟೀಲ ಇದ್ದರು. ಆರ್‌.ವಿ. ಪಾಟೀಲ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next