Advertisement

“ಮನೆ -ಮನೆ’ಜಗಳ! ಮಕ್ಕಳ ಸಮೀಕ್ಷೆ: ಇಲಾಖೆಗಳ ಅಂತರ್‌ಕಲಹ

12:44 AM Dec 26, 2020 | mahesh |

ಬೆಂಗಳೂರು: ಹಳ್ಳಿಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು “ಮನೆ-ಮನೆ’ ಸಮೀಕ್ಷೆ ನಡೆಸುವ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ನಡುವೆ “ಮನೆ ಜಗಳ’ ನಡೆಯುತ್ತಿದೆ.

Advertisement

ಇಲಾಖೆಗಳ ನಡುವಿನ ಜಗಳಕ್ಕೆ ಕಾರಣ ಸಮೀಕ್ಷೆಗೆ ಅಂಗನ ವಾಡಿ ಕಾರ್ಯಕರ್ತೆಯರನ್ನು ನಿಯೋಜಿ ಸಿರು ವುದು. ಹೈಕೋರ್ಟ್‌ ಆದೇಶ ದಂತೆ ಮನೆ- ಮನೆ ಸಮೀಕ್ಷೆ ನಡೆಸಬೇಕಾಗಿದೆ ಎಂದು ಗ್ರಾಮೀಣಾಭಿ ವೃದ್ಧಿ ಇಲಾಖೆ ಹೇಳಿ ದರೆ, ನಮ್ಮ ಇಲಾಖೆಯ ಅಧೀನದಲ್ಲಿ ಬರುವ ಅಂಗನ ವಾಡಿ ಕಾರ್ಯಕರ್ತೆಯರನ್ನು ಈ ಸಮೀಕ್ಷೆಗೆ ನಿಯೋಜಿಸಿರುವುದು ನಮ್ಮ ಗಮನಕ್ಕೇ ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳುತ್ತಿದೆ. ಇದರ ನಡುವೆ ನಮ್ಮದಲ್ಲದ ಕೆಲಸಕ್ಕೆ ನಮ್ಮನ್ನು ಯಾಕೆ ನಿಯೋಜಿಸಿದ್ದೀರಿ ಎಂದು ಕಾರ್ಯಕರ್ತೆಯರು ಪ್ರಶ್ನಿಸತೊಡಗಿದ್ದಾರೆ.

ಇಲಾಖೆಗಳ ನಡುವಿನ ಗೊಂದಲ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಿಂದೇಟು ಹಾಕುತ್ತಿರುವುದರ ಪರಿಣಾಮ ಮಕ್ಕಳನ್ನು ಗುರುತಿಸುವ ಸಮೀಕ್ಷೆಗೆ ಗರ ಬಡಿದಂತಾಗಿದೆ. ಡಿ. 15ರಿಂದ ಮನೆ-ಮನೆ ಸಮೀಕ್ಷೆ ಆರಂಭಗೊಂಡು 2021ರ ಜ. 15ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಆರಂಭವಾಗಿಲ್ಲ.

ಶಿಕ್ಷಕರ ಕೆಲಸ ನಮ್ಮ ಹೆಗಲಿಗೇಕೆ?
ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಶಿಕ್ಷಣ ಇಲಾಖೆ ಜವಾಬ್ದಾರಿ, ಅದನ್ನು ಶಿಕ್ಷಕರು ಮಾಡಬೇಕು. ಈಗಾಗಲೇ ಕೊರೊನಾ ಹಿನ್ನೆಲೆ ಯಲ್ಲಿ ಅನೇಕ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಈಗ ಹೆಚ್ಚುವರಿಯಾಗಿ ಸಮೀಕ್ಷೆ ಕಾರ್ಯ ನೀಡ ಲಾಗಿದೆ. ಇದು ಸರಿಯಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳುತ್ತಿದ್ದಾರೆ.

ನಿರ್ದೇಶನಗಳ ಗೊಂದಲ
2019ರ ಡಿಸೆಂಬರ್‌ನಲ್ಲಿ ಸಮೀಕ್ಷೆ ನಡೆಸುವುದಾಗಿ ಸರಕಾರ ಹೈಕೋರ್ಟ್‌ಗೆ ಭರವಸೆ ಕೊಟ್ಟಿದ್ದರೂ ಕೊರೊನಾದಿಂದಾಗಿ ನನೆಗುದಿಗೆ ಬಿದ್ದಿತ್ತು. 0-18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸುವುದು ಸ್ಥಳೀಯ ಸಂಸ್ಥೆ (ಗ್ರಾ.ಪಂ)ಗಳ ಜವಾಬ್ದಾರಿ ಎಂದು ಹೇಳಿದ್ದ ಹೈಕೋರ್ಟ್‌, ಸಮೀಕ್ಷೆಗೆ ಶಿಕ್ಷಕರನ್ನು ಬಳಸಬಾರದು ಎಂದು 2019ರ ಡಿ. 18ರ ಆದೇಶದಲ್ಲಿ ಹೇಳಿತ್ತು. ಆದರೆ ಯೋಜಿತ ಕಾರ್ಯಕ್ರಮಗಳಿಗಲ್ಲದೆ ಬೇರೆ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಬಾರದು ಎಂದು ನ್ಯಾ| ಎನ್‌.ಕೆ. ಪಾಟೀಲ್‌ ಸಮಿತಿ 2013ರಲ್ಲಿ ಹೇಳಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಇದೇ ನಿಲುವು ಹೊಂದಿವೆ. ಈ ಇಬ್ಬಗೆಯ ಆದೇಶ, ನಿಲುವು ಕೂಡ ಗೊಂದಲಕ್ಕೆ ಕಾರಣವಾಗಿವೆ.

Advertisement

ಹೈಕೋರ್ಟ್‌ ಆದೇಶದಂತೆ 0-18 ವರ್ಷದೊಳಗಿನ ಮಕ್ಕಳನ್ನು ಗುರುತಿಸಲು ಮನೆ-ಮನೆ ಸಮೀಕ್ಷೆ ಕಾರ್ಯ ನಡೆಸಲಾಗು ತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ದೂರುಗಳು ನಮ್ಮ ಗಮನಕ್ಕೆ ಬಂದಿಲ್ಲ.
-ಎಲ್‌.ಕೆ. ಅತೀಕ್‌, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ

ಅಂಗನವಾಡಿ ಕಾರ್ಯಕರ್ತೆಯರನ್ನು ಸಮೀಕ್ಷೆಗೆ ಗ್ರಾಮೀಣಾಭಿ ವೃದ್ಧಿ ಇಲಾಖೆ ನಿಯೋಜಿಸಿರುವುದು ಗಮನಕ್ಕೆ ಬಂದಿಲ್ಲ.
– ಪೆದ್ದಪ್ಪಯ್ಯ, ಆಯುಕ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಸಮೀಕ್ಷೆಯಿಂದ ನಮ್ಮನ್ನು ಕೈಬಿಡದಿದ್ದರೆ ಕಾನೂನು ಹೋರಾಟದ ಜತೆಗೆ ಬೀದಿ ಹೋರಾಟ ನಡೆಸಲಾಗುವುದು.
-ಎಂ. ಜಯಮ್ಮ , ಪ್ರ. ಕಾರ್ಯದರ್ಶಿ,  ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟ

 ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next