Advertisement

‘ಗೃಹ ರಕ್ಷಕರು ಪೊಲೀಸ್‌ ಇಲಾಖೆಯ ಭಾಗವಾಗಲಿ’

10:12 AM Apr 11, 2018 | Team Udayavani |

ಮೇರಿಹಿಲ್‌ : ಗೃಹ ರಕ್ಷಕರು ಪೊಲೀಸ್‌ ಇಲಾಖೆಯ ಭಾಗವಾಗಿ ಕೆಲಸ ಮಾಡಬೇಕು. ಸುಸೂತ್ರವಾಗಿ ಚುನಾವಣೆ ನಡೆಸುವ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ವಿ. ಜೆ. ಸಜಿತ್‌ ಹೇಳಿದರು. ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯಲ್ಲಿ ನಡೆದ ಘಟಕಾಧಿಕಾರಿಗಳ ಸಭೆಯಲ್ಲಿ ಅವರು ಮಂಗಳವಾರ ಮುಖ್ಯ ಅತಿಥಿಯಾಗಿದ್ದರು.

Advertisement

ಗೃಹ ರಕ್ಷಕದಳ ಸಿಬಂದಿ ಬಂದೋಬಸ್ತ್ ಮುಂತಾದ ಕಠಿನ ಸಂದರ್ಭಗಳಲ್ಲಿ ಪೊಲೀಸರೊಂದಿಗೆ ಸಹಕರಿಸಿ ಪ್ರಾಮಾಣಿಕ ಕೆಲಸ ಮಾಡುತ್ತಾರೆ. ನಮ್ಮ ಜಿಲ್ಲೆಯಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದ ಮೇ 12 ರಂದು ನಡೆಯುವ ಚುನಾವಣೆ ಕರ್ತವ್ಯಕ್ಕೆ 650-700 ಮಂದಿ ಗೃಹ ರಕ್ಷಕರನ್ನು ನಿಯೋಜಿಸಲು ಕೇಳಲಾಗಿದೆ. ಅದರಂತೆ ಗೃಹ ರಕ್ಷಕದಳದ ಪ್ರಮುಖರು ಸಹಕರಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 982 ಬೂತ್‌ಗಳಿದ್ದು, ಪ್ರತಿ ಬೂತ್‌ಗೂ ಪೊಲೀಸರೊಂದಿಗೆ ಓರ್ವ ಗೃಹ ರಕ್ಷಕನ ಸೇವೆ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಮಂಗಳೂರಿನಿಂದ 111 ಮಂದಿ
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹ ರಕ್ಷಕ ದಳ ಸಮಾದೇಷ್ಟ ಡಾ| ಮುರಳೀ ಮೋಹನ್‌ ಚೂಂತಾರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಗೃಹ ರಕ್ಷಕರು ಪೊಲೀಸರೊಂದಿಗೆ ಮುಖ್ಯ ಭೂಮಿಕೆಯಲ್ಲಿರುತ್ತಾರೆ. ಈ ಬಾರಿ ಚುನಾವಣಾ ಕರ್ತವ್ಯಕ್ಕೆ ಜಿಲ್ಲೆಯಿಂದ 800 ಮಂದಿ ಗೃಹ ರಕ್ಷಕರನ್ನು ನೇಮಿಸಲಾಗಿದ್ದು, ಮಂಗಳೂರಿನಿಂದ 111 ಮಂದಿ ತೆರಳಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಗೃಹ ರಕ್ಷಕರಿಗೆ ಗುರುತಿನ ಚೀಟಿಯನ್ನೂ ಕಡ್ಡಾಯವಾಗಿ ಧರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಂಚೆ ಮೂಲಕ ಮತದಾನದ ವ್ಯವಸ್ಥೆ
ಚುನಾವಣಾ ಕರ್ತವ್ಯಕ್ಕೆಂದು ಜಿಲ್ಲೆಯ ವಿವಿಧ ಬೂತ್‌ಗಳಿಗೆ ತೆರಳುವ ಗೃಹ ರಕ್ಷಕರಿಗೆ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ, ಗೃಹ ರಕ್ಷಕರಿಗೆ ಅಂಚೆ ಮೂಲಕ ಮತದಾನದ ವ್ಯವಸ್ಥೆ ಮಾಡಲಾಗಿದೆ ಎಂದರು. ಉಷಾ, ಅನಿತಾ ಉಪಸ್ಥಿತರಿದ್ದರು. ಉಪ ಸಮಾದೇಷ್ಟ ರಮೇಶ್‌ ಸ್ವಾಗತಿಸಿದರು. ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ
ಜಯಾನಂದ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next