Advertisement
ಸ್ವಾತಂತ್ರ‍್ಯ ದೊರೆತ ನಂತರ ದೇಶದಲ್ಲಿ ಅರಾಜಕತೆ ಉಂಟಾಗಿತ್ತು. ಆಗ ಪೊಲೀಸ್ ಸಿಬ್ಬಂದಿಯ ಜೊತೆಗೆ ನೆರವಾಗುವ ನಿಟ್ಟಿನಲ್ಲಿ ಸೇವಾ ಮನೋಭಾವನೆಯನ್ನು ಹೊಂದಿರುವ ಯುವಕರ ಪಡೆಯನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಂದಿನ ಮಹಾರಾಷ್ಟ್ರ ಪ್ರಾಂತದ ಗೃಹ ಮಂತ್ರಿಗಳಾಗಿದ್ದ ಮೂರಾರ್ಜಿ ದೇಸಾಯಿ ಸೂಚಿಸಿದರು. ಆಗ ಜಿಲ್ಲೆ, ತಾಲ್ಲೂಕು ಹಾಗೂ ಪ್ರತಿಯೊಂದು ಊರುಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಯಿತು. ಅದರ ಪರಿಣಾಮವಾಗಿ 1948 ರಲ್ಲಿ ಪ್ರಥಮ ಬಾರಿಗೆ ಬನಹಟ್ಟಿಯಲ್ಲಿ ಗೃಹ ರಕ್ಷಕ ದಳವು ಕಾರ್ಯ ಆರಂಭಿಸಿತು.ದಂಗೆ, ರಾಜಕೀಯ, ಪ್ರತಿಭಟನೆ, ಸಂತೆ, ಜಾತ್ರೆ, ಉತ್ಸವ, ಕ್ರೀಡೆ, ಸಾಂಸ್ಕೃತಿಕ, ಪ್ರವಾಹ, ಅಗ್ನಿ ಅನಾಹುತ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಗೃಹ ರಕ್ಷದ ದಳದವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕಾರ್ಯ ಮಾಡತೊಡಗಿದರು.
Related Articles
Advertisement
ಮುಂದಿನ ದಿನಗಳಲ್ಲಿ ಬೇರೆ ಊರುಗಳು ಸದಸ್ಯರು ಇದರಲ್ಲಿ ಭಾಗವಹಿಸದೆ ಇರುವುದರಿಂದ ಈಗ ಬನಹಟ್ಟಿಯವರು ಮಾತ್ರ ಇದ್ದಾರೆ. ತರಬೇತಿ ಪಡೆದುಕೊಂಡವರಲ್ಲಿ ಬನಹಟ್ಟಿಯ ಸೋಪಾನ ಕೋಪರ್ಡೆ, ಗುರುನಿಂಗಪ್ಪ ಹಟ್ಟಿ, ರುದ್ರಪ್ಪ ಮಂಡಿ, ಆಸಂಗಿಯ ಚನ್ನಪ್ಪ ಫಕೀರಪೂರ, ರಾಮಪುರದ ಗೊಲಭಾವಿ, ಜಗದಾಳದ ಗೊಬ್ಬಾಣಿ ಶೆಟ್ಟರು ಹೊಸೂರಿನ ಲೆಂಡಿಯವರು ಇದನ್ನು ಮುಂದುವರೆಸಿಕೊಂಡು ಬಂದರು. ಇವರ ನಂತರ ಗೃಹ ರಕ್ಷಕ ದಳಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ತಂದು ಕೊಟ್ಟವರು ರಾಜಶೇಖರ ಮಾಲಾಪುರ. ಅಂದಿನ ದಿನಗಳಲ್ಲಿ ವಾರದ ಪರೆಡ್ನಲ್ಲಿ ಭಾಗವಹಿಸಿದವರಿಗೆ 4 ಅಣೆ ಭತ್ಯೆ ಹಾಗೂ ಭತ್ಯೆಯಾಗಿ ರೂ. 1 ನೀಡಲಾಗುತ್ತಿತ್ತು. ಇದರಿಂದಾಗಿ ಕಡಿಮೆಯಾಗಿದ್ದ ಸದಸ್ಯರ ಸಂಖ್ಯೆ ಮಾಲಾಪುರ ಅವರ ಅವಧಿಯಲ್ಲಿ 80 ಕ್ಕೆ ಏರಿತು. ರಾಜಶೇಖರ ಮಾಲಾಪುರ ನೇತೃತ್ವದಲ್ಲಿ ಸ್ಥಳೀಯ ಎಸ್‌ಆರ್‌ಎ ಮೈದಾನದಲ್ಲಿ ಗೃಹ ರಕ್ಷಕ ದಳದವರ ಪರೆಡ್ ನೋಡುವುದೇ ಒಂದು ಹಬ್ಬವಾಗಿತ್ತು. ಮಾಲಾಪುರ ನಂತರ ಶಿಕ್ಷಕ ಶಂಕರ ಚೆನಾಳ, ನೇಕಾರ ವೃತ್ತಿಯ ಮಲ್ಲಪ್ಪ ಸವದಿ, ಶಾಲೆಯ ಗುಮಾಸ್ತ ಪ್ರಕಾಶ ಕಾಲತಿಪ್ಪ, ಸದ್ಯ ಈಶ್ವರ ಗೆದ್ದೆಪ್ಪನವರ ಗೃಹ ರಕ್ಷಕ ದಳದ ಮುಖ್ಯಸ್ಥರಾಗಿದ್ದಾರೆ.
1996-97 ನೇ ಸಾಲಿನಲ್ಲಿ ಗೃಹ ರಕ್ಷಕ ದಳವು ತನ್ನದೆ ಆದ ಬ್ಯಾಂಡ್ ಹೊಂದಿತು. ಈ ಬ್ಯಾಂಡ್ ಕರ್ನಾಟಕದ ಪ್ರಮುಖ ಬ್ಯಾಂಡ್ಗಳಲ್ಲಿ ಒಂದಾಗಿದೆ. ಇವರು ನುಡಿಸುವ ಸಾರೆ ಜಹಾಸೆ ಅಚ್ಛ ಎಂಬ ಹಾಡು ಬಹಳಷ್ಟು ಆಕರ್ಷಕವಾಗಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಗೃಹ ರಕ್ಷಕ ದಳದ ಕ್ರೀಡಾಕೂಟದಲ್ಲಿ ಇಲ್ಲಿಯ ಸದಸ್ಯರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಕೂಡಾ ವಿಶೇಷವಾಗಿದೆ.
ಇದನ್ನೂ ಓದಿ : ಗಡಿಯಾರ : ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಬಾಲಕ ಸಾವು
ಮೂರು ದಶಕಗಳ ಹಿಂದೆಯೇ ಇಲ್ಲಿ ಮಹಿಳಾ ಗೃಹ ರಕ್ಷಕ ದಳ ಸ್ಥಾಪನೆಯಾಯಿತು. ಸದ್ಯ 20 ಮಹಿಳೆಯರು ಇದ್ದಾರೆ.
ಸ್ಥಳೀಯ ಗೃಹ ರಕ್ಷಕ ದಳದ ಜಿ.ಎಂ.ಬರಗಿಯವರು ರಾಷ್ಟ್ರಪತಿಗಳ ಜೀವನ ರಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈಗಿನ ಮುಖ್ಯಸ್ಥ ಈಶ್ವರ ಗೆದ್ದೆಪ್ಪನವರ ತಳ್ಳುವ ಗಾಡಿಯಲ್ಲಿ ರಸ್ತೆಯ ಬೀದಿಯಲ್ಲಿ ನಿಂತುಕೊಂಡು ಸಿಹಿ ಮತ್ತು ಖಾರದ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ಅತ್ಯಂತ ದಕ್ಷತೆ, ಶಿಸ್ತು ಬದ್ಧವಾಗಿ ದಳವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.
ಪ್ರವಾಹದ ಸಂದರ್ಭದಲ್ಲಿ ಜನ ಮತ್ತು ಜಾನುವಾರುಗಳ ಜೀವ ರಕ್ಷಣೆ ಮತ್ತು ಅಗ್ನಿ ಅನಾಹುತ ಸಂದರ್ಭದಲ್ಲಿ ಅವರು ಸಲ್ಲಿಸಿದ ಸೇವೆಗಾಗಿ ಎರಡು ಬಾರಿ ರಾಷ್ಟ್ರಪತಿಗಳ ಸೇವಾ ಪದಕ ಮತ್ತು ಒಂದು ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಸ್ಥಳೀಯ ಗೃಹ ರಕ್ಷಕ ದಳದ ಸದಸ್ಯರಲ್ಲಿ ಬಹುತೇಕರು ನೇಕಾರರು, ಕಮ್ಮಾರರು, ಬಡಿಗರು, ರೈತರೆ ಇದ್ದು ಯಾವುದೆ ಪ್ರತಿಫಲವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವುದು ಅವರ ಸೇವಾ ಮನೋಭಾವನೆಯನ್ನು ಮೆಚ್ಚಲೇಬೇಕು. ಕೋವಿಡ್ ಸಂದರ್ಭದಲ್ಲಿ ಇವರ ಕರ್ತವ್ಯ ನಿರ್ವಹಣೆಯೂ ಕೂಡಾ ಮುಖ್ಯವಾಗಿತ್ತು.
– ಕಿರಣ ಶ್ರೀಶೈಲ ಆಳಗಿ