ದಾಂಡೇಲಿ : ನಗರದ ಗೃಹ ರಕ್ಷಕ ದಳದ ಘಟಕಾಧಿಕಾರಿ ತನ್ನ ಮನೆಗೆ ಹೋಗುತ್ತಿರುವಾಗ ಹಳೆ ಟಿ.ಆರ್.ಟಿ ವಸತಿ ಪ್ರದೇಶದಲ್ಲಿ ಇಬ್ಬರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆ ಮಂಗಳವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ನಗರದ ಗೃಹ ರಕ್ಷಕ ದಳದ ಘಟಕಾಧಿಕಾರಿ ಧನಾಜಿ ಭಂಡು ಕಾಂಬಳೆ ಎಂಬವರೇ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ವ್ಯಕ್ತಿಯಾಗಿದ್ದಾರೆ. ಪೊಲೀಸ್ ಠಾಣೆಗೆ ಅವರು ನೀಡಿದ ದೂರಿನಲ್ಲಿ ತಾನು ಕೆಲಸ ಮುಗಿಸಿ ಹಳೆ ಟಿ.ಆರ್.ಟಿಯಲ್ಲಿರುವ ತನ್ನ ಮನೆಗೆ ಹೋಗುತ್ತಿರುವಾಗ ಮನೆಯ ಮುಂಭಾಗದಲ್ಲೆ ಸ್ಥಳೀಯ ನಿವಾಸಿಗಳಾದ ಸತೀಶ್ ಚೌವ್ಹಾಣ್ ಮತ್ತು ಸರಸ್ವತಿ ಚೌವ್ಹಾಣ್ ಎಂಬಿಬ್ಬರು ಸೇರಿ ಅಡ್ಡಗಟ್ಟಿ ನಿಲ್ಲಿಸಿ, ನೀನು ಗೃಹರಕ್ಷಕ ದಳ ಅಧಿಕಾರಿ ಎಂದು ಬೇಕಾದವರಿಗೆ ಕೆಲಸ ಕೊಡಿಸುತ್ತೀಯಾ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ, ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಶರ್ಟನ್ನು ಹಿಡಿದು ಕೈಯಿಂದ ಮುಖಕ್ಕೆ ಹೊಡೆದ ನಂತರ ಸತೀಶ್ ಚೌವ್ಹಾಣ್ ಎಂಬಾತನು ಅಲ್ಲೆ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಹೊಟ್ಟೆಗೆ ಮತ್ತು ಭುಜಕ್ಕೆ ಹೊಡೆಯಲು ಬಂದಾಗ ತಕ್ಷಣವೆ ಪತ್ನಿ ಕಲ್ಪನಾ ಕಾಂಬಳೆಯವರು ನನ್ನ ಪತಿಯವರಿಗೆ ಯಾಕೆ ಹೊಡಿಯುತ್ತೀರಾ ಎಂದು ಕೇಳಿದ್ದಕ್ಕೆ ಆನಂತರ ಅವರಿಬ್ಬರು ಕಲ್ಪನಾ ಕಾಂಬಳೆಯವರ ತಲೆಕೂದಲನ್ನು ಹಿಡಿದು ಎಳೆದು ಕೈಯಿಂದ ಹೊಡೆದಿದ್ದಲ್ಲದೇ, ಅವಮಾನ ಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ತನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆಯನ್ನೊಡ್ಡಿದ್ದಾರೆ ಎಂದು ದೂರಿನಲ್ಲಿ ಧನಾಜಿ ಕಾಂಬಳೆಯವರು ವಿವರಿಸಿದ್ದಾರೆ.
ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ 323, 324, 341, 354(ಬಿ), 504, 506 ಸಹಿತ 34 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡು ನಗರ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: ದಾಂಡೇಲಿ, ಕಾರವಾರದಲ್ಲಿ ‘ಸಾಹಿತ್ಯ ಭವನ’ : ಕೇಂದ್ರ ಕಸಾಪ ಸಮ್ಮತಿ