ನವದೆಹಲಿ: ಪ್ರಸಕ್ತ ವರ್ಷದ ಸ್ವಾತಂತ್ರ್ಯ ದಿನಕ್ಕೆ ಮೊದಲ ಬಾರಿಗೆ ದೇಶಿಯವಾಗಿ ವಿನ್ಯಾಸಗೊಳಿಸಲಾಗಿರುವ ಎಟಿಎಜಿಎಸ್ ಗನ್ ಅನ್ನು ಗೌರವ ವಂದನೆ ನೀಡಲು ಬಳಕೆ ಮಾಡಲಾಗುತ್ತದೆ. ಕೇಂದ್ರ ರಕ್ಷಣಾ ಖಾತೆ ಕಾರ್ಯದರ್ಶಿ ಅಜಯ ಕುಮಾರ್ ಬುಧವಾರ ಈ ಮಾಹಿತಿ ನೀಡಿದ್ದಾರೆ.
ಇದುವರೆಗೆ ಬ್ರಿಟೀಷರ ಅವಧಿಯಲ್ಲಿ ನಿರ್ಮಿಸಲಾಗಿದ್ದ ಗನ್‌ಗಳ ಮೂಲಕ ಸಾಂಪ್ರದಾಯಿಕ 21 ಗನ್ ಸೆಲ್ಯೂಟ್ ನೀಡಲು ಬಳಕೆ ಮಾಡಲಾಗುತ್ತಿತ್ತು. ಪ್ರಸಕ್ತ ವರ್ಷದಿಂದ ಆ ಪದ್ಧತಿಗೆ ವಿದಾಯ ಹೇಳಲು ನಿರ್ಧರಿಸಲಾಗಿದೆ.
ಡಿಆರ್‌ಡಿಒ ಅದನ್ನು ಸಂಶೋಧಿಸಿ, ಅಭಿವೃದ್ಧಿಗೊಳಿಸಿದೆ ಎಂದು ಕಾರ್ಯದರ್ಶಿ ವಿವರಿಸಿದ್ದಾರೆ.
ಈ ವರ್ಷದ ಸ್ವಾತಂತ್ರ್ಯ ದಿನ ಕಾರ್ಯಕ್ರಮಕ್ಕೆ ಕೂಡ ಸಾಮಾನ್ಯರನ್ನು ಅತಿಥಿಗಳನ್ನಾಗಿ ಆಹ್ವಾನಿಸುವ ಪದ್ಧತಿ ಮುಂದುವರಿಯಲಿದೆ. ರಸ್ತೆ ಬದಿಯಲ್ಲಿ ಮಾರಾಟಗಾರರು, ಶವಸಂಸ್ಕಾರ ಕೇಂದ್ರಗಳಲ್ಲಿ ಕೆಲಸ ಮಾಡುವವರು, ಅಂಗನವಾಡಿ ಕಾರ್ಯಕರ್ತರು, ಮುದ್ರ ಯೋಜನೆಯ ಫಲಾನುಭವಿಗಳನ್ನು ಆಹ್ವಾನಿಸಲಾಗುತ್ತದೆ ಎಂದು ಕೇಂದ್ರ ರಕ್ಷಣಾ ಖಾತೆ ಕಾರ್ಯದರ್ಶಿ ಅಜಯ ಕುಮಾರ್ ತಿಳಿಸಿದ್ದಾರೆ.
ಇದರ ಜತೆಗೆ ಮಾರಿಷಿಯಸ್, ಅರ್ಜೆಂಟೀನಾ, ಸೆಷೆಲ್ಸ್, ಯುಎಇ, ಫಿಜಿ, ಇಂಡೋನೇಷ್ಯಾ, ಮಾಲ್ಡೀವ್ಸ್, ನೈಜೀರಿಯಾ, ಬ್ರೆಜಿಲ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್‌ಗಳ ಯುವ ಕೆಡೆಟ್‌ಗಳನ್ನು ಆ.15ರ ಸ್ವಾತಂತ್ರ್ಯ ದಿನಕ್ಕೆ ಆಹ್ವಾನಿಸಲಾಗಿದೆ ಎಂದರು.