ಸಸಿಹಿತ್ಲು: ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದಕ್ಕೆ ಬೆಂಕಿ ಹರಡಿ, ಮನೆಗೆ ಸಾಕಷ್ಟು ಹಾನಿಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಹಳೆಯಂಗಡಿ ಗ್ರಾಮ ಪಂಚಾಯತ್ ಬಳಿಯ ಸಸಿಹಿತ್ಲುವಿನ ಮುಂಡ ಬೀಚ್ ಬಳಿಯ ಮುಂಡದಾಂಡಿ ಮನೆಯ ಪದ್ಮನಾಭ ಅಂಚನ್ ಅವರ ಮನೆಯಲ್ಲಿ ಅಡುಗೆ ಕೋಣೆಯಲ್ಲಿದ್ದ ಫ್ರಿಡ್ಜ್ ನಿಂದ ಹರಿದ ಬೆಂಕಿ ಅದು ಮನೆಯ ಸಂಪೂರ್ಣವಾಗಿ ವಿದ್ಯುತ್ ತಂತಿಗೆ ಹರಡಿ ಮನೆಯ ಮೇಲ್ಛಾವಣಿಗೆ ಹಬ್ಬಿ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ.
ಪೈಂಟರ್ ವೃತ್ತಿಯನ್ನು ನಡೆಸುತಿ ¤ರುವ ಪದ್ಮನಾಭ ಸಹಿತ ಮನೆಯಲ್ಲಿ ಅವರ ಪತ್ನಿ ಸ್ಥಳೀಯ ಕಾರ್ಖಾನೆಯಲ್ಲಿ ಕೂಲಿ ಕೆಲಸದಲ್ಲಿರುವ ಶಶಿಕಲಾ ಸಹಿತ ಇಬ್ಬರು ಮಕ್ಕಳಾದ ಧಿಧೀರಜ್ ಮತ್ತು ದೀಕ್ಷಿತ್ ಇದ್ದು ಇವರೆಲ್ಲ ಘಟನೆಯ ಸಂದರ್ಭ ಕೆಲಸಕ್ಕೆಂದು ಬೆಳಿಗ್ಗೆ ಮನೆಯಿಂದ ತೆರಳಿದ್ದರು. ಮೇಲ್ಛಾವಣಿ ಸಹಿತ ಹೊತ್ತಿ ಉರಿದ ಬೆಂಕಿಯನ್ನು ನಂದಿಸಲು ಬೀಗ ಹಾಕಿದ ಮನೆಯನ್ನು ರಕ್ಷಿಸಲು ಸ್ಥಳೀಯರು ಸಾಕಷ್ಟು ಪರದಾಡಿದರು. ಸ್ಥಳೀಯರಾದ ಸಂತೋಷ್ ಹಾಗೂ ಧನ್‌ರಾಜ್ ಅವರು ನೇರವಾಗಿ ಮೆಲ್ಛಾವಣಿಯನ್ನು ಹತ್ತಿ ಅಡುಗೆ ಕೋಣೆಯಲ್ಲಿದ್ದ ಅಡುಗೆ ಅನಿಲದ ಸಿಲಿಂಡರ್‌ನ್ನು ಸುರಕ್ಷಿತವಾಗಿ ಹೊರತಂದಿದ್ದರಿಂದ ಇನ್ನಷ್ಟು ಅನಾಹುತ ತತ್‌ಕ್ಷಣಕ್ಕೆ ತಪ್ಪಿತ್ತು. ಬೆಂಕಿಯು ಮನೆಯ ಗೋಡೆ, ಫ್ಯಾನ್, ಮೆಲ್ಛಾವಣಿಯೆ ಪಕ್ಕಾಸು, ರೀಪುಗಳ ಸಹಿತ ಮತ್ತಿತರ ವಸ್ತುಗಳನ್ನು ಸುಟ್ಟು ಕರಟಿ ಹೋಗಿವೆ.
ಅಗ್ನಿಶಾಮಕ ದಳದ ಸಿಬಂದಿಗ ಬಂದು ಬೆಂಕಿಯನ್ನು ನಂದಿಸಿದರು. ಕನಿಷ್ಠ 3 ಲಕ್ಷ ರೂ. ಹಾನಿ ಉಂಟಾಗಿದೆ ಎನ್ನಲಾಗಿದೆ. ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಅಶೋಕ್, ಚಂದ್ರಕುಮಾರ್, ಅನಿಲ್ ಸಹಿತ ಸ್ಥಳೀಯರು ಬೆಂಕಿ ನಂದಿಸಲು ಶ್ರಮಿಸಿದರು.
ಸ್ಥಳಕ್ಕೆ ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಹಳೆಯಂಗಡಿ ಪಂ.ನ ಸದಸ್ಯರಾದ ಎಚ್.ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ಸುರತ್ಕಲ್‌ನ ಹೆಡ್‌ಕಾನ್ಸ್‌ಟೇಬಲ್ ಬಸವರಾಜ್ ನಾಯ್ಕ, ಮೂಲ್ಕಿಯ ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕಕರ್, ಗ್ರಾಮ ಕರಣಿಕ ಮೋಹನ್, ಸಹಾಯಕ ನವೀನ್ ಮತ್ತಿತರರು ಭೇಟಿ ನೀಡಿದ್ದಾರೆ. ಬಡ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರವನ್ನು ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಮೊಬೈಲ್ ಕೂಡ ಬೆಂಕಿಗಾಹುತಿ!
ಪದ್ಮನಾಭ ಅಂಚನ್ ಅವರ ಪುತ್ರ ದೀಕ್ಷಿತ್ ಐಟಿಐ ಶಿಕ್ಷಣ ಪಡೆದಿದ್ದು, ಆತನಿಗೆ ಕಂಪೆನಿಯೊಂದರಿಂದ ಕೆಲಸಕ್ಕಾಗಿ ಮೊಬೈಲ್ ಸಂದೇಶ ಬಂದಿದ್ದು ಆ ಮೊಬೈಲ್ ಬೆಂಕಿಗಾಹುತಿಯಾಗಿದ್ದು ಮನೆಯ ಅವಶೇಷಗಳ ನಡುವೆ ಹುಡುಕಾಟ ನಡೆಸುತ್ತಿದ್ದುದು ಮನ ಕಲಕುವಂತಿತ್ತು.